ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುನಗರದ ನಟರಾಜ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ಹಾರ್ಟ್ ಸಂಸ್ಥೆಯು ಹೆಣ್ಣು ಮಕ್ಕಳ ಹದಿ ಹರೆಯದ ವಯಸಿನಲ್ಲಿ ಬರುವ ಆರೋಗ್ಯ ಸಮಸ್ಯೆಗಳ ಕುರಿತು ಅರಿವು ಕಾರ್ಯಕ್ರಮ ಆಯೋಜಿಸಲಾಗಿತ್ತು.ಮೈಸೂರು ವಿಭಾಗದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಉಪ ನಿರ್ದೇಶಕಿ ಡಾ. ಮಲ್ಲಿಕಾ ಮಾತನಾಡಿ, ಹದಿ ಹರೆಯದ ವಯಸಿನಲ್ಲಿ ಮನಸ್ಸು ಚಂಚಲತೆಯಿಂದ ಕೂಡಿರುತ್ತದೆ. ಯಾವುದು ಸರಿ ತಪ್ಪು ಎಂದು ನಿರ್ಧಾರ ಮಾಡುವುದು ಕಷ್ಟ. ಈ ವಯಸ್ಸಿನಲ್ಲಿ ಮಾನಸಿಕವಾಗಿ ದೈಹಿಕವಾಗಿ ಸಾಕಷ್ಟು ಬದಲಾವಣೆ ಆಗುತ್ತದೆ. ಹೆಣ್ಣು ಮಕ್ಕಳು ಮುಖ್ಯವಾಗಿ ಇದರ ಬಗ್ಗೆ ಜಾಗೃತರಾಗಿ ಇರಬೇಕು ಎಂದರು.ಈ ಹದಿ ಹರೆಯ ಸಂದರ್ಭದಲ್ಲಿ ಹಸಿರು ತರಕಾರಿ, ಮೊಳಕೆ ಕಾಳುಗಳು, ಸಿರಿಧಾನ್ಯಗಳು, ಮೊಟ್ಟೆ, ಹೆಚ್ಚು ಪೌಷ್ಠಿಕಾಂಶ ಇರುವ ಆಹಾರಗಳನ್ನು ಸೇವಿಸಬೇಕು. ಋತುಮತಿಯಾದ ಹೆಣ್ಣು ಮಕ್ಕಳಲ್ಲಿ ಮುಟ್ಟು ಪ್ರಾರಂಭವಾಗುವುದರಿಂದ ಕನಿಷ್ಟ 10 ರಿಂದ 12 ಗ್ರಾಂ. ಹೀಮೋಗ್ಲೊಬಿನ್ ಇರಬೇಕು, ಮುಟ್ಟು ರಕ್ತಸ್ರಾವ ಕೆಲವರಲ್ಲಿ 3 ದಿನ 5 ದಿನ ಇರುತ್ತದೆ. ಈ ಸಮಯದಲ್ಲಿ ಸ್ವಚ್ಛತೆಗೆ ಹೆಚ್ಚಿನ ಒತ್ತನ್ನು ಕೊಡಬೇಕು. ಪ್ರತಿದಿನ 4 ರಿಂದ 5 ಬಾರಿ ಪ್ಯಾಡ್ ಅಥವಾ ಕಾಟನ್ ಬಟ್ಟೆಗಳನ್ನು ಬದಲಾಯಿಸಬೇಕು. ಅವುಗಳನ್ನು ಶೌಚಾಲಯ ಮತ್ತು ಎಲ್ಲೆಂದರಲ್ಲಿ ಬೀಸಾಡಬಾರದು, ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು. ಈ ಸಮಯದಲ್ಲಿ ಸ್ವಚ್ಛತೆಯ ಬಗ್ಗೆ ಗಮನವಹಿಸದಿದ್ದರೆ ಮುಂದೆ ಸೋಂಕುಗಳು ಹರಡುವ ಸಾಧ್ಯತೆ ಇರುತ್ತದೆ. ಬಿಳಿ ಬಟ್ಟೆ ಸಮಸ್ಯೆಯನ್ನು ಹೇಳಿಕೊಳ್ಳಲು ವೈದ್ಯರಿಗೆ ತೊರಿಸಲು ಹಿಂಜರಿಯುತ್ತಾರೆ. ನಿರ್ಲಕ್ಷೆ ವಹಿಸಿದರೆ ಗರ್ಭಾಕಂಠ ಕ್ಯಾನ್ಸರ್ ಕೂಡ ಆಗಬಹುದು. ಇತ್ತಿಚೆಗೆ ಮಹಿಳೆಯರಲ್ಲಿ ಗರ್ಭಾಕೋಶ ಕ್ಯಾನ್ಸರ್, ಗರ್ಭಾಕಂಠ ಕ್ಯಾನ್ಸರ್ ನಿಂದ ಬಳಲುವರ ಸಂಖ್ಯೆ ಹೆಚ್ಚಾಗುತ್ತಿದೆ. ಮುಂದೆ ಮದುವೆ ಆದ ನಂತರ ಬಂಜೆತನಕ್ಕೆ ಕಾರಣವಾಗಬಹುದು ಎಂದು ತಿಳಿಸಿದರು.ಕೊನೆಯಲ್ಲಿ ಮಕ್ಕಳು ತಮ್ಮಲ್ಲಿ ಇದ್ದಂತಹ ಗೊಂದಲಗಳಿಗೆ ಪ್ರಶ್ನೆ ಕೇಳುವ ಮೂಲಕ ಪರಿಹಾರ ಪಡೆದುಕೊಂಡರು.ಅಧ್ಯಕ್ಷತೆ ವಹಿಸಿದ್ದ ನಟರಾಜ ಶಿಕ್ಷಣ ಸಂಸ್ಥೆಯ ವಿಶೇಷಾಧಿಕಾರಿ ಡಾ.ಎಸ್. ಶಿವರಾಜಪ್ಪ ಮಾತನಾಡಿ, ಹಾರ್ಟ್ ಸಂಸ್ಥೆಯು ಸಮುದಾಯ ಮತ್ತು ಕಾಲೇಜಿನ ವಿದ್ಯಾರ್ಥಿಗಳಿಗೆ ವೈಯಕ್ತಕ ಸ್ವಚ್ಛತೆ ಅರಿವು ಮೂಡಿಸುತಿರುವುದು ಉತ್ತಮವಾದ ಕೆಲಸ, ಹೆಣ್ಣು ಮಕ್ಕಳು ವೈಯಕ್ತಿಕ ಸ್ವಚ್ಛತೆ ಬಗ್ಗೆ ಗಮನಕೊಡದೆ ಹೋದರೆ ಮುಂದಿನ ದಿನಗಳಲ್ಲಿ ಹಲವು ಸಮಸ್ಯೆ ಎದುರಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಇವತ್ತಿನ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳ ಜೊತೆ ಸಂವಾದ ನಡೆಸಿ ಮಾಹಿತಿ ಪಡೆದುಕೊಳ್ಳುವಂತೆ ತಿಳಿಸಿದರು.ಕಾರ್ಯಕ್ರಮದಲ್ಲಿ ಹಾರ್ಟ್ ಸಂಸ್ಥೆ ಸಂಯೋಜಕ ಶಿವಲಿಂಗ ಕಾಲೇಜಿನ ಪ್ರಾಂಶುಪಾಲರು ಉಪನ್ಯಾಸಕರು ಇದ್ದರು.