3.87 ಕೋಟಿ ಕೊಟ್ಟರೂ ಕಲಾವಿದರಿಗೆ ಸಿಕ್ಕಿಲ್ಲ ಹಣ!

| Published : Jul 17 2024, 12:57 AM IST

ಸಾರಾಂಶ

ಕರ್ನಾಟಕ ಸಂಭ್ರಮ 50 ಕ್ಕಾಗಿ ಸರ್ಕಾರ ಬಿಡಗಡೆಗೊಳಿಸಿದ ಹಣ, ಖರ್ಚು ವೆಚ್ಚಗಳ ಬಗ್ಗೆ ಗದಗ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಳಿ ದಾಖಲೆ ಇಲ್ಲ. ಈ ಹಣ ಯಾರಿಗೆ, ಯಾವ ಉದ್ದೇಶಕ್ಕಾಗಿ ಬಳಕೆ ಮಾಡಲಾಗಿದೆ

ಶಿವಕುಮಾರ ಕುಷ್ಟಗಿ ಗದಗ

ಕರ್ನಾಟಕ ಸಂಭ್ರಮ-50 ಆಚರಣೆಗಾಗಿ ಸರ್ಕಾರ ₹3.87 ಕೋಟಿ ಅನುದಾನ ನಿಗದಿ ಮಾಡಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಬಿಡುಗಡೆ ಮಾಡಿತ್ತು. ಆದರೆ ಸಂಭ್ರಮ ಮುಗಿದು 8 ತಿಂಗಳು ಕಳೆದರೂ ಭಾಗವಹಿಸಿದ ಕಲಾವಿದರು, ಶಾಮಿಯಾನ, ಊಟದವರಿಗೆ ಹಣ ನೀಡಲು ಇಲಾಖೆಯ ಬಳಿ ಹಣವೇ ಇಲ್ಲ!

ಕಾರ್ಯಕ್ರಮ ಆಯೋಜಕರು ಗದಗ ನಗರದಲ್ಲಿ ನಡೆದಿದ್ದ ಕರ್ನಾಟಕ ಸಂಭ್ರಮ-50 ಕ್ಕೆ ವಿವಿಧ ಸರಕು, ಸಾಮಗ್ರಿ, ಧ್ವನಿ ವರ್ಧಕ, ವಿದ್ಯುತ್ ಅಲಂಕಾರ, ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಗಿತ್ತು. ಇದರ ಎಲ್ಲ ಖರ್ಚು ವೆಚ್ಚದ ಬಿಲ್ ಬೆಂಗಳೂರು ಮೂಲದ ಸಂಸ್ಥೆಗೆ ಸಂದಾಯವಾಗಿವೆ.

ಬಿಲ್ ಸಂದಾಯವಾಗಿರುವುದನ್ನು ಆಧಾರವಾಗಿ ಇಟ್ಟುಕೊಂಡು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ ತಂಗಡಗಿ ನೇತೃತ್ವದಲ್ಲಿ 7-12-2023 ರಂದು ಬೆಳಗಾವಿ ಸುವರ್ಣ ಸೌಧದಲ್ಲಿ ನಡೆದ ಸಭೆಯಲ್ಲಿ ₹3.82 ಕೋಟಿ ಹಣ ಬೆಂಗಳೂರು ಮೂಲದ ಸಂಸ್ಥೆಗೆ ಬಿಡುಗಡೆ ಮಾಡುವಂತೆ ಅನುಮೋದನೆ ನೀಡಲಾಗಿದೆ. ಅದರ ಅನ್ವಯ 16-2-2024 ರಂದು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಆದೇಶ ಸಂಖ್ಯೆ ಡಿಕೆಸಿ, 104-5-2023(ಭಾಗ-2) ಆಧಾರದಲ್ಲಿ ಈಗಾಗಲೇ ಹಣ ಬಿಡುಗಡೆಯಾಗಿದೆ.

ಜಿಲ್ಲಾಡಳಿತದ ಬಳಿ ಮಾಹಿತಿಯೇ ಇಲ್ಲ

ಕರ್ನಾಟಕ ಸಂಭ್ರಮ 50 ಕ್ಕಾಗಿ ಸರ್ಕಾರ ಬಿಡಗಡೆಗೊಳಿಸಿದ ಹಣ, ಖರ್ಚು ವೆಚ್ಚಗಳ ಬಗ್ಗೆ ಗದಗ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಳಿ ದಾಖಲೆ ಇಲ್ಲ. ಈ ಹಣ ಯಾರಿಗೆ, ಯಾವ ಉದ್ದೇಶಕ್ಕಾಗಿ ಬಳಕೆ ಮಾಡಲಾಗಿದೆ. ಖರ್ಚು ವೆಚ್ಚದ ಬಿಲ್ ಸೇರಿದಂತೆ ಯಾವೊಂದು ಸಣ್ಣ ಮಾಹಿತಿ ಜಿಲ್ಲಾಡಳಿತದ ಬಳಿ ಇಲ್ಲ.

ರಾಜ್ಯದ ಹಲವಾರು ಜಿಲ್ಲೆಗಳ ಸಾವಿರಾರು ಕಲಾವಿದರು ಈ ಸಂಭ್ರಮದಲ್ಲಿ ಪಾಲ್ಗೊಂಡು ಕಲಾ ಪ್ರದರ್ಶನ ಮಾಡಿದ್ದು, ಈಗ ತಮ್ಮ ಗೌರವ ಧನಕ್ಕಾಗಿ ಕಾಯುತ್ತಿದ್ದಾರೆ. ಸರ್ಕಾರ ಇಷ್ಟೊಂದು ಅನುದಾನ ನೀಡಿದ್ದರೂ ಅದನ್ನು ಕಲಾವಿದರಿಗೆ ನೀಡದೇ 8 ತಿಂಗಳಿಂದ ಸತಾಯಿಸಲಾಗುತ್ತಿದೆ. ಕಲಾವಿದರು ಪ್ರಶ್ನೆ ಮಾಡಿದರೆ, ನಿಮಗೆ ಕೊಡಲು ಹಣವೇ ಇಲ್ಲ ಎಂದು ಹೇಳುತ್ತಿರುವುದು ಕೂಡಾ ಹಲವು ಸಂಶಯಗಳನ್ನು ಹುಟ್ಟು ಹಾಕುತ್ತಿದೆ.

ಸಮಗ್ರ ತನಿಖೆಯಾಗಲಿ: ಕರ್ನಾಟಕ ಸಂಭ್ರಮ-50 ಆಯೋಜನೆಯಲ್ಲಿ, ಅದರ ರೂಪರೇಷೆ ಸಿದ್ಧಪಡಿಸುವಲ್ಲಿ ಪ್ರಮುಖ ಪಾತ್ರವಹಿಸಿರುವ ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಅಧಿಕಾರಿಗಳು, ಖುದ್ದಾಗಿ ಮುಂದೆ ನಿಂತು, ಗದಗ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಮಾಹಿತಿ ಇಲ್ಲದಂತೆ ಅನುದಾನ ಬಳಕೆ ಮಾಡಿಕೊಂಡಿದ್ದಾರೆ. ನಾವು ಬಡ ಕಲಾವಿದರು ಹೀಗಾಗಿ ನಮಗೆ ಕೊಟ್ಟಿಲ್ಲ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎನ್ನುತ್ತಾರೆ ನೋಂದ ಕಲಾವಿದರು.

ನಮ್ಮ ಇಲಾಖೆಯಿಂದ ₹3.82 ಕೋಟಿ ಅನುದಾನ ಬಿಡುಗಡೆಯಾದ ಬಗ್ಗೆ ಮಾತ್ರ ಮಾಹಿತಿ ಇದೆ. ಅದರ ಬಳಕೆ ಮತ್ತು ಯಾವೆಲ್ಲ ಸಂಸ್ಥೆಗೆ ಹಣ ನೀಡಿದ್ದಾರೆ ಎನ್ನುವ ಬಗ್ಗೆ ನಮ್ಮಲ್ಲಿ ಯಾವುದೇ ದಾಖಲೆಗಳಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ. ಬಿ. ತಿಳಿಸಿದ್ದಾರೆ.