ರಸ್ತೆ ದುರಸ್ತಿಗೆ ಕೋಟಿ ಗಟ್ಟಲೆ ಹಣ ನೀಡಿದರೂ ಕಳಪೆ ಕಾಮಗಾರಿ: ಟಿ.ಡಿ.ರಾಜೇಗೌಡ ಗರಂ

| Published : Nov 30 2024, 12:45 AM IST

ಸಾರಾಂಶ

ನರಸಿಂಹರಾಜಪುರ, ಸರ್ಕಾರ ರಸ್ತೆ ರಿಪೇರಿಗಾಗಿ ಕೋಟಿ ಗಟ್ಟಳೆ ಹಣ ಬಿಡುಗಡೆ ಮಾಡುತ್ತಿದೆ. ಆದರೆ, ಲೋಕೋಪಯೋಗಿ ಇಲಾಖೆ ಇಂಜಿನಿಯರ್‌ ಗಳ ನಿರ್ಲಕ್ಷ್ಯದಿಂದ ಗುಣಮಟ್ಟದ ಕಾಮಗಾರಿ ನಡೆಯದೆ ರಸ್ತೆಯಲ್ಲಾ ಗುಂಡಿ ಬೀಳುತ್ತಿದೆ ಎಂದು ಲೋಕೋಪಯೋಗಿ ಇಂಜಿನಿಯರ್ ಮೇಲೆ ಶಾಸಕ ಟಿ.ಡಿ.ರಾಜೇಗೌಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

- ತಾಲೂಕು ಪಂಚಾಯಿತಿಯಲ್ಲಿ ತ್ರೈಮಾಸಿಕ ಕೆಡಿಪಿ ಸಭೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಸರ್ಕಾರ ರಸ್ತೆ ರಿಪೇರಿಗಾಗಿ ಕೋಟಿ ಗಟ್ಟಳೆ ಹಣ ಬಿಡುಗಡೆ ಮಾಡುತ್ತಿದೆ. ಆದರೆ, ಲೋಕೋಪಯೋಗಿ ಇಲಾಖೆ ಇಂಜಿನಿಯರ್‌ ಗಳ ನಿರ್ಲಕ್ಷ್ಯದಿಂದ ಗುಣಮಟ್ಟದ ಕಾಮಗಾರಿ ನಡೆಯದೆ ರಸ್ತೆಯಲ್ಲಾ ಗುಂಡಿ ಬೀಳುತ್ತಿದೆ ಎಂದು ಲೋಕೋಪಯೋಗಿ ಇಂಜಿನಿಯರ್ ಮೇಲೆ ಶಾಸಕ ಟಿ.ಡಿ.ರಾಜೇಗೌಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಶುಕ್ರವಾರ ತಾಲೂಕು ಪಂಚಾಯಿತಿ ಸಾಮಾರ್ಥ್ಯ ಸೌಧದಲ್ಲಿ ನಡೆದ ತ್ರೈಮಾಸಿಕ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಡಬೂರು ಸಮೀಪದ ಸೇತುವೆ ರಿಪೇರಿಗೆ 70 ಲಕ್ಷ ನೀಡಿದ್ದೆ. ಈ ವರ್ಷ ಮತ್ತೆ ಸೇತುವೆ ಹಾಳಾಗಿದೆ. ರಸ್ತೆ ಹಾಳಾದರೆ ಶಾಸಕರನ್ನು, ಜನಪ್ರನಿಧಿಗಳನ್ನು ಜನರು ಬಯ್ಯುತ್ತಾರೆ. ನಾನು ಸಂಬಂಧಪಟ್ಟ ಮಂತ್ರಿಗಳ ಮನೆಗೆ ತಿರುಗಿ ಹಣ ಮಂಜೂರು ಮಾಡಿಸಿಕೊಂಡು ಬಂದಿದ್ದೇನೆ. ಈ ವರ್ಷ ಟೆಂಡರ್‌ ಆಗಿದೆ. ಆದರೂ ರಸ್ತೆಗಳ ಗುಂಡಿ ಮುಚ್ಚುತ್ತಿಲ್ಲ. ಆಗಿರುವ ಕಾಮಗಾರಿಗಳು ಸಹ ಕಳಪೆಯಾಗಿದೆ. ಸರಿಯಾಗಿ ಕೆಲಸ ಮಾಡದೆ ಇರುವುದಕ್ಕೆ ಇಂಜಿನಿಯರ್‌ ಹೊಣೆಗಾರರು. ನಿಮ್ಮ ಮೇಲೆ ಯಾಕೆ ಕ್ರಮ ಕೈಗೊಳ್ಳಬಾರದು ? ಜಂಗಲ್‌ ಕ್ಲಿಯರ್‌ ಮಾಡಿಸಿಲ್ಲ. ಗುಂಡಿ ಮುಚ್ಚುವುದಕ್ಕೆ ಮಳೆ ಕಾರಣ ನೀಡುತ್ತಿ ದ್ದೀರಿ. ಸರಿಯಾದ ಕ್ರಮದಲ್ಲಿ ಗುಂಡಿ ಮುಚ್ಚುತ್ತಿಲ್ಲ. ನಾನು ಚಿಕ್ಕಮಗಳೂರಿನಲ್ಲಿ ಸಂಬಂಧಪಟ್ಟ ಇಂಜಿನಿಯರ್‌ ಗಳ ಸಭೆ ನಡೆಸಿ ಸೂಚನೆ ಕೊಟ್ಟಿದ್ದರೂ ಇನ್ನೂ ರಸ್ತೆ ಗುಂಡಿ ಮುಚ್ಚುವ ಕಾಮಗಾರಿ ಪ್ರಾರಂಭಿಸಿಲ್ಲ. ಗುಣಮಟ್ಟದ ಕಾಮಗಾರಿಗೆ ಹೆಚ್ಚುವರಿ ಹಣ ನೀಡುತ್ತೇನೆ ಎಂದು ಹೇಳಿದ್ದರೂ ಕಾಮಗಾರಿ ಹಾಳು ಮಾಡುತ್ತಿದ್ದೀರಿ ಎಂದರು.

ಮಾಗುಂಡಿ- ಬಾಳೆಹೊನ್ನೂರು ರಸ್ತೆಗೆ ₹22.50 ಕೋಟಿ ಮಂಜೂರು ಮಾಡಿಸಿದ್ದೇನೆ. ಅಂದಾಜು ಶೃಂಗೇರಿ ಕ್ಷೇತ್ರಕ್ಕೆ ₹100 ಕೋಟಿ ಬಿಡುಗಡೆಯಾಗಿದೆ. ರಸ್ತೆಯನ್ನು ಯಾರಾದರೂ ಒತ್ತುವರಿ ಮಾಡಿದ್ದರೆ ಮುಲಾಜಿಲ್ಲದೆ ತೆರವುಗೊಳಿಸಿ ಎಂದು ಸೂಚಿಸಿದರು.

ಶಿವಮೊಗ್ಗ ಭದ್ರಾ ಕಾಡಾ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್‌ ಮಾತನಾಡಿ, ರಸ್ತೆ,ಸೇತುವೆ ಕಾಮಗಾರಿ ಮಾಡಿ 1 ವರ್ಷಕ್ಕೆ ಮತ್ತೆ ಹಾಳಾಗುತ್ತಿದೆ. ಸರಿಯಾದ ತಂತ್ರಜ್ಞಾನ ಬಳಸಿ ರಸ್ತೆ ದುರಸ್ತಿ ಮಾಡಬೇಕು.ಶಂಕರಪುರ, ಮಡಬೂರು ಸೇತುವೆ ಮತ್ತೆ ಹಾಳಾಗಿದೆ ಎಂದರು.

ಲೋಕೋಪಯೋಗಿ ಇಂಜಿನಿಯರ್‌ ಕುಮಾರ್‌ ಮಾಹಿತಿ ನೀಡಿ, ನರಸಿಂಹರಾಜಪುರ ತಾಲೂಕಿಗೆ ₹1.47 ಕೋಟಿ ಮಂಜೂರಾಗಿದೆ. ಶೃಂಗೇರಿ ಕ್ಷೇತ್ರಕ್ಕೆ ಒಟ್ಟು ₹4.50 ಕೋಟಿ ಮಂಜೂರಾಗಿದೆ. ಅತಿ ವೃಷ್ಠಿಯಿಂದ ಹಾಳಾದ ಕಾಮಗಾರಿಗೆ ₹11 ಕೋಟಿ ಮಂಜೂರಾಗಿದೆ. ಬರುವ ಡಿಸೆಂಬರ್‌ ತಿಂಗಳ ಒಳಗೆ ಎಲ್ಲಾ ರಸ್ತೆಯ ಕಾಮಗಾರಿಗಳನ್ನು ಉತ್ತಮ ಗುಣಮಟ್ಟದಲ್ಲಿ ಮಾಡಿಸುತ್ತೇನೆ ಎಂದು ಸಭೆಗೆ ಭರವಸೆ ನೀಡಿದರು.

ಸಭೆ ಅಧ್ಯಕ್ಷತೆಯನ್ನು ಶಾಸಕ ಟಿ.ಡಿ.ರಾಜೇಗೌಡ ವಹಿಸಿದ್ದರು. ವೇದಿಕೆಯಲ್ಲಿ ಶಿವಮೊಗ್ಗ ಭದ್ರಾ ಕಾಡಾ ನಿಗಿಮದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್‌, ತಾಪಂ ಆಡಳಿತಾಧಿಕಾರಿ ನಂದೀಶ್, ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ , ತಹಸೀಲ್ದಾರ್‌ ತನುಜ ಟಿ.ಸವದತ್ತಿ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಚಂದ್ರಮ್ಮ, ಕೆಡಿಪಿ ಸದಸ್ಯರಾದ ಮಾಳೂರು ದಿಣ್ಣೆ ರಮೇಶ್‌, ಪ್ರವೀಣ್‌, ಕೈಮರ ಸಾಜು, ಅಂಜುಂ, ಸಮೀರ ನಹೀಂ,ಶಶಿಕುಮಾರ್‌, ತಾಲೂಕು ಬಗರ್‌ ಹುಕಂ ಸಮಿತಿ ಅಧ್ಯಕ್ಷ ಇ.ಸಿ.ಜೋಯಿ, ಪಿಸಿಎಲ್‌ಡಿಬ್ಯಾಂಕ್‌ ಅಧ್ಯಕ್ಷ ರಂಗನಾಥ, ಟಿಎಪಿಸಿಎಂಎಸ್‌ ಅಧ್ಯಕ್ಷ ಗೋಪಾಲ್‌, ಡಿಸಿಸಿಬ್ಯಾಂಕ್‌ ನಿರ್ದೇಶಕ ಸಂದೀಪ್‌, ಎಪಿಎಂಸಿ ಉಪಾಧ್ಯಕ್ಷ ಎಸ್.ಡಿ.ರಾಜೇಂದ್ರ, ವಿವಿಧ ಇಲಾಖೆ ಅಧಿಕಾರಿಗಳಿದ್ದರು.

-- ಬಾಕ್ಸ್--

ಮಂಗನಕಾಯಿಲೆ ನಿರೋಧಕ ಲಸಿಕೆ ಬರುತ್ತಿಲ್ಲ

ಮಂಗನ ಕಾಯಿಲೆ ಬಾರದಂತೆ ಜನರಿಗೆ ನೀಡುವ ಲಸಿಕೆ ಬರುತ್ತಿಲ್ಲ. ಈ ಬಗ್ಗೆ ಬೆಳಗಾಂ ಅಧಿವೇಶನದಲ್ಲಿ ವಿಚಾರ ಪ್ರಸ್ತಾಪಿಸುತ್ತೇನೆ. ಎಲ್ಲಾ ಮುಂಜಾಗ್ರತಾ ಕ್ರಮ ಕೈಗೊಳ್ಳಿ ಎಂದು ಶಾಸಕ ಟಿ.ಡಿ.ರಾಜೇಗೌಡ ಸೂಚಿಸಿದರು.

ಕಳೆದ 2 ವರ್ಷದಿಂದ ತಾಲೂಕಿನಲ್ಲಿ ಮಂಗನ ಕಾಯಿಲೆ ಬಂದ ಹಿನ್ನೆಲೆಯಲ್ಲಿ ಸರ್ಕಾರ ಕೀಟಜನ್ಯ ತಜ್ಞ ವೈದ್ಯರನ್ನು ನೇಮಿಸಿದೆ. ಮುಂಜಾಗ್ರತಾ ಕ್ರಮವಾಗಿ ಈ ವರ್ಷ ತಾಲೂಕಿನ 5 ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 42 ಉಣುಗುಗಳನ್ನು ಸಂಗ್ರಹಿಸಿ ಶಿವಮೊಗ್ಗ ಪರಮಾಣು ಕ್ರಿಮಿ ಪ್ರಯೋಗಾಲಯಕ್ಕೆ ಕಳಿಸಿದ್ದೇವೆ. ಈ ವರೆಗೆ ತಾಲೂಕಿನಲ್ಲಿ ಮಂಗಗಳ ಸತ್ತಿಲ್ಲ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ವಿಜಯಕುಮಾರ್‌ ಸಭೆಗೆ ಮಾಹಿತಿ ನೀಡಿದರು.