ಹಳಿ ತಪ್ಪಿದ ಗೂಡ್ಸ್‌ ರೈಲು: ದುರಸ್ತಿ ಕಾರ್ಯ ಪೂರ್ಣ

| Published : Aug 13 2024, 12:48 AM IST

ಸಾರಾಂಶ

ಕರ್ನಾಟಕ-ಗೋವಾ ಮಾರ್ಗದಲ್ಲಿ ದೂಧಸಾಗರ-ಸೋನಾಲಿಯಂ ನಿಲ್ದಾಣಗಳ ಮಧ್ಯೆ ರೈಲು ಹಳಿ ತಪ್ಪಿದ್ದರಿಂದ ಹದಗೆಟ್ಟಿದ್ದ ಹಳಿ ದುರಸ್ತಿ ಕಾರ್ಯ ಸೋಮವಾರ ಸಂಜೆ ವೇಳೆಗೆ ಪೂರ್ಣಗೊಂಡಿತು.

ಹುಬ್ಬಳ್ಳಿ:

ಕರ್ನಾಟಕ-ಗೋವಾ ಮಾರ್ಗದಲ್ಲಿ ದೂಧಸಾಗರ-ಸೋನಾಲಿಯಂ ನಿಲ್ದಾಣಗಳ ಮಧ್ಯೆ ರೈಲು ಹಳಿ ತಪ್ಪಿದ್ದರಿಂದ ಹದಗೆಟ್ಟಿದ್ದ ಹಳಿ ದುರಸ್ತಿ ಕಾರ್ಯ ಸೋಮವಾರ ಸಂಜೆ ವೇಳೆಗೆ ಪೂರ್ಣಗೊಂಡಿತು. ಸೋಮವಾರ ರಾತ್ರಿ ಗೂಡ್ಸ್‌ ರೈಲಿನ ಪ್ರಾಯೋಗಿಕ ಸಂಚಾರ ನಡೆಸಿ ಪರೀಕ್ಷಿಸಲಾಯಿತು. ಮಂಗಳವಾರ ಮಧ್ಯಾಹ್ನ ಪ್ರಯಾಣಿಕರ ರೈಲಿನ ಪ್ರಾಯೋಗಿಕವಾಗಿ ಸಂಚರಿಸಲಿದೆ.

ಆ. 9ರಂದು ರಾತ್ರಿ 58 ಬೋಗಿಗಳಿದ್ದ ಗೂಡ್ಸ್‌ ರೈಲು ಹಳಿ ತಪ್ಪಿತ್ತು. ಬರೋಬ್ಬರಿ 17 ಬೋಗಿಗಳು ಹಳಿ ತಪ್ಪಿದ್ದವು. ಬೋಗಿಗಳು ಹಳಿ ತಪ್ಪಿದ್ದರಿಂದ ಸರಿಸುಮಾರು 700 ಮೀಟರ್‌ ಉದ್ದದ ಹಳಿಯೂ ಸಂಪೂರ್ಣ ಹದಗೆಟ್ಟಿತ್ತು. ಬೋಗಿಗಳಲ್ಲಿದ್ದ ಕಲ್ಲಿದ್ದಲು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಅವುಗಳನ್ನೆಲ್ಲ ಸರಿಪಡಿಸಬೇಕಿತ್ತು. ಇದರಿಂದಾಗಿ ಹಳಿ ತಪ್ಪಿದ್ದ ರೈಲಿನ ಬೋಗಿಗಳನ್ನು ಹಳಿಗೆ ತರುವ ಜತೆಗೆ ಹದಗೆಟ್ಟಿದ್ದ ಹಳಿಯನ್ನು ಮತ್ತೆ ದುರಸ್ತಿ ಮಾಡಬೇಕಿತ್ತು. ನೈಋತ್ಯ ರೈಲ್ವೆ ವಲಯದ ನೂರಾರು ಜನ ಸಿಬ್ಬಂದಿ ಬರೋಬ್ಬರಿ 4 ದಿನ ಕಾರ್ಯಾಚರಣೆ ನಡೆಸಿ ಹಳಿ ಸರಿಪಡಿಸಿದ್ದಾರೆ. ಹದಗೆಟ್ಟಿದ್ದ 900 ಮೀಟರ್‌ ಹಳಿ ಹೊಸದಾಗಿಯೇ ಅಳವಡಿಸಲಾಗಿದೆ. ಈ ಅಳವಡಿಕೆ ಕಾರ್ಯವೂ ಸೋಮವಾರ ಸಂಜೆವರೆಗೂ ನಡೆಯಿತು.

ಸಂಜೆ ವೇಳೆ ಗೂಡ್ಸ್‌ ರೈಲಿನ ಎಂಜಿನ್‌ನ್ನು ಪ್ರಾಯೋಗಿಕವಾಗಿ ಸಂಚರಿಸಿ ಪರೀಕ್ಷೆ ಕೂಡ ಮಾಡಲಾಯಿತು. ಗೂಡ್ಸ್‌ ರೈಲು ಸಂಚರಿಸಲು ಯಾವುದೇ ಸಮಸ್ಯೆಯಿಲ್ಲ ಎಂದು ಹಸಿರು ನಿಶಾನೆಯನ್ನು ತಾಂತ್ರಿಕ ಅಧಿಕಾರಿ ವರ್ಗ ನೀಡಿದೆ. ಮತ್ತೊಮ್ಮೆ ಮಂಗಳವಾರ ಮಧ್ಯಾಹ್ನದ ವರೆಗೂ ಪ್ರಾಯೋಗಿಕವಾಗಿ ರೈಲುಗಳನ್ನು ಸಂಚಾರ ನಡೆಸಿ ಬಳಿಕವಷ್ಟೇ ಪ್ರಯಾಣಿಕರ ರೈಲು ಸಂಚಾರಕ್ಕೆ ಹಸಿರು ನಿಶಾನೆ ನೀಡಲಾಗುವುದು ಎಂದು ವಲಯದ ಮುಖ್ಯ ಸಂಪರ್ಕಾಧಿಕಾರಿ ಮಂಜುನಾಥ ಕನಮಡಿ ತಿಳಿಸಿದ್ದಾರೆ.

ವಲಯದ ಮಹಾಪ್ರಬಂಧಕ ಅರವಿಂದ ಶ್ರೀವಾಸ್ತವ, ಎಜಿಎಂ ಕೆ.ಎಸ್. ಜೈನ್ ಮತ್ತು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಹರ್ಷ ಖರೆ ಅವರು ಹಳಿಗಳ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಯಿತು.

25 ವಿಶೇಷ ಬಸ್‌:

ಈ ನಡುವೆ ದೂದಸಾಗರ ಬಳಿ ರೈಲು ಹಳಿ ತಪ್ಪಿದ್ದರಿಂದ ಶಾಲಿಮಾರ್‌- ವಾಸ್ಕೋಡಿಗಾಮಾ ರೈಲು ಹುಬ್ಬಳ್ಳಿಯವರೆಗೆ ಮಾತ್ರ ಸಂಚರಿಸಿತು. ಈ ಹಿನ್ನೆಲೆಯಲ್ಲಿ ರೈಲಿನಲ್ಲಿದ್ದ 1200 ಪ್ರಯಾಣಿಕರನ್ನುಹುಬ್ಬಳ್ಳಿಯಿಂದ 25 ವಿಶೇಷ ಬಸ್‌ ವ್ಯವಸ್ಥೆ ಮಾಡಿ ವಾಸ್ಕೋಡಿಗಾಮಾದವರೆಗೂ ಕಳುಹಿಸಲಾಯಿತು.