ಸಾರಾಂಶ
ಫೇಸ್‌ಬುಕ್ ಖಾತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕತ್ತೆಯ ಮೇಲೆ ಕೂಡ್ರಿಸಿರುವುದು, ಮಹಿಳೆಯನ್ನು ತಬ್ಬಿಕೊಂಡಿರುವುದು ಸೇರಿದಂತೆ ವಿವಿಧ ರೀತಿಯ ಅಶ್ಲೀಲ ಭಾವಚಿತ್ರ ಹರಿಬಿಟ್ಟಿದ್ದಾನೆ.
ಕನಕಗಿರಿ:
ಪ್ರಧಾನಿ ನರೇಂದ್ರ ಮೋದಿ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಪೋಸ್ಟ್ ಹರಿಬಿಟ್ಟ ಯುವಕನೋರ್ವನ ಮೇಲೆ ಕನಕಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪಟ್ಟಣದ ಇಂದಿರಾನಗರದ ನಿವಾಸಿ ಹೊನ್ನೂರು ಹಣಗಿ ಪ್ರಕರಣ ದಾಖಲಾಗಿದ್ದು ಪೊಲೀಸರು ನೋಟಿಸ್ ನೀಡಿದ್ದಾರೆ. ಇತ ಮಂಗಳವಾರ ತನ್ನ ಫೇಸ್‌ಬುಕ್ ಖಾತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕತ್ತೆಯ ಮೇಲೆ ಕೂಡ್ರಿಸಿರುವುದು, ಮಹಿಳೆಯನ್ನು ತಬ್ಬಿಕೊಂಡಿರುವುದು ಸೇರಿದಂತೆ ವಿವಿಧ ರೀತಿಯ ಅಶ್ಲೀಲ ಭಾವಚಿತ್ರ ಹರಿಬಿಟ್ಟಿದ್ದಾನೆ. ಇದನ್ನು ಗಮಿಸಿದ ಸಾರ್ವಜನಿಕರು ಪೇದೆ ತಮ್ಮನಗೌಡ ಅವರ ಗಮನಕ್ಕೆ ತಂದಿದ್ದಾರೆ. ಆಗ ಪೇದೆ ಆರೋಪಿಯ ವಿರುದ್ಧ ಮಂಗಳವಾರ ರಾತ್ರಿ ಕನಕಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇದೀಗ ಆರೋಪಿಗೆ ನೋಟಿಸ್ ನೀಡಲಾಗಿದೆ ಎಂದು ತಿಳಿದು ಬಂದಿದೆ.ಬಂಧಿಸದಿದ್ದರೆ ಹೋರಾಟ:
ಪ್ರಧಾನಿಗೆ ಅವಹೇಳನ ಮಾಡಿದ ಆರೋಪಿ ಹೊನ್ನೂರು ಹಣಗಿಗೆ ಪಾಕಿಸ್ತಾನದೊಂದಿಗೆ ಸಂಪರ್ಕವಿದೆ. ಈ ಕುರಿತು ಉನ್ನತ ಮಟ್ಟದ ತನಿಖೆಯಾಗಬೇಕು. ಆದರೆ, ಪೊಲೀಸರು ನೋಟಿಸ್ ಕೊಟ್ಟು ಠಾಣೆಯಿಂದ ಆರೋಪಿಯನ್ನು ಮನೆಗೆ ಕಳಿಸಿದ್ದಾರೆ. ಇದು ಕಾನೂನು ಬಾಹಿರ ಘಟನೆಯಾಗಿದ್ದು ತಕ್ಷಣ ಬಂಧಿಸಬೇಕು. ದೇಶದ್ರೋಹಿ ಘಟನೆ ಕುರಿತು ಠಾಣೆಗೆ ಮಾಹಿತಿ ನೀಡಿದರೂ ಪೊಲೀಸರು ಆರೋಪಿಯನ್ನು ಸರಿಯಾದ ತನಿಖೆ ಮಾಡದೆ ಪ್ರಭಾವಿಗಳ ಒತ್ತಡಕ್ಕೆ ಮಣಿದು ಬಿಟ್ಟು ಕಳಿಸಿದ್ದಾರೆ. ತಕ್ಷಣ ಆರೋಪಿಯನ್ನು ಬಂಧಿಸದಿದ್ದರೆ ರಾಜ್ಯವ್ಯಾಪಿ ಹೋರಾಟ ಮಾಡಲಾಗುವುದು ಎಂದು ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಂಚಾಲಕ ಅಯ್ಯನಗೌಡ ಅಳ್ಳಳ್ಳಿ ಎಚ್ಚರಿಕೆ ನೀಡಿದ್ದಾರೆ.