ಗುಡ್ಡ ಕುಸಿದಿಲ್ಲ, ಮನೆ ಬಿದ್ದಿಲ್ಲ, ಆದರೆ ಭೀತಿ ತಪ್ಪಿಲ್ಲ

| Published : Aug 11 2024, 01:31 AM IST

ಗುಡ್ಡ ಕುಸಿದಿಲ್ಲ, ಮನೆ ಬಿದ್ದಿಲ್ಲ, ಆದರೆ ಭೀತಿ ತಪ್ಪಿಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಅಮದಳ್ಳಿ ಜಡಿಗದ್ದಾದಲ್ಲಿ ಗುಡ್ಡ ಕೊರೆದು ರಸ್ತೆಯನ್ನು ಮಾಡಿರುವುದು ಗುಡ್ಡದ ಬುಡದಲ್ಲೇ ಮನೆ ಇದ್ದವರಿಗೆ ಮನೆಯಲ್ಲೇ ಮಲಗಿದರೂ ನಿದ್ದೆ ಬಾರದ ಪರಿಸ್ಥಿತಿ.

ವಸಂತಕುಮಾರ್ ಕತಗಾಲ

ಕಾರವಾರ: ಗುಡ್ಡ ಕುಸಿದಿಲ್ಲ, ಮನೆ ಬಿದ್ದಿಲ್ಲ. ಆದರೆ ಗುಡ್ಡ ಕುಸಿಯುವ ಭೀತಿ ಇವರನ್ನು ಕಾಳಜಿ ಕೇಂದ್ರಕ್ಕೆ ಕಳುಹಿಸಿದೆ. 75ರಷ್ಟು ಜನರು ಕಾಳಜಿ ಕೇಂದ್ರದಲ್ಲಿ 19 ದಿನಗಳಿಂದ ವಾಸವಾಗಿದ್ದಾರೆ. ಇದು ತಾಲೂಕಿನ ಅಮದಳ್ಳಿ ಜನತೆಗೆ ಒದಗಿದ ಸಂಕಷ್ಟ.

ಅಮದಳ್ಳಿ ಜಡಿಗದ್ದಾದಲ್ಲಿ ಗುಡ್ಡದ ಕೆಳಭಾಗದಲ್ಲಿ ಸಾಲಾಗಿ ಮನೆ ನಿರ್ಮಿಸಿಕೊಂಡಿದ್ದಾರೆ. ಗುಡ್ಡದಲ್ಲಿ ಬೃಹತ್ ಕಲ್ಲು ಬಂಡೆಗಳೂ ಇವೆ. ಈ ಗುಡ್ಡ ಕುಸಿಯುವ ಭೀತಿ ಇವರನ್ನು ಕಾಳಜಿ ಕೇಂದ್ರದತ್ತ ಎಳೆದುತಂದಿದೆ.

ಅದೂ ಜು.16ರಂದು ಅಂಕೋಲಾ ತಾಲೂಕಿನ ಶಿರೂರಿನಲ್ಲಿ ಗುಡ್ಡ ಕುಸಿದು 11 ಜನರು ಸಮಾಧಿಯಾದ ಘಟನೆ ಇಡಿ ಜಿಲ್ಲೆಯನ್ನು ತಲ್ಲಣಗೊಳಿಸಿತು. ಸಹಜವಾಗಿ ಗುಡ್ಡದ ಕೆಳಭಾಗದಲ್ಲಿ ಇರುವವರೆಲ್ಲ ಬೆಚ್ಚಿಬಿದ್ದರು. ಅದರಲ್ಲೂ ಅಮದಳ್ಳಿ ಜಡಿಗದ್ದಾದಲ್ಲಿ ಗುಡ್ಡ ಕೊರೆದು ರಸ್ತೆಯನ್ನು ಮಾಡಿರುವುದು ಗುಡ್ಡದ ಬುಡದಲ್ಲೇ ಮನೆ ಇದ್ದವರಿಗೆ ಮನೆಯಲ್ಲೇ ಮಲಗಿದರೂ ನಿದ್ದೆ ಬಾರದ ಪರಿಸ್ಥಿತಿ. ಮುಂಜಾಗರೂಕತಾ ಕ್ರಮವಾಗಿ ಜು. 24ರಂದು ಅಮದಳ್ಳಿ ಜಡಿಗದ್ದಾದ 20-22 ಕುಟುಂಬಗಳನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು. ಅಂದಿನಿಂದ ಇಂದಿನ ತನಕ ಮುಂದೇನು ಎಂದು ತಿಳಿಯದೆ ಇವರು ಕಾಳಜಿ ಕೇಂದ್ರದಲ್ಲೇ ವಾಸಿಸುವಂತಾಗಿದೆ.

ಹಾಗೋ ಹೀಗೂ ಮಾಡಿ ಸ್ವಂತದ್ದಾದ ಸೂರು ನಿರ್ಮಿಸಿಕೊಂಡರೂ ನಿರಾತಂಕವಾಗಿ ವಾಸ ಮಾಡಲು ಸಾಧ್ಯವಾಗುತ್ತಿಲ್ಲ. ಗಂಜಿ ಬೇಯಿಸಲು, ನಿಶ್ಚಿಂತೆಯಿಂದ ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ಲ.

ಹಬ್ಬಗಳು ಬಂತೆಂದರೆ ನೆಂಟರು, ಆಪ್ತರನ್ನು ಕರೆದು ಊಟ, ತಿಂಡಿ ಸಮಾರಾಧನೆ ಮಾಡಬೇಕು. ನಾಗರ ಪಂಚಮಿ, ಆಷಾಢ ಏಕಾದಶಿ ಎಲ್ಲ ಅನ್ನ, ಸಾರಿನಲ್ಲೇ ಕಳೆದುಹೋಗಿದೆ. ಗುಡ್ಡದ ಭೂತದಿಂದಾಗಿ ಇನ್ನೆಷ್ಟು ದಿನ ಇವರು ಕಾಳಜಿ ಕೇಂದ್ರದಲ್ಲೇ ಕಳೆಯಬೇಕು ಎನ್ನುವುದು ಪ್ರಶ್ನೆಯಾಗಿದೆ. ಶಾಲಾ ಕೊಠಡಿಗಳಲ್ಲಿ ಹೆಚ್ಚಿನ ಸೌಲಭ್ಯವೂ ಇಲ್ಲದೆ ಹೇಗೆ ಇರಬೇಕು ಎಂದು ತೋಚದಾಗಿದೆ.

ಈ ನಡುವೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಕೆ. ಹಾಗೂ ತಹಸೀಲ್ದಾರ ಎನ್.ಎಫ್. ನೊರೋನಾ ಪ್ರಯತ್ನದಿಂದ ಗುಡ್ಡ ಕುಸಿಯುವ ಸಾಧ್ಯತೆ ಇದೆಯೇ. ಇಲ್ಲವೇ ಎನ್ನುವ ಬಗ್ಗೆ ಗ್ರಾಮ ಪಂಚಾಯಿತಿ, ನೌಕಾನೆಲೆ, ಅರಣ್ಯ ಇಲಾಖೆ, ಎಂಜಿನಿಯರಿಂಗ್ ವಿಭಾಗಗಳಿಂದ ಸಂಯುಕ್ತವಾಗಿ ಸಮೀಕ್ಷೆ ನಡೆದಿದೆ. ಈ ಸಮೀಕ್ಷಾ ವರದಿಯ ಮೇಲೆ ಇವರ ಭವಿಷ್ಯ ಅವಲಂಬಿಸಿದೆ. ಸಮೀಕ್ಷೆ

ಈಗ ಜಂಟಿ ಸಮೀಕ್ಷೆ ನಡೆದಿದೆ. ಇನ್ನೊಂದು ವಾರದೊಳಗೆ ವರದಿ ಕೈಸೇರಲಿದೆ. ಇವರು ತಮ್ಮ ಮನೆಗಳಲ್ಲಿ ವಾಸ್ತವ್ಯ ಮಾಡುವ ಬಗ್ಗೆ ಪೂರಕ ವರದಿ ಬಂದಲ್ಲಿ ಸಮಸ್ಯೆ ಒಂದು ವಾರದಲ್ಲೇ ಇತ್ಯರ್ಥವಾಗಲಿದೆ.

ಎನ್.ಎಫ್. ನೊರೋನ್ನಾ, ತಹಸೀಲ್ದಾರ್‌