ರೋಬಸ್ಟ್‌ ಕಾಫಿ ಔಟ್‌ಟನ್ ಕುಸಿತ: ಕಮರಿದ ಬೆಳೆಗಾರರ ಸಂತಸ

| Published : Feb 11 2024, 01:45 AM IST

ರೋಬಸ್ಟ್‌ ಕಾಫಿ ಔಟ್‌ಟನ್ ಕುಸಿತ: ಕಮರಿದ ಬೆಳೆಗಾರರ ಸಂತಸ
Share this Article
  • FB
  • TW
  • Linkdin
  • Email

ಸಾರಾಂಶ

ಕಾಫಿ ಮಾರುಕಟ್ಟೆ ಇತಿಹಾಸದಲ್ಲೆ ಹೊಸ ದಾಖಲೆಯೊಂದಿಗೆ ಮುನ್ನುಗ್ಗುತ್ತಿದ್ದ ರೋಬಸ್ಟ್ ಕಾಫಿ ಧಾರಣೆ ಕೆಲವೇ ದಿನಗಳಲ್ಲಿ ೮ ಸಾವಿರ ರು. ಗಡಿ ದಾಟಲಿದೆ ಎಂದು ಸಂತಸದಲ್ಲಿದ್ದ ಸಕಲೇಶಪುರ ಬೆಳೆಗಾರರಿಗೆ ಒಟಿ ಕುಸಿತ ಬೆಳೆಗಾರರ ಸಂತಸಕ್ಕೆ ತಣ್ಣೀರು ಎರಚಿದೆ.

ಏಕಾಏಕಿ ಇಳಿಕೆಯಾದ ರೋಬಸ್ಟ್‌ । ಮಾರುಕಟ್ಟೆಯಲ್ಲಿ ಭಾರಿ ನಷ್ಟ ಭೀತಿ । ಅಕಾಲಿಕ ಮಳೆ, ಬೇಗೆಯಿಂದ ಸಾಧ್ಯವಾಗದ ಕೊಯ್ಲುಕನ್ನಡಪ್ರಭ ವಾರ್ತೆ ಸಕಲೇಶಪುರ

ಏಕಾಏಕಿ ಕಾಫಿ ಔಟ್‌ಟನ್ (ಒಟಿ) ಕುಸಿತವಾಗಿ ಕಾಫಿ ಬೆಳೆಗಾರರ ಸಂತಸವನ್ನು ಕಸಿದಿದೆ. ಕಾಫಿ ಮಾರುಕಟ್ಟೆ ಇತಿಹಾಸದಲ್ಲೆ ಹೊಸ ದಾಖಲೆಯೊಂದಿಗೆ ಮುನ್ನುಗ್ಗುತ್ತಿದ್ದ ರೋಬಸ್ಟ್ ಕಾಫಿ ಧಾರಣೆ ಕೆಲವೇ ದಿನಗಳಲ್ಲಿ ೮ ಸಾವಿರ ರು. ಗಡಿ ದಾಟಲಿದೆ ಎಂದು ಸಂತಸದಲ್ಲಿದ್ದ ಬೆಳೆಗಾರರಿಗೆ ಒಟಿ ಕುಸಿತ ಬೆಳೆಗಾರರ ಸಂತಸಕ್ಕೆ ತಣ್ಣೀರು ಎರಚಿದೆ.

ರೋಬಸ್ಟ್ ಕಾಫಿ ಕೊಯ್ಲಿನ ಆರಂಭದಲ್ಲಿ ಕಾಫಿ ಔಟ್‌ಟನ್ ೨೬ ರಿಂದ ೩೦ ರ ವರಗೆ ದಾಖಲಾಗಿದ್ದರೆ ಕಳೆದ ಎಂಟು ದಿನಗಳಿಂದ ಮಾರುಕಟ್ಟೆಗೆ ಬರುತ್ತಿರುವ ಕಾಫಿ ಔಟ್‌ಟನ್ ದಿಢೀರ್ ಕುಸಿದಿದ್ದು ೨೨ ರಿಂದ ೨೫ ರ ಅಜುಬಾಜಿಗೆ ಬಂದಿರುವುದರಿಂದ ಒಟಿ ಆಧಾರದಲ್ಲಿ ದರ ನಿರ್ಧರವಾಗುವುದರಿಂದ ಮಾರುಕಟ್ಟೆಯಲ್ಲಿ ಭಾರಿ ಪ್ರಮಾಣದ ನಷ್ಟ ಉಂಟಾಗುತ್ತಿರುವುದು ಬೆಳೆಗಾರರ ಉತ್ಸಾಹಕ್ಕೆ ಭಂಗ ತಂದಿದೆ.

ರೋಬಸ್ಟ್ ಕಾಫಿ ಮಾರುಕಟ್ಟೆ ಆರಂಭವಾದ ಡಿಸೆಂಬರ್ ತಿಂಗಳಿನಲ್ಲಿ ಪ್ರತಿ ಔಟ್‌ಟನ್ ದರ ೨೬೦ ರಿಂದ ೨೭೦ ರು. ಇದ್ದರೆ ಜನವರಿ ತಿಂಗಳಿನಲ್ಲಿ ಒಟಿ ದರ ೨೭೦ ರಿಂದ ೨೮೦ ರು.ಗೆ ಏರಿತ್ತು. ಇದರಿಂದಾಗಿ ೩೦ ಒಟಿ ಇದ್ದ ೫೦ ಕೆ.ಜಿ ರೋಬಸ್ಟ್ ಕಾಫಿ ಧಾರಣೆ ೮೪೦೦ ರು. ಇದ್ದರೆ ಸಾಮಾನ್ಯವಾಗಿ ೨೭ ಹಾಗೂ ೨೮ ಒಟಿ ಇದ್ದ ಕಾಫಿ ಧಾರಣೆ ೭೫೦೦ ರು.ನಿಂದ ೭೮೦೦ ರು. ಸನಿಹದಲ್ಲಿ ಮಾರಾಟವಾಗುತಿತ್ತು. ಆದರೆ, ಕಳೆದೊಂದು ವಾರದಿಂದ ಮಾರುಕಟ್ಟೆಗೆ ಬರುತ್ತಿರುವ ಕಾಫಿ ಒಟಿ ತೀವ್ರ ಪ್ರಮಾಣದಲ್ಲಿ ಕುಸಿದಿರುವುದರಿಂದ ಬೆಲೆ ಸಹ ಪಾತಾಳಕ್ಕೆ ಇಳಿದಿದೆ. ಈ ವಾರದ ಮಾರುಕಟ್ಟೆಗೆ ಬಂದಿರುವ ಕಾಫಿಯಲ್ಲಿನ ಒಟಿ ಪ್ರಮಾಣ ೨೩ ರಿಂದ ೨೫ ಅಸುಪಾಸಿನಲ್ಲಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಧಾರಣೆ ೬೮೦೦ ರು.ನಿಂದ ೭೧೦೦ ರು.ಗೆ ಕುಸಿದಿದೆ. ಇದರಿಂದಾಗಿ ಬೆಳೆಗಾರರಿಗೆ ಹೊಸ ಸಮಸ್ಯೆ ಸೃಷ್ಟಿಯಾಗಿದೆ.

ಒಟಿ ಕುಸಿತಕ್ಕೆ ಕಾರಣ:

ಡಿಸೆಂಬರ್ ಹಾಗೂ ಜನವರಿ ತಿಂಗಳಿನಲ್ಲಿ ಸುರಿದ ಅಕಾಲಿಕ ಮಳೆ ಕಾಫಿ ಹಣ್ಣಿನಲ್ಲಿ ಹೆಚ್ಚಿನ ರಸ (ಜ್ಯೂಸ್) ಇರಲು ಸಹಕಾರಿಯಾಗಿದ್ದು ಈ ವೇಳೆ ಕೊಯ್ಲು ನಡೆಸಿದ ಕಾಫಿ ಹೆಚ್ಚಿನ ಒಟಿ ಇರಲು ಸಹಾಯಕವಾಗಿದೆ. ಇದೇ ತಿಂಗಳು ಕೊಯ್ಲು ನಡೆಸಿದ ಬೆಳೆಗಾರರು ಹಣ್ಣುಕಾಯಿ ಒಟ್ಟಾಗಿ ಕೊಯ್ಲು ನಡೆಸಿದ್ದರು. ಇದೂ ಸಹ ಒಟಿ ಹೆಚ್ಚಳಕ್ಕೆ ಕಾರಣವಾಗಿತ್ತು. ಆದರೆ, ಕಾರ್ಮಿಕರ ಕೊರತೆಯ ಕಾರಣ ತಡವಾಗಿ ಕೊಯ್ಲು ನಡೆಸುತ್ತಿರುವ ಕಾಫಿ ತೋಟಗಳಲ್ಲಿ ಈಗಾಗಲೇ ಬಹುತೇಕ ಹಣ್ಣಾಗಿ ಮಾಗಿದ್ದು ಗಿಡದಲ್ಲೆ ಹಣ್ಣುಗಳು ಒಣಗಲಾರಂಭಿಸಿವೆ. ಇದು ಒಟಿ ಕುಸಿತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

ಅತಿಯಾದ ಬೇಗೆ:

ಸಾಮಾನ್ಯವಾಗಿ ಕಾಫಿ ಕಣದಲ್ಲಿ ಹದವಾಗಿ ಸಂಸ್ಕರಣೆಗೊಳ್ಳಲು ೮ ರಿಂದ ೧೦ ದಿನಗಳ ಹದಬಿಸಿಲು ಬೇಕು. ತಾಲೂಕಿನಲ್ಲಿ ಕಳೆದೊಂದು ವಾರದಿಂದ ಅತಿಯಾದ ಬೇಗೆ (ಬಿಸಿಲು) ಕಾಣಿಸಿಕೊಂಡಿದ್ದು ಅತಿಯಾದ ಬಿಸಿಲಿನ ಬೇಗೆಗೆ ಕಾಫಿ ಕಣದಲ್ಲಿ ೬ ರಿಂದ ೮ ದಿನಗಳಲ್ಲಿ ಕಾಫಿ ಅತಿ ವೇಗವಾಗಿ ಒಣಗುತ್ತಿದ್ದರೆ, ಗಿಡದಲ್ಲಿದ್ದ ಹಣ್ಣು ಸಹ ಗಿಡದಲ್ಲೆ ಒಣಗುತ್ತಿದೆ. ಇದು ಸಹ ಒಟಿ ಕುಸಿತಕ್ಕೆ ಪ್ರಮುಖ ಕಾರಣ ಎಂಬ ಮಾತಿದೆ.

ಮಾರುಕಟ್ಟೆಯಲ್ಲಿ ದರದ ವ್ಯತ್ಯಾಸವಿಲ್ಲದಿದ್ದರೂ ಒಟಿ ಪ್ರಮಾಣದಲ್ಲಿ ತೀವ್ರವಾಗಿ ಕುಸಿದಿರುವುದು ಬೆಲೆ ಕುಸಿತಕ್ಕೆ ಕಾರಣವಾಗಿದೆ. ನಡಹಳ್ಳಿ ಕುಮಾರ್. ಕಾಫಿ ವ್ಯಾಪಾರಿ.

ಕಳೆದ ಬಾರಿ ೨೭ ಅಜುಬಾಜಿನಲ್ಲಿದ್ದ ಕಾಫಿ ಒಟಿ ಈ ಬಾರಿ ೨೪ಕ್ಕೆ ಕುಸಿದಿದೆ. ಇದರಿಂದಾಗಿ ಪ್ರತಿಮೂಟೆ ಕಾಫಿಗೆ ನಾಲ್ಕು ನೂರರಿಂದ ಆರು ನೂರರವರಗೆ ನಷ್ಟ ಸಂಭವಿಸಿದೆ.

ಕೀರ್ತಿಹರಗರಹಳ್ಳಿ.ಮಾರುಕಟ್ಟೆಗೆ ಬಂದಿರುವ ಕಾಫಿ.