ಉತ್ತಮವಾಗಿ ಕೆಲಸ ನಿರ್ವಹಿಸದರೆ ಹೆಸರು ಶಾಶ್ವತ

| Published : Aug 11 2024, 01:31 AM IST

ಸಾರಾಂಶ

ಜನಪರವಾದ ಕೆಲಸಗಳನ್ನು ಮಾಡಿ ಸಾರ್ವಜನಿಕರು ಮತ್ತು ಕಂದಾಯ ಇಲಾಖೆಯ ಸಿಬ್ಬಂದಿಯ ಮನ ಗೆದ್ದಿದ್ದು,

ಕನ್ನಡಪ್ರಭ ವಾರ್ತೆ ಕೆ.ಆರ್. ನಗರ

ಸರ್ಕಾರಿ ಅಧಿಕಾರಿಗಳಾಗಿ ಕೆಲಸ ಮಾಡುವವರು ತಮ್ಮ ಸೇವಾವಧಿಯಲ್ಲಿ ಉತ್ತಮವಾಗಿ ಕೆಲಸ ನಿರ್ವಹಿಸಿದರೆ ಅವರ ಹೆಸರು ಜನ ಮಾನಸದಲ್ಲಿ ಶಾಶ್ವತವಾಗಿ ಉಳಿಯಲಿದೆ ಎಂದು ಸಾಲಿಗ್ರಾಮ ತಹಸೀಲ್ದಾರ್ ಸೋಮನಗೌಡ ಎಸ್. ನರಗುಂದ್ ಹೇಳಿದರು.

ಕೆ.ಆರ್. ನಗರ ತಾಲೂಕಿನಲ್ಲಿ ಒಂದು ವರ್ಷ ಸೇವೆ ಸಲ್ಲಿಸಿ ಕಡೂರಿಗೆ ವರ್ಗಾವಣೆಗೊಂಡ ತಹಸೀಲ್ದಾರ್ ಸಿ.ಎಸ್. ಪೂರ್ಣಿಮಾ ಅವರಿಗೆ ಸಹೊದ್ಯೋಗಿಗಳು ಮತ್ತು ಕಚೇರಿ ಕಚೇರಿ ಸಿಬ್ಬಂದಿ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

ನಾವು ಪ್ರಾಮಾಣಿಕರಾಗಿ ಕರ್ತವ್ಯ ಮಾಡಿದರೆ ಸರ್ಕಾರದ ಸವಲತ್ತುಗಳು ಅರ್ಹ ಜನರ ಮನೆ ಬಾಗಿಲಿಗೆ ತಲುಪಿ ಇದರಿಂದ ಸರ್ಕಾರದ ಮೂಲ ಉದ್ದೇಶ ಮತ್ತು ಆಶಯ ಈಡೇರಲಿದ್ದು ಇದನ್ನು ಅರಿತು ಅಧಿಕಾರಿಗಳು ಮತ್ತು ಸಿಬ್ಬಂದಿ ನಡೆದುಕೊಳ್ಳಬೇಕೆಂದು ಸಲಹೆ ನೀಡಿದರು.

ಒಂದು ವರ್ಷದ ಸೇವಾ ಅವಧಿಯಲ್ಲಿ ಸಿ.ಎಸ್. ಪೂರ್ಣಿಮಾ ಅವರು ಜನಪರವಾದ ಕೆಲಸಗಳನ್ನು ಮಾಡಿ ಸಾರ್ವಜನಿಕರು ಮತ್ತು ಕಂದಾಯ ಇಲಾಖೆಯ ಸಿಬ್ಬಂದಿಯ ಮನ ಗೆದ್ದಿದ್ದು, ಇದು ಅವರ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಕಡೂರು ತಹಸೀಲ್ದಾರ್ ಸಿ.ಎಸ್. ಪೂರ್ಣಿಮಾ, ಇಲ್ಲಿ ನಾನು ಕೆಲಸ ನಿರ್ವಹಿಸುವಾಗ ತಮ್ಮ ಸಹಕಾರ ನೀಡಿದ ಸಹೊದ್ಯೋಗಿಗಳು ಮತ್ತು ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿ ನೀವು ನಮ್ಮಂತಹ ಅಧಿಕಾರಿಗಳಿಗೆ ಸಹಕಾರ ನೀಡಿದರೆ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದರು.

ಕೆ.ಆರ್. ನಗರ ತಹಸೀಲ್ದಾರ್ ಜಿ. ಸುರೇಂದ್ರಮೂರ್ತಿ, ಶಿರಸ್ತೇದಾರ್ ಅಸ್ಲಾಂಬಾಷಾ, ನಿವೃತ್ತ ಗ್ರೇಡ್-2 ತಹಸೀಲ್ದಾರ್ ಕೆ.ಎಸ್. ಬಾಲಸುಬ್ರಹ್ಮಣ್ಯಂ, ಎಡಿಎಲ್‌.ಆರ್. ಶ್ರೀಕಂಠಶರ್ಮ, ಉಪತಹಸೀಲ್ದಾರ್ ಕೃಷ್ಣಮೂರ್ತಿ, ಮಾತನಾಡಿ, ಸಿ.ಎಸ್. ಪೂರ್ಣಿಮಾ ಅವರ ಕೆಲಸದ ಶೈಲಿಯ ಬಗೆ ಗುಣಗಾನ ಮಾಡಿದರು.

ಗ್ರೇಡ್ -2 ತಹಸೀಲ್ದಾರ್ ಎ.ಎಸ್. ಚಂದ್ರಶೇಖರ್, ಸಾಲಿಗ್ರಾಮ ಶಿರಸ್ತೇದಾರ್ ಎಂ.ಸಿ. ಶಿವಕುಮಾರ್, ಕಂದಾಯಾಧಿಕಾರಿ ಶಶಿ, ಕಚೇರಿ ಸಿಬ್ಬಂದಿಗಳಾದ ಎಂ.ಸಿ. ಸಣ್ಣಸ್ವಾಮಿ, ದ್ರುವ, ಯಶವಂತ್, ಮನು ಇದ್ದರು.