ಅಭಿವೃದ್ಧಿ ಕಾರ್ಯಗಳಿಂದ ರಾಜ್ಯ ವಂಚಿತ: ಹಾಲಪ್ಪ ಆರೋಪ

| Published : Oct 22 2024, 12:18 AM IST

ಸಾರಾಂಶ

ಜಿಲ್ಲೆಯಲ್ಲೇ ಯಲಬುರ್ಗಾ ತಾಲೂಕು ಬಿಜೆಪಿ ಸದಸ್ಯತ್ವ ನೋಂದಣಿಯಲ್ಲಿ ಮುಂಚೂಣಿಯಲ್ಲಿದ್ದು, ಇನ್ನೂ ೫೦ ಸಾವಿರ ಸದಸ್ಯತ್ವ ನೋಂದಣಿ ಕಾರ್ಯಕ್ಕೆ ಪಕ್ಷದ ಎಲ್ಲ ಕಾರ್ಯಕರ್ತರು ಶಕ್ತಿಮೀರಿ ಶ್ರಮಿಸಬೇಕು.

ಬಿಜೆಪಿ ಸದಸ್ಯತ್ವ ಅಭಿಯಾನ ೨೦೨೪ರ ವಿಶೇಷ ಸಭೆಗೆ ಚಾಲನೆ ನೀಡಿದ ಮಾಜಿ ಸಚಿವ

ಕನ್ನಡಪ್ರಭ ವಾರ್ತೆ ಯಲಬುರ್ಗಾ

ಜಿಲ್ಲೆಯಲ್ಲೇ ಯಲಬುರ್ಗಾ ತಾಲೂಕು ಬಿಜೆಪಿ ಸದಸ್ಯತ್ವ ನೋಂದಣಿಯಲ್ಲಿ ಮುಂಚೂಣಿಯಲ್ಲಿದ್ದು, ಇನ್ನೂ ೫೦ ಸಾವಿರ ಸದಸ್ಯತ್ವ ನೋಂದಣಿ ಕಾರ್ಯಕ್ಕೆ ಪಕ್ಷದ ಎಲ್ಲ ಕಾರ್ಯಕರ್ತರು ಶಕ್ತಿಮೀರಿ ಶ್ರಮಿಸಬೇಕು ಎಂದು ಮಾಜಿ ಸಚಿವ ಹಾಲಪ್ಪ ಆಚಾರ ಹೇಳಿದರು.

ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಭಾನುವಾರ ತಾಲೂಕಾ ಬಿಜೆಪಿ ಮಂಡಲ ವತಿಯಿಂದ ನಡೆದ ಬಿಜೆಪಿ ಸದಸ್ಯತ್ವ ಅಭಿಯಾನ ೨೦೨೪ರ ವಿಶೇಷ ಸಭೆಗೆ ಚಾಲನೆ ನೀಡಿ ಮಾತನಾಡಿದರು.ಈಗಾಗಲೇ ೨೭ ಸಾವಿರದಷ್ಟು ಸದಸ್ಯತ್ವ ನೊಂದಣಿ ಮಾಡಲಾಗಿದ್ದು, ಜಿಲ್ಲೆಯಲ್ಲೇ ಪ್ರಥಮ ಸ್ಥಾನದಲ್ಲಿದೆ. ಇನ್ನೂ ಹೆಚ್ಚು ಸದಸ್ಯತ್ವ ಮಾಡಿಸುವ ಮೂಲಕ ೫೦ ಸಾವಿರ ಗುರಿಯನ್ನಿಟ್ಟುಕೊಂಡು ಪಕ್ಷದ ಕಾರ್ಯಕರ್ತರು, ಮುಖಂಡರು, ಅಭಿಮಾನಿಗಳು, ನಾನಾ ಸಂಘಟನೆಗಳ ಸರ್ವ ಪದಾಧಿಕಾರಿಗಳು ಮುಂದಾಗಬೇಕು ಎಂದರು.

ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದುವರೆ ವರ್ಷವಾದರೂ ರಾಜ್ಯದಲ್ಲಿ ಯಾವುದೇ ಹೊಸ ಯೋಜನೆಗಳಿಲ್ಲ. ಅಭಿವೃದ್ಧಿ ಕಾರ್ಯಗಳಿಂದ ರಾಜ್ಯ ವಂಚಿತಗೊಂಡಿದೆ. ಮುಡಾ ಹಗರಣದಲ್ಲಿ ಸಿಎಂ ಸಿದ್ದಾಮಯ್ಯನವರು ತಮ್ಮ ಪತ್ನಿ ಹೆಸರಿನಲ್ಲಿ ಅಕ್ರಮ ೧೪ ಸೈಟ್‌ಗಳನ್ನು ಪಡೆದುಕೊಂಡು ಮರಳಿ ನೀಡುವ ಮೂಲಕ ಅಕ್ರಮದಲ್ಲಿ ಸಿಲುಕಿಕೊಂಡಿದ್ದಾರೆ. ಮಹರ್ಷಿ ವಾಲ್ಮೀಕಿ ನಿಗಮದಲ್ಲಿ ಕೋಟ್ಯಂತರ ಹಣವನ್ನು ಕಾಂಗ್ರೆಸ್ ಸಂಡೂರು ಲೋಕಸಭಾ ಚುನಾವಣೆಗೆ ಬಳಕೆ ಮಾಡಿಕೊಂಡಿದೆ. ಕೂಡಲೇ ಸಿದ್ದರಾಮಯ್ಯನವರು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಬಿಜೆಪಿ ತಾಲೂಕಾಧ್ಯಕ್ಷ ಮಾರುತಿ ಗಾವರಾಳ ಸಭೆ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಬಸವಲಿಂಗಪ್ಪ ಭೂತೆ, ವೀರಣ್ಣ ಹುಬ್ಬಳ್ಳಿ, ರತನ್ ದೇಸಾಯಿ, ಕೆ.ಅಯ್ಯನಗೌಡ, ಅಮರೇಶ ಹುಬ್ಬಳ್ಳಿ, ಶರಣಪ್ಪ ಇಳಗೇರ, ಶಕುಂತಲಮ್ಮ ಮಾಲಿಪಾಟೀಲ, ಗಾಳೆಪ್ಪ ಓಜನಹಳ್ಳಿ ಸೇರಿದಂತೆ ಪಪಂ ಸರ್ವ ಸದಸ್ಯರು, ಮುಖಂಡರು, ಕಾರ್ಯಕರ್ತರು ಇದ್ದರು.