ಸಾರಾಂಶ
ಬಳ್ಳಾರಿ: ಕರ್ನಾಟಕ ಉಪ ಲೋಕಾಯುಕ್ತ ನ್ಯಾ.ಬಿ.ವೀರಪ್ಪ ನಗರದ ವಿವಿಧೆಡೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿದರು.ನಗರದ ಕೃಷಿ ಉತ್ಪನ್ನ ಮಾರುಕಟ್ಟೆ, ವೇಣಿ ವೀರಾಪುರ ಬಳಿಯ ಬೃಹತ್ ಘನ ತ್ಯಾಜ್ಯ ನಿರ್ವಹಣೆ ಘಟಕ, ಬಳ್ಳಾರಿ ಮಹಾನಗರ ಪಾಲಿಕೆ ಕಚೇರಿ ಮತ್ತು ಬಳ್ಳಾರಿ ತಾಲೂಕು ತಹಶೀಲ್ದಾರರ ಕಚೇರಿಗೆ ದಿಢೀರ್ ಭೇಟಿ ನೀಡಿ ಅಲ್ಲಿನ ಕಾರ್ಯ ವೈಖರಿ ಕುರಿತು ಪರಿಶೀಲಿಸಿದರು. ಅಲ್ಲಿನ ಅವ್ಯವಸ್ಥೆ ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಕೃಷಿ ಉತ್ಪನ್ನ ಮಾರುಕಟ್ಟೆಗೆ ಭೇಟಿ:ಗುರುವಾರ ಬೆಳ್ಳಂಬೆಳಿಗ್ಗೆ ಎಪಿಎಂಸಿಗೆ ಭೇಟಿ ನೀಡಿದ ಉಪ ಲೋಕಾಯುಕ್ತರು, ಎಪಿಎಂಸಿಯಲ್ಲಿನ ವ್ಯಾಪಾರ ವಹಿವಾಟು, ಶೌಚಾಲಯ ಸೇರಿದಂತೆ ಮೂಲಭೂತ ಸೌಕರ್ಯಗಳ ಬಗ್ಗೆ ಪರಿಶೀಲನೆ ನಡೆಸಿದರು. ಶುಚಿತ್ವಕ್ಕೆ ಆದ್ಯತೆ ನೀಡದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಇದೇ ವೇಳೆ ರೈತರ ಸಮಸ್ಯೆ ಆಲಿಸಿದ ಉಪಲೋಕಾಯುಕ್ತರು, ವರ್ತಕರು ಖರೀದಿಸಿದ ತರಕಾರಿಗೆ ರಸೀದಿ ನೀಡ್ತಾರೆಯೇ ಎಂಬುದರ ಬಗ್ಗೆ ಕೆಲ ವರ್ತಕರ ಮತ್ತು ರೈತರ ಬಳಿ ವ್ಯಾಪಾರದ ಮಾಹಿತಿ ಪಡೆದುಕೊಂಡರು. ರೈತರಿಂದ ಕಮಿಷನ್ ವಸೂಲಿ ಮಾಡುತ್ತಿರುವುದು ಗೊತ್ತಾಗುತ್ತಿದ್ದಂತೆಯೇ ತರಾಟೆಗೆ ತೆಗೆದುಕೊಂಡರು. ಎಪಿಎಂಸಿ ಕಾಯ್ದೆಯಲ್ಲಿ ಅವಕಾಶ ಇಲ್ಲ. ಖರೀದಿದಾರರಿಂದ ಕೇವಲ ₹2 ಕಮಿಷನ್ ಪಡೆಯಬೇಕು ಎಂದು ಕಾನೂನು ಹೇಳುತ್ತದೆ. ಆದರೆ ಇಲ್ಲಿ ನೇರವಾಗಿ ರೈತರಿಂದಲೇ ₹10 ವಸೂಲಿ ಮಾಡಲಾಗುತ್ತಿದೆ. ಇದು ಅಕ್ರಮವಲ್ಲವೇ? ಎಂದು ಪ್ರಶ್ನಿಸಿದರು.ವರ್ತಕರು ರೈತರಿಂದ ಉತ್ಪನ್ನಗಳನ್ನು ಖರೀದಿ ಮಾಡಿ ಹೆಚ್ಚುವರಿ ಕಮಿಷನ್‌ಗೆ ಮಾರಾಟ ಮಾಡುವುದಕ್ಕೆ ಕಡಿವಾಣ ಹಾಕಬೇಕು ಎಂದು ಎಪಿಎಂಸಿ ಅಧಿಕಾರಿಗಳಿಗೆ ಸೂಚಿಸಿದರು.
ಬೃಹತ್ ಘನ ತ್ಯಾಜ್ಯ ನಿರ್ವಹಣೆ ಘಟಕ:ವೇಣಿ ವೀರಾಪುರ ಬಳಿಯ ಬೃಹತ್ ಘನ ತ್ಯಾಜ್ಯ ನಿರ್ವಹಣೆ ಘಟಕಕ್ಕೆ ಭೇಟಿ ನೀಡಿದ ಉಪ ಲೋಕಾಯುಕ್ತ ನ್ಯಾ.ಬಿ.ವೀರಪ್ಪ, ಅಲ್ಲಿನ ನಿರ್ವಹಣೆಯ ನಿರ್ಲಕ್ಷ್ಯವನ್ನು ಕಂಡು ಬರುತ್ತಿದ್ದಂತೆಯೇ ಮಹಾನಗರ ಪಾಲಿಕೆ ಆಯುಕ್ತರನ್ನು ತರಾಟೆಗೆ ತೆಗೆದುಕೊಂಡರು. 84 ಎಕರೆ ವ್ಯಾಪ್ತಿಯಲ್ಲಿರುವ ಬೃಹತ್ ಘನ ತ್ಯಾಜ್ಯ ನಿರ್ವಹಣೆ ಘಟಕದಲ್ಲಿ ಸರಿಯಾಗಿ ನಿರ್ವಹಣೆಯಾಗುತ್ತಿಲ್ಲ. ಇಲ್ಲಿನ ತ್ಯಾಜ್ಯ ಗಾಳಿಗೆ ಹಾರಿ ಹೋಗಿ ಬೇರೆಯವರಿಗೆ ಸಮಸ್ಯೆಯಾಗುವುದಿಲ್ಲವೇ ? ಇಲ್ಲಿನ ಪರಿಸರವಾದಿಗಳು ಯಾರೂ ನಿಮ್ಮನ್ನು ಪ್ರಶ್ನೆ ಮಾಡಿಲ್ಲವೇ? ಎಂದು ಆಯುಕ್ತರನ್ನು ಪ್ರಶ್ನಿಸಿದರು.
ಘಟಕದಲ್ಲಿನ ಮಣ್ಣನ್ನು ಪರೀಕ್ಷೆಗೆ ಒಳಪಡಿಸಬೇಕು. ಅದನ್ನು ರೈತರಿಗೆ ನೀಡುವ ಮೂಲಕ ತೋಟಗಾರಿಕೆ ಬೆಳೆ ಬೆಳೆಯಲು ಅನುವು ಮಾಡಿಕೊಡಬೇಕು ಎಂದರು.ಉಪಲೋಕಾಯುಕ್ತ ಅನಿರೀಕ್ಷಿತವಾಗಿ ಮಹಾನಗರ ಪಾಲಿಕೆಯ ಕಚೇರಿಗೆ ಭೇಟಿ ನೀಡಿ ಅಲ್ಲಿನ ವಿವಿಧ ಶಾಖೆಗಳ ಕಡತ ಹಾಗೂ ಇತರೆ ದಾಖಲೆಗಳ ಪರಿಶೀಲನೆ ನಡೆಸಿದರು. ಪಾಲಿಕೆ ಕಚೇರಿಯ ಅಧಿಕಾರಿ, ಸಿಬ್ಬಂದಿ ಹಾಜರಾತಿ ಪುಸ್ತಕ, ಚಲನ-ವಲನ ವಹಿ, ನಗದು ಘೋಷಣಾ ವಹಿಗಳ ಬಗ್ಗೆ ವಿಚಾರಿಸಿ ಮಾಹಿತಿ ಪಡೆದುಕೊಂಡರು. ಸಿಬ್ಬಂದಿ ಕಾರ್ಯವೈಖರಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಬಳ್ಳಾರಿ ತಾಲೂಕು ತಹಶೀಲ್ದಾರರ ಕಚೇರಿಗೂ ಭೇಟಿ ನೀಡಿದರು. ಜಿಲ್ಲಾಧಿಕಾರಿ ಪ್ರಶಾಂತಕುಮಾರ್ ಮಿಶ್ರಾ, ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ, ಎಸಿ ಪಿ.ಪ್ರಮೋದ್, ಎಎಸ್ಪಿ ನವೀನಕುಮಾರ್, ಲೋಕಾಯುಕ್ತದ ಅಪರ ನಿಬಂಧಕ ಕೆ.ಎಂ. ರಾಜಶೇಖರ್, ಸಹಾಯಕ ನಿಬಂಧಕ ಶುಭವೀರ್ ಜೈನ್ ಬಿ., ಉಪ ನಿಬಂಧಕ ಅರವಿಂದ ಎನ್.ವಿ., ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಹೊಸಮನೆ, ಬಳ್ಳಾರಿ ಲೋಕಾಯುಕ್ತ ಎಸ್ಪಿ ಸಿ.ಸಿದ್ದರಾಜು, ಡಿವೈಎಸ್ಪಿ ವಸಂತಕುಮಾರ್ ಇದ್ದರು.