ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರು ತಾಲೂಕಿನ ಹೊರವಲಯದ ನಿಡ್ಡೋಡಿ ಬಳಿ ಕಾರ್ಯಾಚರಿಸುತ್ತಿದ್ದ ಎರಡು ಕಲ್ಲಿನ ಕೋರೆಗಳಿಗೆ ಉಪಲೋಕಾಯುಕ್ತ ಜಸ್ಟೀಸ್ ಬಿ. ವೀರಪ್ಪ ಹಾಗೂ ತಂಡ ಮಂಗಳವಾರ ಬೆಳಗ್ಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿತು.ಮುಂಜಾನೆ ಸುರಿಯುತ್ತಿದ್ದ ಮಳೆಯ ನಡುವೆಯೇ ನಿಡ್ಡೋಡಿಯ ಬಡಗಮಿಜಾರು ಗ್ರಾಮದ ವಿವಿಧೆಡೆ ಪಟ್ಟಾ ಜಮೀನಿನಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕೆಂಪು ಕಲ್ಲು ಕೋರೆಗಳಿಗೆ ಲೋಕಾಯುಕ್ತ ಅಧಿಕಾರಿಗಳ ತಂಡ ಭೇಟಿ ನೀಡಿತು.
ಈ ವೇಳೆ ವಿವಿಧ ಕಂದಾಯ ಅಧಿಕಾರಿಗಳು, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳನ್ನು ಕರೆಸಲಾಗಿತ್ತು.ಎರಡು ಕಡೆಗಳಲ್ಲಿ ಲೈಸೆನ್ಸ್ ಅವಧಿ ಮುಗಿದಿದ್ದರೂ ಕಲ್ಲು ಗಣಿಗಾರಿಕೆ ನಡೆಸಲಾಗುತ್ತಿದೆ. ಇನ್ನೊಂದೆಡೆ ಅಪಾಯಕಾರಿಯಾಗಿರುವ ಆಳವಾದ ಕಲ್ಲಿನ ಕೋರೆಗಳು ಪಟ್ಟಾ ಜಮೀನಿನಲ್ಲಿದೆ ಎಂಬ ಕಾರಣಕ್ಕೆ ಗಣಿ ಇಲಾಖೆ ಅಧಿಕಾರಿಗಳು, ಸ್ಥಳೀಯ ಗ್ರಾಮ ಪಂಚಾಯತ್‌ನವರೂ, ಪೊಲೀಸ್ ಹಾಗೂ ಆರ್‌ಟಿಒ ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಿರುವುದು ಕಂಡು ಬಂದಿದೆ, ಇದು ಸರಿಯಲ್ಲ. ಪಟ್ಟಾ ಜಮೀನೇ ಆಗಿದ್ದರೂ ಅವರು ಷರತ್ತು ಉಲ್ಲಂಘಿಸುವಂತಿಲ್ಲ ಎಂದು ಉಪಲೋಕಾಯುಕ್ತರು ಹೇಳಿದರು.
ಆಳವಾದ ಕಂದಕದಂತಾಗಿರುವ ಕೆಂಪುಕಲ್ಲು ಗಣಿಗಳನ್ನು ಮುಚ್ಚುವುದಕ್ಕೆ ಕ್ರಮ ಕೈಗೊಳ್ಳಬೇಕು, ಮುಚ್ಚಿದ ಜಾಗದಲ್ಲಿ ಗಿಡ ನೆಟ್ಟು ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಬೇಕು. ಸಮೀಪದಲ್ಲೇ ತಾಗಿಕೊಂಡಿರುವ ಸರ್ಕಾರಿ ಜಮೀನುಗಳನ್ನು ರಕ್ಷಿಸಿ, ಅದಕ್ಕೆ ಬೇಲಿ ಹಾಕಿಸಿ, ಇಲ್ಲವಾದರೆ ಅದನ್ನು ಕೂಡಾ ಅತಿಕ್ರಮಿಸುವ ಸಾಧ್ಯತೆ ಇದೆ ಎಂದು ಜಸ್ಟೀಸ್ ವೀರಪ್ಪ ಅವರು ಅಧಿಕಾರಿಗಳಿಗೆ ಸೂಚಿಸಿದರು.ಲೋಕಾಯುಕ್ತ ಎಸ್‌ಪಿ ನಟರಾಜ್, ಮಂಗಳೂರು ಉಪವಿಭಾಗಾಧಿಕಾರಿ ಹರ್ಷವರ್ಧನ್, ಗಣಿ ಮತ್ತು ಭೂವಿಜ್ಞಾನ ಉಪನಿರ್ದೇಶಕಿ ಕೃಷ್ಣವೇಣಿ, ಅಧಿಕಾರಿ ಸತ್ಯಭಾಮಾ, ಲೋಕಾಯುಕ್ತ ಡಿವೈಎಸ್‌ಪಿ ಗಾನಾ ಪಿ.ಕುಮಾರ್, ಮೂಡುಬಿದಿರೆ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ಮತ್ತಿತರರು ಇದ್ದರು.