ಸಾರಾಂಶ
ಶಿರಸಿ: ಸಾಹಿತಿ ಶಾಂತಿನಾಥ ದೇಸಾಯಿ ಕಡುಬಡತನದ ಎಲ್ಲ ಇತಿಮಿತಿಗಳ ನಡುವೆ ಬೆಳಕಿಗಾಗಿ ಹಂಬಲಿಸಿದವರು ಎಂದು ಸಾಹಿತಿ ಜಯಂತ ಕಾಯ್ಕಿಣಿ ಹೇಳಿದರು.
ನಗರದ ರಂಗಧಾಮದಲ್ಲಿ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದಿಂದ ಮಂಗಳವಾರ ಆಯೋಜಿಸಲಾದ ಸಾಹಿತ್ಯ ಸಹವಾಸ ಕಾರ್ಯಕ್ರಮದ ನಾಲ್ಕನೇ ಆವೃತ್ತಿಯನ್ನು ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಜಿಲ್ಲೆಯ ಪ್ರಮುಖ ಸಾಹಿತಿಗಳಾದ ಗೌರೀಶ ಕಾಯ್ಕಿಣಿ, ಯಶವಂತ ಚಿತ್ತಾಲ, ವಿ.ಜಿ.ಭಟ್, ಶಾಂತಿನಾಥ ದೇಸಾಯಿ ಅವರ ಸಾಹಿತ್ಯ ಅದ್ಭುತ. ಈ ಲೇಖಕರ ಕರುಳಬಳ್ಳಿಗೂ ಶಿರಸಿಯ ಜೊತೆ ಅಂತಃಕರಣದ ನಂಟಿದೆ. ಇವರೆಲ್ಲರೂ ಸಮಾಜಶೀಲವಾದ ನವ ಮಾನವತಾವಾದಕ್ಕಾಗಿ ದುಡಿದ ಜೀವಗಳು. ಇವರೆಲ್ಲರ ಕುರಿತು ಹೊಸತಲೆಮಾರಿಗೆ ಪರಿಚಯಿಸುವ ಈ ಪ್ರಯತ್ನ ಮಹತ್ವಪೂರ್ಣವಾದುದು ಎಂದರು.
ವಿ.ಜಿ. ಭಟ್ಟರ ಕವಿತೆಗಳ ಮೊನಚಾದ ವ್ಯಂಗ್ಯ, ತುಂಟತನ, ಶಾಂತಿನಾಥ ದೇಸಾಯಿಯವರು ಹಿಡಿದಿಟ್ಟುಕೊಳ್ಳುವ ಸಂಬಂಧದ ಸತ್ವಪರೀಕ್ಷೆ, ಚಿತ್ತಾಲರ ಸೂಕ್ಷ್ಮ ಸಂವೇದನಾಶೀಲತೆ ಮತ್ತು ಬರವಣಿಗೆಯ ನಿಜತ್ವ, ಗೌರೀಶ ಕಾಯ್ಕಿಣಿಯವರ ಮಾನವ ವಿಕಾಸದೆಡೆಗಿನ ಆಸಕ್ತಿ, ಸರಳತೆ, ಬದ್ಧತೆಗಳಿಂದ ನಾವು ಕಲಿಯುವುದು ತುಂಬ ಇದೆ ಎಂದು ಹೇಳಿದರು.ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಮಹೇಶ್ ಕುಮಾರ್ ನಿರೂಪಿಸಿದರು. ಮೊದಲ ಗೋಷ್ಠಿಯಲ್ಲಿ ಗೌರೀಶ ಕಾಯ್ಕಿಣಿ ಅವರ ವೈಚಾರಿಕತೆ ಕುರಿತು ಸಾಹಿತಿ ರಾಘವೇಂದ್ರ ಪಾಟೀಲ ಮಾತನಾಡಿ, ಗೌರೀಶ ಒಬ್ಬ ಜಿಜ್ಞಾಸು. ಪ್ರತ್ಯಕ್ಷ, ಉಪಮಾನ, ಶಾಸ್ತ್ರ ಪ್ರಮಾಣ, ಶಬ್ದ, ಅನುಮಾನಗಳ ಮೂಲಕ ಪ್ರಮಾಣ ಸತ್ಯ ಅರಿಯಬೇಕಾಗುತ್ತದೆ. ಅದರಲ್ಲೂ ಅನುಮಾನದ ಮೂಲಕ ನಿರೂಪಿತವಾಗುವ ಬೌದ್ಧಿಕ ಚಟುವಟಿಕೆಯಷ್ಟೇ ಸತ್ಯ ತಲುಪುವ ನಿಜವಾದ ಮಾರ್ಗ ಎಂಬುದು ಅವರ ನಂಬಿಕೆ. ತರ್ಕಶುದ್ಧ ವಿಚಾರದ ಬುದ್ಧಿಪ್ರಧಾನ ನೀತಿಯೇ ಜ್ಞಾನಾನ್ವೇಷಣೆಯ ದಾರಿ. ಗೌರೀಶರ ಈ ಸಂಕಥನದ ಮಾದರಿಯು ವೈಜ್ಞಾನಿಕ ದೃಷ್ಟಿಕೋನವುಳ್ಳದ್ದಾಗಿದ್ದು ಇಂದಿಗೂ ಪ್ರಸ್ತುತವಾಗಿದೆ ಎಂದು ತಿಳಿಸಿದರು.
ವ್ಯಕ್ತಿ, ಸಮುದಾಯ ಮತ್ತು ಸಮಾಜ: ಯಶವಂತ ಚಿತ್ತಾಲರ ಕಥನಗಳು ಎಂಬ ವಿಷಯದ ಸುತ್ತ ಕುವೆಂಪು ವಿಶ್ವವಿದ್ಯಾಲಯದ ಲೇಖಕರು ಮತ್ತು ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕ ಪ್ರೊ.ರಾಜೇಂದ್ರ ಚೆನ್ನಿ ಮಾತನಾಡಿ, ಕನ್ನಡದ ಸಣ್ಣಕತೆಗಳೇ ನಮ್ಮ ತಲೆಮಾರಿನ ಮಂದಿಗೆ ಸಂವೇದನೆ ರೂಪಿಸಿದವು. ಕಾಫ್ಕಾನ ಕಥೆಗಳಲ್ಲಿ ಕಾಣಿಸುವ ಯೂರೋಪ್ ಹೇಗೆ ವಿಶ್ವಾತ್ಮಕವಾಗಬಲ್ಲದೋ ಹಾಗೆಯೇ ಚಿತ್ತಾಲರ ಕಥೆಗಳಲ್ಲಿ ಬರುವ ಹನೆಹಳ್ಳಿ ಮತ್ತು ಮುಂಬೈ ವಿಶ್ವಾತ್ಮಕವಾಗಬಲ್ಲದು. ಬದುಕಿನ ಒಳಗೆ ಸಾವಿರುತ್ತದೆಯೋ ಅಥವಾ ಸಾವಿನೊಳಗೆ ಬದುಕಿರುತ್ತದೋ ಎಂಬ ಜೀವಪರವಾದ ಅಸ್ತಿತ್ವದ ಹೊಳಹುಗಳು ಅವರ ಕಥೆಯ ಮೂಲ ಎಳೆಗಳು. ಶಿಕಾರಿ, ಪುರುಷೋತ್ತಮ ಮೊದಲಾದ ಕಾದಂಬರಿಗಳಲ್ಲಿ ಕೆಡುಕು ಎಂಬುದು ಮನುಷ್ಯನ ಮೂಲ ಸ್ವಭಾವವೇ ಎಂಬ ಗಂಭೀರ ಪ್ರಶ್ನೆಯನ್ನು ಚಿತ್ತಾಲರು ಎತ್ತುವುದರ ಮೂಲಕ ವರ್ತಮಾನವನ್ನು ಮೀರಿ, ಭವಿಷ್ಯದೆಡೆಗೆ ನೋಟ ಬೀರಿ ವಿಶ್ವಮಟ್ಟದ ಬರೆಹಗಾರರಾಗುತ್ತಾರೆ. ಉತ್ತರ ಕನ್ನಡದ ಬರೆಹಗಾರರಿಗೆ ಈ ಮಟ್ಟದ ಬರೆಹ ಶಕ್ತಿ ಹೇಗೆ ಪ್ರಾಪ್ತಿಯಾಯಿತು ಎಂಬುದೇ ಅಚ್ಚರಿಯ ಸಂಗತಿ ಎಂದು ತಿಳಿಸಿದರು. ನಿವೃತ್ತ ಪ್ರಾಧ್ಯಾಪಕ ರಾಜು ಹೆಗಡೆ ಗೋಷ್ಠಿಯನ್ನು ನಿರೂಪಿಸಿದರು.ವಿ.ಜಿ. ಭಟ್ಟರ ಕಾವ್ಯಮಾರ್ಗದ ಕುರಿತು ಡಾ. ಎಂ.ಜಿ.ಹೆಗಡೆ, ಶಾಂತಿನಾಥ ದೇಸಾಯಿಯವರಲ್ಲಿ ಆಧುನಿಕತೆಯ ಆಕರ್ಷಣೆಯ ಬಗ್ಗೆ ಪ್ರೊ. ಕಮಲಾಕರ ಕಡವೆ ಮಾತನಾಡಿದರು. ಎಸ್.ವಿ. ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪದವಿ ಹಂತದ ವಿದ್ಯಾರ್ಥಿಗಳಿಗಾಗಿ ನಡೆಸಲಾದ ಲೇಖನ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು.