ಬಸವಣ್ಣನವರನ್ನು ಜಾತಿ, ಧರ್ಮದ ಎಲ್ಲೆ ಮೀರಿದ ಮಹಾನ್ ಮಾನವತಾವಾದಿಯಾಗಿ ಇಡೀ ಸಮಾಜ ಒಪ್ಪಿಕೊಂಡಿದೆ. ಇಂತಹ ಮಹಾನ್ ವ್ಯಕ್ತಿಯ ಕುರಿತು ಅವಹೇಳನಕಾರಿ ಬರಹ ಸಹಿಸಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ, ಬಿಜೆಪಿ ಮುಖಂಡ ಮುರುಗೇಶ ನಿರಾಣಿ ಹೇಳಿದರು.

ಹಿರೇಕೆರೂರು: ಜಗಜ್ಯೋತಿ ಬಸವಣ್ಣನವರ ವ್ಯಕ್ತಿತ್ವಕ್ಕೆ ಕಪ್ಪುಚುಕ್ಕೆ ತರುವ ರೀತಿಯಲ್ಲಿ ಲೇಖಕ ರವಿ ಹಂಜ್ ಅವರು ಪುಸ್ತಕ ಬರೆದಿರುವುದು ಖಂಡನೀಯ. ಬಸವಣ್ಣನವರನ್ನು ಜಾತಿ, ಧರ್ಮದ ಎಲ್ಲೆ ಮೀರಿದ ಮಹಾನ್ ಮಾನವತಾವಾದಿಯಾಗಿ ಇಡೀ ಸಮಾಜ ಒಪ್ಪಿಕೊಂಡಿದೆ. ಇಂತಹ ಮಹಾನ್ ವ್ಯಕ್ತಿಯ ಕುರಿತು ಅವಹೇಳನಕಾರಿ ಬರಹ ಸಹಿಸಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ, ಬಿಜೆಪಿ ಮುಖಂಡ ಮುರುಗೇಶ ನಿರಾಣಿ ಹೇಳಿದರು.ಪಟ್ಟಣದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ರವಿ ಹಂಜ್ ಅವರ ಪುಸ್ತಕದ ವಿರುದ್ಧ ರಾಜ್ಯಾದ್ಯಂತ ವಿರೋಧ ವ್ಯಕ್ತವಾಗುತ್ತಿದೆ. ಅಖಿಲ ಭಾರತ ವೀರಶೈವ ಮಹಾಸಭೆಯ ಉಪಾಧ್ಯಕ್ಷನಾಗಿ ಈ ಕೃತ್ಯವನ್ನು ಖಂಡಿಸುತ್ತೇನೆ. ಬಸವಣ್ಣನವರು ಯಾವುದೇ ಜಾತಿ, ಧರ್ಮಕ್ಕೆ ಸೀಮಿತವಾಗದೆ ಸಮಾಜದ ಎಲ್ಲ ವರ್ಗದವರ ಏಳಿಗೆಗಾಗಿ ಶ್ರಮಿಸಿದ್ದಾರೆ. ಅವರ ವಚನಗಳು ಹಲವು ಪ್ರಾದೇಶಿಕ ಭಾಷೆಗಳಿಗೆ ಭಾಷಾಂತರಗೊಂಡಿವೆ. ಇಂತಹ ಮಹಾನ್ ಪುಣ್ಯಾತ್ಮ ಕರ್ನಾಟಕದಲ್ಲಿ ಜನಿಸಿರುವುದು ನಮ್ಮ ಹೆಮ್ಮೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರೂ ಪ್ರಶಂಸಿಸಿದ್ದಾರೆ ಎಂದರು.ಸರ್ಕಾರ ಪುಸ್ತಕ ಮುಟ್ಟುಗೋಲು ಹಾಕಿಕೊಳ್ಳುವುದಾಗಿ ತಿಳಿಸಿದೆ. ಪುಸ್ತಕ ಬರೆದವರನ್ನು ಬಂಧಿಸುವುದಷ್ಟೇ ಅಲ್ಲ, ಕಠಿಣ ಶಿಕ್ಷೆ ವಿಧಿಸಬೇಕು. ಇಂತಹ ಪುಸ್ತಕ ಪ್ರಕಟಿಸಲು ಸಲಹೆ ನೀಡಿದವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಹಿಂದೆ ಕಾಂಗ್ರೆಸ್ ಪಕ್ಷದವರು ವೀರಶೈವ-ಲಿಂಗಾಯತ ಸಮುದಾಯವನ್ನು ಒಡೆಯುವ ಪ್ರಯತ್ನ ಮಾಡಿದ್ದರು. ೨೦೧೪ರಿಂದ ಆರಂಭವಾದ ಈ ಪ್ರಯತ್ನಕ್ಕೆ ೨೦೧೮ರ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಿದ್ದರು. ಈಗಲೂ ಅದೇ ರೀತಿಯ ಬೆಳವಣಿಗೆ ಮುಂದುವರಿದರೆ ೨೦೨೮ರ ಚುನಾವಣೆಯಲ್ಲಿಯೂ ಕಾಂಗ್ರೆಸ್‌ಗೆ ಜನರು ತಕ್ಕ ಉತ್ತರ ನೀಡಲಿದ್ದಾರೆ. ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಜನರ ಗಮನ ಬೇರೆಡೆ ಸೆಳೆಯುತ್ತಿದೆ ಎಂದು ಆರೋಪಿಸಿದರು.ಬಾಕಿ ಪಾವತಿ ಆರೋಪ ಸಾಬೀತುಪಡಿಸಿ: ತಮ್ಮ ಸಕ್ಕರೆ ಕಾರ್ಖಾನೆಗಳು ರೈತರಿಗೆ ಬಾಕಿ ಹಣ ಪಾವತಿಸಿಲ್ಲ ಎಂಬ ಸಚಿವ ರುದ್ರಪ್ಪ ಲಮಾಣಿ ಅವರ ಹೇಳಿಕೆಗೆ ತಿರುಗೇಟು ನೀಡಿದ ನಿರಾಣಿ, ನನ್ನ ಕಾರ್ಖಾನೆಗಳು ರೈತರಿಗೆ ಬಾಕಿ ಉಳಿಸಿಕೊಂಡಿರುವುದನ್ನು ಸಚಿವರು ಸಾಬೀತುಪಡಿಸಿದರೆ ನನ್ನ ಕಾರ್ಖಾನೆಗಳನ್ನೇ ಅವರ ಹೆಸರಿಗೆ ಮಾಡಿಕೊಡುತ್ತೇನೆ. ಒಂದು ವೇಳೆ ಅವರ ಆರೋಪ ಸುಳ್ಳೆಂದು ಸಾಬೀತಾದರೆ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆಯೇ ಎಂದು ಸವಾಲು ಹಾಕಿದರು.ವಿಜಯೇಂದ್ರ ಮುಂದುವರಿಕೆ ಹೈಕಮಾಂಡ್‌ಗೆ ಬಿಟ್ಟಿದ್ದು: ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ವಿಚಾರವಾಗಿ ಮಾತನಾಡಿದ ಅವರು, ಪಕ್ಷದ ಬೈಲಾ ಪ್ರಕಾರ ರಾಜ್ಯಾಧ್ಯಕ್ಷರ ಅವಧಿ ಮೂರು ವರ್ಷಗಳಾಗಿದ್ದು, ವಿಜಯೇಂದ್ರ ಅವರ ಅವಧಿ ಮುಕ್ತಾಯಗೊಂಡಿದೆ. ಆದರೆ ಮರು ಆಯ್ಕೆ ಹಾಗೂ ಅವಧಿ ವಿಸ್ತರಣೆಗೆ ಅವಕಾಶವಿದೆ. ವಿಜಯೇಂದ್ರ ಅವರು ಉತ್ತಮವಾಗಿ ಹೋರಾಟ ನಡೆಸಿದ್ದಾರೆ. ಮೂಡಾ ಪ್ರಕರಣದಲ್ಲಿ ಹೋರಾಟ ಮಾಡಿದ್ದಾರೆ. ನಾಲ್ಕು ವಿಧಾನ ಪರಿಷತ್ ಚುನಾವಣೆಗಳಲ್ಲಿ ಗೆಲುವು ಸಾಧಿಸಿದ್ದಾರೆ. ಅವರನ್ನು ಮುಂದುವರಿಸಬೇಕೇ ಅಥವಾ ಬೇಡವೇ ಎಂಬುದನ್ನು ಪಕ್ಷದ ವರಿಷ್ಠರು ಅಳೆದು ತೂಗಿ ನಿರ್ಧರಿಸಲಿದ್ದಾರೆ ಎಂದರು.ಎಲ್ಲರೂ ಒಗ್ಗಟ್ಟಾಗಿ ಪಕ್ಷ ಸಂಘಟಿಸಲಿ: ಬಿಜೆಪಿಯ ಘರ್ ವಾಪ್ಸಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಪಕ್ಷದಿಂದ ದೂರವಾಗಿರುವವರು ಮತ್ತೆ ಒಗ್ಗೂಡಬೇಕಿದೆ. ಸಣ್ಣಪುಟ್ಟ ತಪ್ಪುಗಳನ್ನು ಮರೆತು ಎಲ್ಲರೂ ಒಂದಾಗಬೇಕು. ಚುನಾವಣೆಯಲ್ಲಿ ಸೋಲಿಸುವುದು ಸುಲಭ, ಆದರೆ ಗೆಲ್ಲಿಸುವುದು ಕಷ್ಟ. ಹೀಗಾಗಿ ಭಿನ್ನಾಭಿಪ್ರಾಯ ಬದಿಗಿಟ್ಟು ಒಗ್ಗಟ್ಟಿನಿಂದ ಚುನಾವಣೆ ಎದುರಿಸಬೇಕು. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.