ಗಣೇಶ ವಿಗ್ರಹಗಳ ವಿಸರ್ಜನೆಯಿಂದ ಕೆರೆ, ನಾಲೆ ಸೇರಿದಂತೆ ಯಾವುದೇ ಜಲಮೂಲಗಳು ಕಲುಷಿತವಾಗಬಾರದು. ವಿಗ್ರಹ ವಿಸರ್ಜನೆಗಾಗಿ ಸೂಕ್ತ ಸ್ಥಳಗಳನ್ನು ಗುರುತಿಸಿ ಅಗತ್ಯವಿರುವ ಕಡೆ ತಾತ್ಕಾಲಿಕ ನೀರಿನ ತೊಟ್ಟಿಗಳನ್ನು ನಿರ್ಮಿಸಬೇಕು. ವಿಸರ್ಜನಾ ಸ್ಥಳಗಳಲ್ಲಿ ಸ್ಥಳೀಯ ಸಂಸ್ಥೆಗಳಯಿಂದ ಬೆಳಕಿನ ವ್ಯವಸ್ಥೆ ಸೇರಿದಂತೆ ಮೂಲಸೌಕರ್ಯ ಕಲ್ಪಿಸಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

೨೦೨೬ನೇ ಸಾಲಿನ ಗಣೇಶೋತ್ಸವವನ್ನು ಪರಿಸರ ಸ್ನೇಹಿ ಹಾಗೂ ಶಾಂತಿಯುತವಾಗಿ ಆಚರಿಸುವ ಹಿನ್ನೆಲೆಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಹಾಗೂ ರಾಸಾಯನಿಕ ಬಣ್ಣಗಳಿಂದ ತಯಾರಿಸಿದ ಗಣೇಶ ವಿಗ್ರಹಗಳ ಉತ್ಪಾದನೆ, ಸಂಗ್ರಹಣೆ, ಮಾರಾಟ ಮತ್ತು ವಿಸರ್ಜನೆಯನ್ನು ತಡೆಗಟ್ಟುವಂತೆ ಜಿಲ್ಲಾಧಿಕಾರಿ ಡಾ.ಕುಮಾರ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪರಿಸರ ಸಂರಕ್ಷಣೆ ಹಾಗೂ ಜಲಮೂಲಗಳ ಸ್ವಚ್ಛತೆ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ. ಸಾರ್ವಜನಿಕರು ಮಣ್ಣಿನಿಂದ ತಯಾರಿಸಿದ ನೈಸರ್ಗಿಕ ಗಣೇಶ ವಿಗ್ರಹಗಳನ್ನು ಬಳಸುವಂತೆ ಅರಿವು ಮೂಡಿಸಬೇಕು ಎಂದರು.

ಜಿಲ್ಲೆಯಲ್ಲಿ ಪಿಒಪಿ ಗಣೇಶ ವಿಗ್ರಹಗಳ ಉತ್ಪಾದನೆ, ಸಂಗ್ರಹಣೆ ಹಾಗೂ ಮಾರಾಟ ನಡೆಯದಂತೆ ಸಂಬಂಧಿಸಿದ ಅಧಿಕಾರಿಗಳು ನಿಯಮಿತವಾಗಿ ಪರಿಶೀಲನೆ ನಡೆಸಬೇಕು. ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.

ಜಲಮೂಲಗಳ ಸಂರಕ್ಷಣೆಗೆ ಆದ್ಯತೆ:

ಗಣೇಶ ವಿಗ್ರಹಗಳ ವಿಸರ್ಜನೆಯಿಂದ ಕೆರೆ, ನಾಲೆ ಸೇರಿದಂತೆ ಯಾವುದೇ ಜಲಮೂಲಗಳು ಕಲುಷಿತವಾಗಬಾರದು. ವಿಗ್ರಹ ವಿಸರ್ಜನೆಗಾಗಿ ಸೂಕ್ತ ಸ್ಥಳಗಳನ್ನು ಗುರುತಿಸಿ ಅಗತ್ಯವಿರುವ ಕಡೆ ತಾತ್ಕಾಲಿಕ ನೀರಿನ ತೊಟ್ಟಿಗಳನ್ನು ನಿರ್ಮಿಸಬೇಕು. ವಿಸರ್ಜನಾ ಸ್ಥಳಗಳಲ್ಲಿ ಸ್ಥಳೀಯ ಸಂಸ್ಥೆಗಳ ವತಿಯಿಂದ ಬೆಳಕಿನ ವ್ಯವಸ್ಥೆ ಸೇರಿದಂತೆ ಮೂಲಸೌಕರ್ಯ ಕಲ್ಪಿಸಬೇಕು ಎಂದು ಸೂಚಿಸಿದರು.

ಕೆರೆಗಳು ಹಾಗೂ ನಾಲೆಗಳಲ್ಲಿ ಗಣೇಶ ವಿಗ್ರಹಗಳ ವಿಸರ್ಜನೆಗೆ ಅವಕಾಶ ನೀಡಬಾರದು. ದೊಡ್ಡ ಪ್ರಮಾಣದಲ್ಲಿ ವಿಸರ್ಜನೆ ನಡೆಯುವ ಸ್ಥಳಗಳಲ್ಲಿ ಸಾರ್ವಜನಿಕರ ಸುರಕ್ಷತೆಗೆ ಅಗತ್ಯವಾದ ರಕ್ಷಣಾ ವ್ಯವಸ್ಥೆ ಹಾಗೂ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಏಕಗವಾಕ್ಷಿ ಮೂಲಕ ಅನುಮತಿ:

ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ವಿಗ್ರಹ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ಮಾಡುವ ಗಣೇಶೋತ್ಸವ ಸಮಿತಿಗಳು ಕಡ್ಡಾಯವಾಗಿ ಇಲಾಖೆಗಳ ಅನುಮತಿ ಪಡೆಯಬೇಕು. ಆಯೋಜಕರಿಗೆ ಅನುಕೂಲವಾಗುವಂತೆ ಅನುಮತಿಗಳನ್ನು ಒಂದೇ ಕಡೆ ಪಡೆಯಲು ಏಕಗವಾಕ್ಷಿ ಸಮಿತಿ ರಚಿಸಲಾಗಿದ್ದು, ಸಮಿತಿಯ ಮೂಲಕ ಅನುಮತಿ ಪಡೆದ ನಂತರವೇ ಗಣೇಶ ವಿಗ್ರಹ ಪ್ರತಿಷ್ಠಾಪನೆ ಹಾಗೂ ವಿಸರ್ಜನೆಗೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಡಿಜೆ ಬಳಕೆಗೆ ಅವಕಾಶವಿಲ್ಲ:

ಗಣೇಶೋತ್ಸವ ಸಂದರ್ಭದಲ್ಲಿ ಡಿಜೆ ಬಳಕೆಗೆ ಅನುಮತಿ ನೀಡಬಾರದು. ಶಬ್ಧ ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಹಾಗೂ ವಿದ್ಯಾರ್ಥಿಗಳು, ವೃದ್ಧರು, ಮಕ್ಕಳು ಮತ್ತು ರೋಗಿಗಳಿಗೆ ಅನಾನುಕೂಲ ಉಂಟಾಗದಂತೆ ಹಬ್ಬವನ್ನು ಆಚರಿಸುವಂತೆ ನೋಡಿಕೊಳ್ಳಬೇಕು ಎಂದರು.

ರೂಟ್‌ಮ್ಯಾಪ್ ಅನುಮತಿ ಕಡ್ಡಾಯ:

ಗಣೇಶ ವಿಸರ್ಜನೆ ಸಂದರ್ಭದಲ್ಲಿ ಮೆರವಣಿಗೆ ನಡೆಸುವ ಗಣೇಶೋತ್ಸವ ಸಮಿತಿಗಳು ಮೆರವಣಿಗೆ ಸಾಗುವ ಮಾರ್ಗದ ರೂಟ್‌ಮ್ಯಾಪ್‌ನ್ನು ಮುಂಚಿತವಾಗಿ ಇಲಾಖೆಗಳಿಂದ ಅನುಮತಿ ಪಡೆಯುವುದು ಕಡ್ಡಾಯ. ಸಾರ್ವಜನಿಕರಿಗೆ ಹಾಗೂ ವಾಹನ ಸಂಚಾರಕ್ಕೆ ತೊಂದರೆಯಾಗದಂತೆ, ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗದ ರೀತಿಯಲ್ಲಿ ಮೆರವಣಿಗೆ ನಡೆಸಲು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು.

ಪ್ರಸಾದದ ಗುಣಮಟ್ಟ ಪರಿಶೀಲನೆ:

ಗಣೇಶೋತ್ಸವ ಸ್ಥಳಗಳಲ್ಲಿ ಪ್ರಸಾದ ವಿತರಿಸುವ ಸ್ಥಳಗಳಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳು ನಿಯಮಿತವಾಗಿ ಪರಿಶೀಲನೆ ನಡೆಸಬೇಕು. ಪ್ರಸಾದ ತಯಾರಿಕೆ ಮತ್ತು ವಿತರಣೆಯಲ್ಲಿ ಸ್ವಚ್ಛತೆ, ಗುಣಮಟ್ಟ ಹಾಗೂ ಆಹಾರ ಸುರಕ್ಷತಾ ಮಾನದಂಡಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಖಚಿತಪಡಿಸಿಕೊಳ್ಳಬೇಕು ಎಂದು ಸೂಚಿಸಿದರು.

ಶಾಂತಿಯುತವಾಗಿ ಆಚರಿಸಿ:

ಗಣೇಶೋತ್ಸವ ಸಂದರ್ಭದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ, ಸಂಚಾರಕ್ಕೆ ಅಡಚಣೆಯಾಗದಂತೆ ಹಾಗೂ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗದ ರೀತಿಯಲ್ಲಿ ಹಬ್ಬವನ್ನು ಆಚರಿಸಲು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಪರಿಸರ ಸ್ನೇಹಿ ಗಣೇಶ ಹಬ್ಬದ ಆಚರಣೆಗೆ ಸಾರ್ವಜನಿಕರು, ಗಣೇಶೋತ್ಸವ ಸಮಿತಿಗಳು, ವಿಗ್ರಹ ತಯಾರಕರು ಹಾಗೂ ವ್ಯಾಪಾರಸ್ಥರು ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಅವರು ಮನವಿ ಮಾಡಿದರು.