ಸಾರಾಂಶ
ಮಾದಿಗ ಸಮುದಾಯವರಾಗಿದ್ದರೂ ದಾಖಲೆಗಳಲ್ಲಿ ತಪ್ಪಾಗಿ ಮೇತ್ರಿ ಎಂದು ಸೇರಿಸಿದ ಕಾರಣಕ್ಕೆ ಆಗಿರುವ ಅನ್ಯಾಯವನ್ನು ಸರ್ಕಾರ ಸರಿಪಡಿಸಬೇಕು.
ಹಳಿಯಾಳ: ಮಾದಿಗ ಸಮುದಾಯವರಾಗಿದ್ದರೂ ದಾಖಲೆಗಳಲ್ಲಿ ತಪ್ಪಾಗಿ ಮೇತ್ರಿ ಎಂದು ಸೇರಿಸಿದ ಕಾರಣಕ್ಕೆ ಆಗಿರುವ ಅನ್ಯಾಯವನ್ನು ಸರ್ಕಾರ ಸರಿಪಡಿಸಬೇಕೆಂದು ರಾಜ್ಯ ಆಡಳಿತ ಸುಧಾರಣೆ ಆಯೋಗದ ಅಧ್ಯಕ್ಷರು ಹಾಗೂ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಆಗ್ರಹಿಸಿದ್ದಾರೆ.
ಮುಖ್ಯಮಂತ್ರಿಗೆ ಹಾಗೂ ಸಮಾಜಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರಿಗೆ ಪತ್ರವನ್ನು ಬರೆದಿದ್ದಾರೆ.ಹಳಿಯಾಳ ತಾಲೂಕಿನಲ್ಲಿ ಮೇತ್ರಿ (ಮಾದಾರ) ಸಮಾಜದ ಜನರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿದ್ದಾರೆ. ಇವರು ಮೂಲತಃ ಮಾದಿಗ ಸಂಬಂಧಿತ ಜಾತಿಗೆ ಸೇರಿದ್ದು, ಹಿರಿಯರ ಜಾತಿ ಪ್ರಮಾಣಪತ್ರದಲ್ಲಿ ಮಾದಾರ ಎಂದು ದಾಖಲಾಗಿರುವ ಅನೇಕ ಉದಾಹರಣೆಗಳಿವೆ. ಆದರೆ ಕಳೆದ 20-30 ವರ್ಷಗಳಿಂದ ಅಧಿಕಾರಿಗಳ ನಿರ್ಲಕ್ಷ್ಯದ ಪರಿಣಾಮ ಮೇತ್ರಿ ಎಂಬ ಹೆಸರಿನಲ್ಲಿ ಪ್ರಮಾಣಪತ್ರಗಳನ್ನು ನೀಡಲಾಗುತ್ತಿದ್ದು, ಇದರಿಂದ ಸಮಾಜದಲ್ಲಿ ಗೊಂದಲ ಸೃಷ್ಟಿಯಾಗಿದೆ. ಆದರೆ ಮೇತ್ರಿ ಸಮಾಜವು ಮೂಲ ಮಾದಿಗ ಸಮಾಜದ ಭಾಗವಾಗಿದ್ದರೂ, ಪ್ರಮಾಣ ಪತ್ರದ ಗೊಂದಲದ ಕಾರಣದಿಂದ ತಪ್ಪಾಗಿ ಪ್ರವರ್ಗ ಸಿ ಯಲ್ಲಿರುವ ದಲಿತರ ಗುಂಪಿಗೆ ಸೇರಿಸಿ ಆದೇಶ ಹೊರಡಿಸಲಾಗಿದೆ. ಇದರಿಂದಾಗಿ ಸಮಾಜದ ಜನರು ಸಮಸ್ಯೆಗಳಿಗೆ ಒಳಗಾಗುತ್ತಿದ್ದು, ಜಾತಿ ಪ್ರಮಾಣ ಪತ್ರದ ಗೊಂದಲವನ್ನು ಪರಿಹರಿಸಿ ಮೇತ್ರಿ ಸಮಾಜವನ್ನು ತಕ್ಷಣವೇ ಪ್ರವರ್ಗ ಎ ಮೀಸಲಾತಿಗೆ ಸೇರಿಸುವುದು ಅತೀ ಅವಶ್ಯವಾಗಿದೆ. ನನ್ನ ಕ್ಷೇತ್ರದ ಜನರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ಮೇತ್ರಿ ಸಮಾಜವನ್ನು ಪ್ರವರ್ಗ ಎ ಸಮುದಾಯದ ಮೀಸಲಾತಿಗೆ ಸೇರಿಸಲು ರಾಜ್ಯ ಸರ್ಕಾರದಿಂದ ಸೂಕ್ತ ಆದೇಶ ಹೊರಡಿಸಬೇಕೆಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.