ವಿದ್ಯಾರ್ಥಿಗಳ ಉದ್ಯೋಗಾರ್ಹತೆ ಹೆಚ್ಚಿಸುವ ಹಾಗೂ ಕೈಗಾರಿಕೆ-ಶೈಕ್ಷಣಿಕ ಸಂಸ್ಥೆಗಳ ನಡುವಿನ ಸಹಭಾಗಿತ್ವ ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಕರ್ನಾಟಕ ವಿಶ್ವವಿದ್ಯಾಲಯ ಮತ್ತು ದೇಶಪಾಂಡೆ ಕೌಶಲ್ಯ ಸಂಸ್ಥೆಯ ಮಧ್ಯೆ ಮಹತ್ವದ “ಒಡಂಬಡಿಕೆ”ಗೆ ಗುರುವಾರ ಸಹಿ ಹಾಕಲಾಗಿದೆ.

ಧಾರವಾಡ:

ವಿದ್ಯಾರ್ಥಿಗಳ ಉದ್ಯೋಗಾರ್ಹತೆ ಹೆಚ್ಚಿಸುವ ಹಾಗೂ ಕೈಗಾರಿಕೆ-ಶೈಕ್ಷಣಿಕ ಸಂಸ್ಥೆಗಳ ನಡುವಿನ ಸಹಭಾಗಿತ್ವ ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಕರ್ನಾಟಕ ವಿಶ್ವವಿದ್ಯಾಲಯ ಮತ್ತು ದೇಶಪಾಂಡೆ ಕೌಶಲ್ಯ ಸಂಸ್ಥೆಯ ಮಧ್ಯೆ ಮಹತ್ವದ “ಒಡಂಬಡಿಕೆ”ಗೆ ಗುರುವಾರ ಸಹಿ ಹಾಕಲಾಗಿದೆ.

ಕವಿವಿ ಸಿಂಡಿಕೇಟ್ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ದೇಶಪಾಂಡೆ ಫೌಂಡೇಶನ್ ಸಂಸ್ಥಾಪಕ ಡಿ.ಎಸ್. ದೇಶಪಾಂಡೆ ಮಾತನಾಡಿ, ಈ ಒಡಂಬಡಿಕೆಯು ವಿವಿಗೆ ಸಂಯೋಜಿತವಾಗಿರುವ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಕೈಗಾರಿಕೆಗಳ ಅಗತ್ಯಗಳಿಗೆ ಅನುಗುಣವಾದ ಕೌಶಲ್ಯಾಭಿವೃದ್ಧಿ ಉದ್ಯೋಗ ಸನ್ನದ್ಧತಾ ತರಬೇತಿ, ಇಂಟರ್ನಶಿಪ್‌ ಅವಕಾಶಗಳು, ಕೈಗಾರಿಕಾ ತಜ್ಞರೊಂದಿಗೆ ಸಂವಾದ, ಉದ್ಯಮಶೀಲತಾ ಉತ್ತೇಜನ ಹಾಗೂ ಉದ್ಯೋಗ ನಿಯೋಜನೆ ಅವಕಾಶ ಒದಗಿಸಲು, ಶೈಕ್ಷಣಿಕ ಕೌಶಲ್ಯಗಳ ಕಲಿಕೆ ಕೈಗಾರಿಕಾ ನಿರೀಕ್ಷೆಗಳ ನಡುವಿನ ಅಂತರ ಕಡಿಮೆಗೊಳಿಸುವ ಗುರಿ ಹೊಂದಿದೆ ಎಂದರು.

ಪದವಿ ಹಂತದಲ್ಲಿ ಪದವಿ ಓದುವಾಗಲೇ ಇಲೆಕ್ಟಿವ್‌ ಕೋರ್ಸ್‌ ಅಧ್ಯಯನ ಮಾಡಲು ಅವಕಾಶವಿದೆ. ಅಲ್ಲದೆ ಅದಕ್ಕೆ ಕ್ರೆಡಿಟ್ ಕೂಡ ಇರಿಸಲಾಗಿದೆ. ಇಂಗ್ಲಿಷ್ ಕೌಶಲ್ಯ, ತಾಂತ್ರಿಕ ಕೌಶಲ್ಯ, ವ್ಯಕ್ತಿತ್ವ ನಿರ್ಮಾಣಕ್ಕೆ ಪೂರಕ ಟಾಪ್‌ ಅಪ್ ಪೋಗ್ರಾಮ್ ಅಡಿ ಕೌಶಲ್ಯಗಳ ವರ್ಧನೆಗೆ ಪೂರಕ ಪಠ್ಯಕ್ರಮವನ್ನು ತಜ್ಞರಿಂದ ತಯಾರಿಸಿದ್ದು, ಮೂರು ತಿಂಗಳ ಕೋರ್ಸ್‌ನ್ನು ಪದವಿ ವಿದ್ಯಾರ್ಥಿಗಳಿಗೆ ತಯಾರಿಸಿ ಬೋಧಿಸಲಾಗುತ್ತಿದೆ. ಇಲ್ಲಿ ತರಬೇತಿ ಪಡೆದ ಶೇ. 90ರಷ್ಟು ವಿದ್ಯಾರ್ಥಿಗಳು ಉದ್ಯೋಗ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಕವಿವಿ ಕುಲಪತಿ ಪ್ರೊ. ಎ.ಎಂ. ಖಾನ್, ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಉದ್ಯೋಗಕ್ಕೆ ಬೇಕಾಗಿರುವ ಅಗತ್ಯ ಕೌಶಲ್ಯಗಳನ್ನು ವಿವಿ ಜತೆಗೆ ದೇಶಪಾಂಡೆ ಫೌಂಡೇಶನ್ ಕೈಜೋಡಿಸಿದೆ. ವಿದ್ಯಾರ್ಥಿಗಳು ವಿವಿಧ ಕೌಶಲ್ಯ ಕಲಿಯುವುದು ಈಗ ಅನಿವಾರ್ಯ ಎಂದರು.

ದೇಶಪಾಂಡೆ ಕೌಶಲ್ಯಾಭಿವೃದ್ಧಿ ಕೇಂದ್ರದ ಸಿಇಒ ಪಿ.ಎನ್. ನಾಯ್ಕ, ಕೌಶಲ್ಯ ನೋಡಲ್ ಅಧಿಕಾರಿ ರಾಜ ಮಹಮ್ಮದ್, ನೋಡಲ್ ಅಧಿಕಾರಿ ಪ್ರೊ. ರಾಮಾಂಜನಯಲು, ಕುಲಸಚಿವ ಪ್ರೊ. ಮೃತ್ಯುಂಜಯ ಅಗಡಿ, ಪ್ರೊ. ಎ.ಎಂ. ಕಡಕೋಳ, ಪ್ರದೀಪಕುಮಾರ ಇದ್ದರು.