ಹುಬ್ಬಳ್ಳಿ:
ಸಾಮಾಜಿಕ ಜಾಲತಾಣದಲ್ಲಿ ವೀರ ಸಾವರ್ಕರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರ ಬಳಸಿ ಅವಹೇಳನಕಾರಿ ಪೋಸ್ಟ್ ಹಾಕಿದ ವ್ಯಕ್ತಿಯನ್ನು ಬಂಧಿಸಲು ಒತ್ತಾಯಿಸಿ ಮಂಗಳವಾರ ಬಿಜೆಪಿ ಕಾರ್ಯಕರ್ತರು ಇಲ್ಲಿನ ಸಿಇಎನ್ ಸೈಬರ್ ಕ್ರೈಂ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು.Siddu Sid ಎಂಬ ಹೆಸರಿನ ಫೇಸ್‌ಬುಕ್ ಖಾತೆಯಲ್ಲಿ ಪ್ರಧಾನ ನರೇಂದ್ರ ಮೋದಿ ಹಾಗೂ ಸಾವರ್ಕರ್ ಅವರ ಚಿತ್ರ ಬಳಸಿ ಅಸಭ್ಯ, ಅಗೌರವ ಪದ ಬಳಸಿ ಪೋಸ್ಟ್ ಮಾಡಲಾಗಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದನ್ನು ಹು-ಧಾ ಮಹಾನಗರ ಬಿಜೆಪಿ ಜಿಲ್ಲಾ ಸಾಮಾಜಿಕ ಜಾಲತಾಣ ಪ್ರಕೋಷ್ಠ ತೀವ್ರವಾಗಿ ಖಂಡಿಸಿದೆ. ಈ ಕೃತ್ಯವು ಕೇವಲ ವ್ಯಕ್ತಿಗತ ಅವಮಾನವಲ್ಲದೆ, ದೇಶದ ಉನ್ನತ ಸಾಂವಿಧಾನಿಕ ಹುದ್ದೆಯ ಗೌರವಕ್ಕೆ ಧಕ್ಕೆ ತರುವ ಗಂಭೀರ ಅಪರಾಧವಾಗಿದೆ. ಇಂತಹ ದುಷ್ಕೃತ್ಯಗಳು ಸಮಾಜದಲ್ಲಿ ಅಶಾಂತಿ, ದ್ವೇಷ ಹಾಗೂ ಅಸಮಾಧಾನ ಉಂಟು ಮಾಡುವ ಸಾಧ್ಯತೆ ಹೊಂದಿದ್ದು, ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರುವಂತಿವೆ. ಆದ್ದರಿಂದ ಸಂಬಂಧಿಸಿದ ವ್ಯಕ್ತಿಯನ್ನು ತಕ್ಷಣ ಪತ್ತೆ ಹಚ್ಚಿ ಬಂಧಿಸಿ, ಭಾರತೀಯ ನ್ಯಾಯ ಸಂಹಿತೆ ಹಾಗೂ ಅನ್ವಯಿಸುವ ಸೈಬರ್ ಕಾನೂನುಗಳಡಿ ಕಠಿಣ ಕ್ರಮ ಜರುಗಿಸಬೇಕು. ವಿಳಂಬವಾದಲ್ಲಿ ಬಿಜಿಪಿಯಿಂದ ಉಗ್ರವಾದ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.ಬಳಿಕ ಸಿಇಎನ್ ಸೈಬರ್ ಕ್ರೈಂ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್‌ಗೆ ಮನವಿ ಸಲ್ಲಿಸಲಾಯಿತು. ಈ ವೇಳೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವು ಮೆಣಸಿನಕಾಯಿ, ಮಂಡಲ ಅಧ್ಯಕ್ಷ ಮಂಜುನಾಥ ಕಾಟಕರ, ಜಿಲ್ಲಾ ಸಹ-ಸಂಚಾಲಕ ಬಸವರಾಜ ಬಳಿಗಾರ, ಸದಸ್ಯರಾದ ವಿಶ್ವನಾಥ ಡೊಗಲಿಮಠ, ಪ್ರಭು ನವಲಗುಂದಮಠ, ಸುಭಾಸ ಅಥಣಿ, ರವೀಂದ್ರ ಯಲಕಾನ, ರಾಜು ಕೋರ್ಯಾಣಮಠ, ಪ್ರವೀಣ ಕುಬಸದ, ಗುರು ಬನ್ನಿಕೊಪ್ಪ, ಮಂಜುನಾಥ ಕಲಾಲ, ನರಸಯ್ಯಾ ಬಿಜವಾಡ, ಮಂಜು ಬಿಜವಾಡ, ಸವಿತಾ ಚವ್ಹಾಣ, ಪದ್ಮಾವತಿ ಚಿಗಪಲ್ಲಿ, ವಿಶಾಲ ಪೂಜಾರ, ಹಿತೇಶ ಜೈನ್, ಅಮೃತ ಕಲ್ಪವೃಕ್ಷ ಸೇರಿದಂತೆ ಹಲವರಿದ್ದರು.