ಸಾರಾಂಶ
ಹುಬ್ಬಳ್ಳಿ:
ಕರ್ನಾಟಕ-ಗೋವಾ ಮಾರ್ಗದಲ್ಲಿನ ದೂದ್ ಸಾಗರ ಬಳಿ ಶುಕ್ರವಾರ ಬೆಳಗ್ಗೆ ಹಳಿ ತಪ್ಪಿದ ಗೂಡ್ಸ್ ರೈಲಿನ 17 ಬೋಗಿಗಳ ಪೈಕಿ 14 ಬೋಗಿಗಳನ್ನು ಶನಿವಾರ ಮಧ್ಯಾಹ್ನದ ವರೆಗೆ ಮರಳಿ ಹಳಿಗೆ ಸರಿಸಲಾಗಿದೆ. ಇನ್ನುಳಿದ ಮೂರು ಬೋಗಿಗಳನ್ನು ಹಳಿಗೆ ಸೇರಿಸುವ ಕಾರ್ಯಾಚರಣೆ ಮುಂದುವರಿದಿದ್ದು, ಭಾನುವಾರ ಬೆಳಗ್ಗೆ ಪೂರ್ಣಗೊಳ್ಳುವ ಕುರಿತು ರೈಲ್ವೆ ಇಲಾಖೆ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಈ ಘಟನೆಯಲ್ಲಿ ಒಟ್ಟು 58 ಬೋಗಿಗಳ ಪೈಕಿ 17 ಬೋಗಿಗಳು ಹಳಿ ತಪ್ಪಿದ್ದವು. ಬೋಗಿಗಳನ್ನು ಮರಳಿ ಹಳಿಗೆ ಸೇರಿಸುವ ಕಾರ್ಯಾಚರಣೆಯನ್ನು ನೈಋತ್ಯ ರೈಲ್ವೆ ವಲಯದ ಅಧಿಕಾರಿಗಳು ಹಾಗೂ ಸಿಬ್ಬಂದಿ ತ್ವರಿತಗತಿಯಿಂದ ಪ್ರಾರಂಭಿಸಿದರು. ಈ ಹಿನ್ನೆಲೆಯಲ್ಲಿ ಶುಕ್ರವಾರದಂದು ಕೆಲ ರೈಲುಗಳ ಸಂಚಾರ ತಾತ್ಕಾಲಿಕವಾಗಿ ರದ್ದುಗೊಳಿಸಿದ್ದರೆ, ಇನ್ನೂ ಕೆಲವು ರೈಲುಗಳ ಸಂಚಾರದ ಮಾರ್ಗ ಬದಲಾಯಿಸಲಾಗಿತ್ತು.
ಶನಿವಾರವೂ ಸಹ ಶಾಲಿಮಾರ-ವಾಸ್ಕೊ ರೈಲು ಎಸ್‌ಎಸ್ ಎಸ್ ಹುಬ್ಬಳ್ಳಿ ನಿಲ್ದಾಣದ ವರೆಗೆ ಮಾತ್ರ ಸಂಚರಿಸಿತು. ಗೂಡ್ಸ್ ರೈಲಿನ ಬೋಗಿಗಳನ್ನು ಮರಳಿ ಹಳಿಗೆ ಸೇರಿಸುವ ಕಾರ್ಯಾಚರಣೆ ತೀವ್ರಗತಿಯಲ್ಲಿ ನಡೆದಿದ್ದು, ಭಾನುವಾರದ ವರೆಗೆ ರೈಲುಗಳ ಸಂಚಾರ ಎಂದಿನಂತೆ ಪ್ರಾರಂಭಗೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ. ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಅರವಿಂದ ಶ್ರೀವಾಸ್ತವ ಹಾಗೂ ಇತರ ಹಿರಿಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಕಾರ್ಯಾಚರಣೆಗೆ ಮಾರ್ಗದರ್ಶನ ನೀಡುತ್ತಿದ್ದಾರೆ.ಗೋವಾಕ್ಕೆ 27 ವಿಶೇಷ ಬಸ್:ಗೂಡ್ಸ್ ರೈಲು ಹಳಿತಪ್ಪಿದ ಹಿನ್ನೆಲೆ ಗೋವಾ ಹಾಗೂ ಕರ್ನಾಟಕದ ನಡುವಿನ ರೈಲು ಸಂಪರ್ಕ ಕಡಿತವಾಗಿದ್ದರಿಂದ ಪ್ರಯಾಣಿಕರ ಅನುಕೂಲಕ್ಕಾಗಿ ಸಾರಿಗೆ ಸಂಸ್ಥೆಯಿಂದ ಹುಬ್ಬಳ್ಳಿಯಿಂದ ಗೋವಾಕ್ಕೆ 27 ವಿಶೇಷ ಬಸ್‌ಗಳ ವ್ಯವಸ್ಥೆ ಕಲ್ಪಿಸಲಾಯಿತು. ಶಾಲಿಮಾರ್‌ನಿಂದ ವಾಸ್ಕೊಗೆ ಹೋಗಬೇಕಾಗಿದ್ದ ಅಮರಾವತಿ ಎಕ್ಸ್‌ಪ್ರೆಸ್ ರೈಲು ಹುಬ್ಬಳ್ಳಿಯಲ್ಲಿ ನಿಲ್ಲಿಸಲಾಯಿತು. ಈ ರೈಲಿನಲ್ಲಿ 1300ಕ್ಕೂ ಹೆಚ್ಚು ಪ್ರಯಾಣಿಕರು ವಾಸ್ಕೊ ರೈಲು ನಿಲ್ದಾಣದ ವರೆಗೆ ಪ್ರಯಾಣ ಮಾಡುವವರಿದ್ದರು. ಇವರಿಗೆ ಹುಬ್ಬಳ್ಳಿಯಿಂದ ವಿಶೇಷ ಬಸ್ ವ್ಯವಸ್ಥೆ ಮಾಡುವಂತೆ ನೈಋತ್ಯ ರೈಲ್ವೆ ಇಲಾಖೆ ಅಧಿಕಾರಿಗಳು ಸಾರಿಗೆ ಸಂಸ್ಥೆಗೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ನಿರ್ದೇಶದ ಮೇರೆಗೆ 27 ಬಸ್‌ಗಳ ವ್ಯವಸ್ಥೆ ಮಾಡಿದ ಹಿನ್ನೆಲೆಯಲ್ಲಿ ಬಸ್‌ಗಳು ವಾಸ್ಕೋ, ಮಡಗಾಂವ ಹಾಗೂ ಪಣಜಿ ಕಡೆಗೆ ತೆರಳಿದವು. ವಿಭಾಗೀಯ ತಾಂತ್ರಿಕ ಎಂಜಿನಿಯರ್ ಪಿ.ವೈ. ಗಡಾದ, ಡಿಪೋ ವ್ಯವಸ್ಥಾಪಕರಾದ ರೋಹಿಣಿ, ನಾಗರಾಜ, ಮುನ್ನಾಸಾಬ್, ಸಹಾಯಕ ಸಂಚಾರ ವ್ಯವಸ್ಥಾಪಕ ಐ.ಜಿ. ಮಾಗಾಮಿ, ನಿಲ್ದಾಣಾಧಿಕಾರಿ ಹಂಚಾಟೆ, ಸಂತೋಷ, ದಾವಲಸಾಬ ಬೂದಿಹಾಳ ಮತ್ತಿತರರು ವಿಶೇಷ ಬಸ್ ಗಳ ಸುಗಮ ಸಂಚಾರದ ಮೇಲ್ವಿಚಾರಣೆ ಮಾಡಿದರು.