ಅಭಿವೃದ್ಧಿಯ ನಡುವೆಯೂ ಎಂಸಿಇಗೆ ಮಸಿ ಬಳಿಯಲು ಕೆಲವರ ಯತ್ನ

| Published : May 09 2025, 12:34 AM IST

ಸಾರಾಂಶ

ದಶಕಗಳ ಇತಿಹಾಸವಿರುವ ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಗೆ ಹೊಸ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದ ಮೇಲೆ ಎಲ್ಲರನ್ನು ಸಮಾನತೆಯಿಂದ ಕಂಡು ಕಾಲೇಜು ಅಭಿವೃದ್ಧಿಯತ್ತ ಹಾಗೂ ಪಾರದರ್ಶಕವಾಗಿ ಮುಂದೆ ಸಾಗುತ್ತಿದ್ದರೂ ಕೆಲವರು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಂಸ್ಥೆಗೆ ಕೆಟ್ಟ ಹೆಸರನ್ನು ತರಲು ಮುಂದಾಗಿದ್ದಾರೆ ಎಂದು ಎಂಸಿಇ ಸಂಸ್ಥೆಯ ಅಧ್ಯಕ್ಷ ಆರ್‌.ಟಿ. ದ್ಯಾವೇಗೌಡ ಬೇಸರ ವ್ಯಕ್ತಪಡಿಸಿದರು. ಕಾಲೇಜಿನ ಅಭಿವೃದ್ಧಿಗೆ ಉತ್ತಮ ಕೆಲಸ ಮಾಡಲಾಗುತ್ತಿದ್ದು ಸಿಟಿ ಬಸ್ ನಿಲ್ದಾಣದ ಎದುರಿನ ವಿದ್ಯಾಭವನ ಕಟ್ಟಡದ ಬಾಡಿಗೆಯನ್ನು ಪರಿಷ್ಕರಣೆ ಮಾಡುವ ಮೂಲಕ ೧.೪೦ ಕೋಟಿ ಆದಾಯ ಸಂಸ್ಥೆಗೆ ಬರುವಂತಾಗಿದೆ ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ದಶಕಗಳ ಇತಿಹಾಸವಿರುವ ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಗೆ ಹೊಸ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದ ಮೇಲೆ ಎಲ್ಲರನ್ನು ಸಮಾನತೆಯಿಂದ ಕಂಡು ಕಾಲೇಜು ಅಭಿವೃದ್ಧಿಯತ್ತ ಹಾಗೂ ಪಾರದರ್ಶಕವಾಗಿ ಮುಂದೆ ಸಾಗುತ್ತಿದ್ದರೂ ಕೆಲವರು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಂಸ್ಥೆಗೆ ಕೆಟ್ಟ ಹೆಸರನ್ನು ತರಲು ಮುಂದಾಗಿದ್ದಾರೆ ಎಂದು ಎಂಸಿಇ ಸಂಸ್ಥೆಯ ಅಧ್ಯಕ್ಷ ಆರ್‌.ಟಿ. ದ್ಯಾವೇಗೌಡ ಬೇಸರ ವ್ಯಕ್ತಪಡಿಸಿದರು.

ನಗರದಲ್ಲಿರುವ ಮಲೆನಾಡು ತಾಂತ್ರಿಕ ಕಾಲೇಜಿನ ಸಭಾಂಗಣದಲ್ಲಿ ಗುರುವಾರ ಮಾಧ್ಯಮದೊಂದಿಗೆ ಮಾತನಾಡಿ, ನಾನು ಕಳೆದ ೫೪ ವರ್ಷಗಳಿಂದಲೂ ವಿವಿಧ ಸಂಘದ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಇಲ್ಲಿವರೆಗೂ ಯಾವ ಆಪಾದನೆ ಬಂದಿರುವುದಿಲ್ಲ. ಎಲ್ಲರನ್ನೂ ಸಮಾನತೆಯಿಂದ ಕಂಡು ಸಮಾಜಿಕ ನ್ಯಾಯದ ದೃಷ್ಠಿಯಲ್ಲಿ ಸಂಸ್ಥೆ ಒಳಗೆ ಕೆಲಸ ಮಾಡಿಕೊಂಡು ಬಂದಿದ್ದೇನೆ. ರಾಜ್ಯ ಮಟ್ಟದಲ್ಲೂ ಕೆಲಸ ಮಾಡಿದ್ದೇನೆ. ಅನಿರೀಕ್ಷಿತವಾಗಿ ಇಲ್ಲಿ ಅವಕಾಶ ಸಿಕ್ಕಿದೆ. ಎಲ್ಲರೂ ಒಟ್ಟುಗೂಡಿ ಈ ಸಂಸ್ಥೆಯ ಅಭಿವೃದ್ಧಿ ಮಾಡಲು ಹೊರಟಿದ್ದೇವೆ. ಕೆಲ ಸಾರಿ ಸಣ್ಣಪುಟ್ಟ ತಪ್ಪುಗಳು ಆಗುತ್ತದೆ. ಇದನ್ನೇ ದೊಡ್ಡದಾಗಿ ಮಾಡುವ ಅವಶ್ಯಕತೆ ಇಲ್ಲ. ಏನಾದರೂ ತಪ್ಪು ಇದ್ದರೇ ಸಲಹೆ ಕೊಡಿ. ಸರಿಪಡಿಸಿಕೊಳ್ಳಲಾಗುವುದು. ಸಂಸ್ಥೆಗೆ ಒಳಪಡುವ ಕಟ್ಟಡ ಬಾಡಿಗೆ ಪರಿಷ್ಕರಣೆ ಹಾಗೂ ಸಂಸ್ಥೆಯ ನಿವೇಶನ ಸ್ವಾಧೀನಕ್ಕೆ ಪಡೆಯುವ ನಿಟ್ಟಿನಲ್ಲಿ ಕ್ರಮಗಳು ಆಗಿದ್ದು ೬೮ ವರ್ಷ ಇತಿಹಾಸ ಹೊಂದಿರುವ ಈ ಸಂಸ್ಥೆಯು ಮುಂದೆಯೂ ಉತ್ತಮ ಆಡಳಿತ ನೀಡಲಿದೆ. ಮಲೆನಾಡು ತಾಂತ್ರಿಕ ವಿದ್ಯಾಸಂಸ್ಥೆ ಪಾರದರ್ಶಕವಾಗಿ ಯಶಸ್ವಿಯಾಗಿ ಸಂಸ್ಥೆ ಮುಂದೆ ಸಾಗುತ್ತಿದೆ ಎಂದರು.

ಸಂಸ್ಥೆಯ ಇತರೆ ಶೈಕ್ಷಣಿಕ ವಿಭಾಗಗಳಿಗೆ ಯುವಕರನ್ನು ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಈಗಾಗಲೇ ಹೊಸ ಹೊಸ ಕೋರ್ಸ್‌ಗಳನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದರು. ಕಾಲೇಜಿನ ಅಭಿವೃದ್ಧಿ ದೃಷ್ಟಿಯಿಂದ ಕಟ್ಟಡ ನಿರ್ಮಾಣಕ್ಕೆ ಆವರಣದಲ್ಲಿನ ಕೆಲ ನೀಲಗಿರಿ ಮರಗಳನ್ನು ಕಡಿಯಲಾಗಿದೆ. ಇದನ್ನೇ ನೆಪವಾಗಿಸಿಕೊಂಡು ಕೆಲವರು ಸಂಸ್ಥೆಯ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕಾಲೇಜಿನ ಅಭಿವೃದ್ಧಿಗೆ ಉತ್ತಮ ಕೆಲಸ ಮಾಡಲಾಗುತ್ತಿದ್ದು ಸಿಟಿ ಬಸ್ ನಿಲ್ದಾಣದ ಎದುರಿನ ವಿದ್ಯಾಭವನ ಕಟ್ಟಡದ ಬಾಡಿಗೆಯನ್ನು ಪರಿಷ್ಕರಣೆ ಮಾಡುವ ಮೂಲಕ ೧.೪೦ ಕೋಟಿ ಆದಾಯ ಸಂಸ್ಥೆಗೆ ಬರುವಂತಾಗಿದೆ.

ಎಂಸಿಇ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜಗದೀಶ್ ಚೌಡಳ್ಳಿ ಮಾತನಾಡಿ, ಮುಂದಿನ ದಿನಗಳಲ್ಲಿ ವಿಶ್ವವಿದ್ಯಾನಿಲಯ ಹಾಗೂ ಉತ್ತಮವಾದ ಮೆಡಿಕಲ್ ಕಾಲೇಜು ಪ್ರಾರಂಭಿಸುವ ಉದ್ದೇಶ ಹೊಂದಲಾಗಿದೆ. ಹೊಸ ಆಡಳಿತ ಮಂಡಳಿ ಅಧಿಕಾರ ವಹಿಸಿಕೊಂಡ ಕೆಲವೇ ತಿಂಗಳಲ್ಲಿ ಸಂಸ್ಥೆಯ ಕೈತಪ್ಪಿದ್ದ ಸುಮಾರು ೧೨೦ ಕೋಟಿ ರು. ಮೌಲ್ಯದ ಆಸ್ತಿಯನ್ನು ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದ್ದೇವೆ ಎಂದರು. ಹಿಂದಿನವರು ೮೦ ವರ್ಷಕ್ಕೆ ಲೀಸ್‌ಗೆ ಕೊಟ್ಟಿರುವುದನ್ನು ನಾವು ವಾಪಸ್ ಪಡೆದಿದ್ದೇವೆ ಎಂದರು. ಸಂಸ್ಥೆಯ ಏಳಿಗೆ ಜೊತೆಗೆ ಬಿಸಿಎ, ಎಐ ಮೊದಲಾದ ಹೊಸ ಕೋರ್ಸುಗಳನ್ನು ಆರಂಭಿಸಲಾಗುತ್ತಿದೆ. ಅದಕ್ಕಾಗಿ ಸರ್ಕಾರದ ನಿಯಮಾವಳಿ ಪ್ರಕಾರ ಸಿಬ್ಬಂದಿ ನೇಮಿಸಿಕೊಳ್ಳಲಾಗುತ್ತಿದೆ. ಕೆಲವರಿಗೆ ಮಾನವೀಯತೆ ಹಿನ್ನೆಲೆಯಲ್ಲಿ ಉದ್ಯೋಗ ನೀಡಲಾಗಿದೆ ಎಂದು ಸ್ಪಷ್ಟನೆ ನೀಡಿದರು. ಈ ವಿಚಾರದಲ್ಲಿ ಯಾವುದೇ ನಿಯಮ ಉಲ್ಲಂಘಿಸಿಲ್ಲ, ಲೋಪ ಆಗಿಲ್ಲ ಎಂದು ಸ್ಪಷ್ಟಪಡಿಸಿದರು. ಮುಂದಿನ ದಿನಗಳಲ್ಲಿ ಮೆಡಿಕಲ್ ಆರಂಭಿಸುವ ಉದ್ದೇಶ ಇದೆ. ಅದಕ್ಕಾಗಿ ದೊಡ್ಡ ಬಿಲ್ಡಿಂಗ್ ಕಟ್ಟಲಾಗುತ್ತಿದೆ. ಉತ್ತಮ ಕೆಲಸ ಮಾಡಬೇಕು ಎಂಬ ನಮ್ಮ ಮಹದಾಸೆ ಇದೆ. ಹಿಂದೆ ಲೂಟಿಕೋರರ ತಂಡ ಇತ್ತು. ಸೀಟ್ ಮಾರಾಟ ಆಗುತ್ತಿತ್ತು. ಆದರೀಗ ಪೋಷಕರು-ಮಕ್ಕಳೇ ನೇರವಾಗಿ ಬಂದು ಪ್ರವೇಶ ಪಡೆಯುವಂತೆ ಮಾಡಿದ್ದೇವೆ ಎಂದು ಹೇಳಿದರು.

ಪದಾಧಿಕಾರಿಗಳಾದ ಬಿ.ಆರ್‌. ಗುರುದೇವ್ ಮಾತನಾಡಿ, ನಮ್ಮ ಶಿಕ್ಷಣ ಸಂಸ್ಥೆಗೆ ಯುವಕರನ್ನು ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಅದರಲ್ಲೂ ನನ್ನ ಮಗನನ್ನೆ ನೇಮಿಸಿದ್ದಾರೆ. ಕಾಲೇಜಿನ ಆವರಣದಲ್ಲಿ ಮರ ಕಡಿಯುವುದೇ ದೊಡ್ಡ ವಿಚಾರ ಮಾಡಿದ್ದಾರೆ. ಈ ಮರಗಳು ಇರುವುದು ಭೂಮಿಗೆ ಒಳ್ಳೆಯದಲ್ಲ ಎಂದು ನೀಲಗಿರಿ ಮರದ ಬಗ್ಗೆ ತಿಳಿಸಿದರು. ಹಲವಾರು ವರ್ಷಗಳಿಂದ ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆ ವಿರುದ್ಧ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಈ ಹಿಂದೆ ಇದ್ದಂತಹ ಆಡಳಿತ ಮಂಡಳಿಯ ವಿರುದ್ಧ ಗೆದ್ದ ಹೊಸ ತಂಡದೊಂದಿಗೆ ಆಯ್ಕೆಯಾಗಿರುವ ಪದಾಧಿಕಾರಿಗಳ ಸಹಕಾರದಿಂದ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ಕಾಲೇಜಿನ ಕಾಂಪೌಂಡ್ ಪಕ್ಕದಲ್ಲಿನ ಮರಗಳನ್ನು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕಡಿಯಲಾಗಿದೆ ಹೊರತು ಯಾವುದೇ ಹಿತಾಸಕ್ತಿ ಇಲ್ಲ ಎಂದು ಸಂಸ್ಥೆ ಬಗ್ಗೆ ವಿರೋಧ ಮಾಡಿದವರಿಗೆ ಉತ್ತರಿಸಿದರು.

ಇದೇ ವೇಳೆ ಮಲೆನಾಡು ಶಿಕ್ಷಣ ಸಂಸ್ಥೆಯ ಪಾರ್ಶ್ವನಾಥ್, ಪಾರ್ವತಮ್ಮ, ಪ್ರಾಂಶುಪಾಲ ಕೃಷ್ಣಯ್ಯ, ನಿರ್ದೇಶಕರಾದ ಶಂಕರ್, ರಾಜಶೇಖರ್, ಆನಂದ್ ದೇವರಾಜ್, ಶ್ರೀನಿವಾಸ್ ಇತರರು ಉಪಸ್ಥಿತರಿದ್ದರು.