ಸೇನಾಧಿಕಾರಿಗಳ ಬಗ್ಗೆ ಅವಹೇಳನ ಸಂದೇಶ: ವಕೀಲ ಬಂಧನ

| Published : Nov 24 2024, 01:46 AM IST

ಸೇನಾಧಿಕಾರಿಗಳ ಬಗ್ಗೆ ಅವಹೇಳನ ಸಂದೇಶ: ವಕೀಲ ಬಂಧನ
Share this Article
  • FB
  • TW
  • Linkdin
  • Email

ಸಾರಾಂಶ

ದೇಶ ಕಂಡ ಮಹಾನ್‌ ಸೇನಾಧಿಕಾರಿಗಳ ವಿರುದ್ಧ ಪೋಸ್ಟ್‌ ಹಾಕಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ದೇಶ ಕಂಡ ಮಹಾನ್ ಸೇನಾಧಿಕಾರಿಗಳ ವಿರುದ್ಧ ಪೋಸ್ಟ್ ಹಾಕಿದ ವ್ಯಕ್ತಿಯನ್ನು ಮಡಿಕೇರಿಯ ವಕೀಲ ಕೆ.ಆರ್.ವಿದ್ಯಾಧರ (66) ಎಂದು ಗುರುತಿಸಲಾಗಿದ್ದು, ಸುಂಟಿಕೊಪ್ಪ ಪೊಲೀಸರು ಶುಕ್ರವಾರ ರಾತ್ರಿ ಆರೋಪಿಯನ್ನು ಬಂಧಿಸಿದ್ದಾರೆ.

ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಮಡಿಕೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸೇನಾನಿಗಳ ಬಗ್ಗೆ ಅವಹೇಳನಾಕಾರಿ ಸಂದೇಶ ಹಾಕಿರುವ ಬಗ್ಗೆ ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಸ್ವಯಂ ದೂರು ದಾಖಲಿಸಿಕೊಂಡು ತನಿಖೆ ನಡೆಸಿದ್ದೇವೆ ಎಂದರು.

ದೇಶದ ಮಹಾನ್ ನಾಯಕರಾದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರ ಬಗ್ಗೆ ಸಾಮಾಜಿಕ ಜಾಲತಾಣವಾದ ವ್ಯಾಟ್ಸಾಪ್‌ನ ಸಪ್ತಸಾಗರ ಎಂಬ ಗ್ರೂಪ್‌ನಲ್ಲಿ ಶ್ರೀವತ್ಸ ಭಟ್ ಎಂಬ ಹೆಸರಿನ ಮೂಲಕ ಮಡಿಕೇರಿಯ ಕೆ.ಆರ್. ವಿದ್ಯಾಧರ್ ಅವರು ಅವಹೇಳನಕಾರಿ ಸಂದೇಶ ಪೋಸ್ಟ್ ಮಾಡಿರುವುದು ತನಿಖೆಯಿಂದ ದೃಢವಾಗಿದೆ. ಅವರ ವಿರುದ್ಧ ಸೆಕ್ಷನ್ 192, 353 (2) 319 ಬಿ.ಎನ್.ಸಿ. ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು.

ಆರೋಪಿಯನ್ನು ಶುಕ್ರವಾರ ರಾತ್ರಿ ಬಂಧಿಸಲಾಗಿದ್ದು, ಜೂನಿಯರ್ ವಕೀಲೆ ಸುಜಾತಾ ಎಂಬವರ ಮೊಬೈಲ್ ಸಿಮ್ ಅನ್ನು ವಿದ್ಯಾಧರ ಪಡೆದುಕೊಂಡು ಶ್ರೀವತ್ಸ ಭಟ್ ಎಂಬ ಹೆಸರಿನಲ್ಲಿ ನ.6ರಂದು ಸಪ್ತಸಾಗರ ಗ್ರೂಪ್‌ನಲ್ಲಿ ಸೇನೆಯ ನಾಯಕರ ಬಗ್ಗೆ ಕೆಟ್ಟ ಪದ ಬಳಕೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಅವರನ್ನು ರಾತ್ರಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದೇವೆ. ವೃತ್ತಿಯಲ್ಲಿ ವಕೀಲರಾಗಿರುವುದರಿಂದ ಬಾರ್ ಅಸೋಸಿಯೇಷನ್ ಪ್ರಮುಖರೊಂದಿಗೆ ಮಾತನಾಡಿದ್ದೇವೆ. ನ್ಯಾಯಾಲಯ ಅವರಿಗೆ ಜಾಮೀನು ಮಂಜೂರು ಮಾಡಿದೆ ಎಂದು ತಿಳಿಸಿದರು.

ಇಂತಹ ಸಂದೇಶ ಹಾಕಿರುವುದು ಯಾರೇ ಆದರೂ ತಪ್ಪು. ಈ ಬಗ್ಗೆ ಮುಂದೆ ಹೆಚ್ಚಿನ ವಿಚಾರಣೆ ಮಾಡಲಾಗುವುದು ಎಂದು ತಿಳಿಸಿದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್ ಇದ್ದರು.