ಸುಪ್ರೀಂ ಕೋರ್ಟ್ ಆದೇಶ ಗುಂಡ್ಲುಪೇಟೆಗೆ ಅನ್ವಯಿಸುವುದಿಲ್ಲವೇ? ರಾಜ್ಯ ಸರ್ಕಾರದ ಸೂಚನೆ ಗುಂಡ್ಲುಪೇಟೆ ಪುರಸಭೆಗೆ ಬರುವುದಿಲ್ಲವೇ? ಜಿಲ್ಲೆಯ ಇತರೆ ತಾಲೂಕಿನಲ್ಲಿ ಪುಟ್ಪಾತ್ ಒತ್ತುವರಿ ತೆರವಿಗೆ ಚಾಲನೆ ಸಿಕ್ಕಿದೆ. ಆದರೆ ಗುಂಡ್ಲುಪೇಟೆಯಲ್ಲಿ ಏಕೆ ಆಗುವುದಿಲ್ಲ?.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಸುಪ್ರೀಂ ಕೋರ್ಟ್ ಆದೇಶ ಗುಂಡ್ಲುಪೇಟೆಗೆ ಅನ್ವಯಿಸುವುದಿಲ್ಲವೇ? ರಾಜ್ಯ ಸರ್ಕಾರದ ಸೂಚನೆ ಗುಂಡ್ಲುಪೇಟೆ ಪುರಸಭೆಗೆ ಬರುವುದಿಲ್ಲವೇ? ಜಿಲ್ಲೆಯ ಇತರೆ ತಾಲೂಕಿನಲ್ಲಿ ಪುಟ್ಪಾತ್ ಒತ್ತುವರಿ ತೆರವಿಗೆ ಚಾಲನೆ ಸಿಕ್ಕಿದೆ. ಆದರೆ ಗುಂಡ್ಲುಪೇಟೆಯಲ್ಲಿ ಏಕೆ ಆಗುವುದಿಲ್ಲ?.ಈ ಪ್ರಶ್ನೆಗಳಿಗೆ ಈಗ ಜಿಲ್ಲಾಡಳಿತ, ಜನಪ್ರತಿನಿಧಿಗಳು ಅದರಲ್ಲೂ ಪುರಸಭೆ ನಾಗರಿಕರಿಗೆ ಉತ್ತರ ಕೊಡಲೇಬೇಕು ಎಂದು ಪಟ್ಟಣದ ಜನರು ಒತ್ತಾಯಿಸಿದ್ದಾರೆ.
ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ನಡೆಯುವ ಹಕ್ಕು ಮೂಲಭೂತ ಹಕ್ಕು.ಸಂವಿಧಾನದ 19 (1) (ಎ) ಮತ್ತು 21ನೇ ವಿಧಿಯ ಅಡಿಯಲ್ಲಿ ಪಾದಚಾರಿಗಳಿಗೆ ನಡೆಯುವ ಹಕ್ಕಿದೆ.ಪ್ರತಿ ರಸ್ತೆಯಲ್ಲೂ ಕನಿಷ್ಠ 1.2 ಮೀಟರ್ ಅಗಲದ ಪಾದಚಾರಿ ಮಾರ್ಗ ಇರಲೇಬೇಕು. ರಾಜ್ಯ ಸರ್ಕಾರ ಕೂಡ ಎಲ್ಲಾ ನಗರಸಭೆ, ಪುರಸಭೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.ಆದೇಶ ಪಾಲಿಸದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಆದರೆ ಗುಂಡ್ಲುಪೇಟೆಯಲ್ಲಿ ಮಾತ್ರ ಈ ಆದೇಶ ಕಾಗದದ ಮೇಲೆಯೇ ಉಳಿದಿದೆ.
ಜಿಲ್ಲೆಯ ಚಾಮರಾಜನಗರ,ಕೊಳ್ಳೇಗಾಲ, ಯಳಂದೂರಿನಲ್ಲಿ ಪುಟ್ಪಾತ್ ಒತ್ತುವರಿಗೆ ಚಾಲನೆ ಸಿಕ್ಕಿದೆ ಆದರೆ ಗುಂಡ್ಲುಪೇಟೆಯಲ್ಲಿ ಏಕೆ ಆಗುವುದಿಲ್ಲ? ಗುಂಡ್ಲುಪೇಟೆ ಪುರಸಭೆಗೆ ಬಂದಿಲ್ಲವೇ? ಇಲ್ಲ ಗುಂಡ್ಲುಪೇಟೆ ಪುರಸಭೆ ಆ ಸೂಚನೆ ಓದಿಲ್ಲವೇ? ಈ ಎಲ್ಲಾ ಪ್ರಶ್ನೆಗಳಿಗೆ ಜಿಲ್ಲಾಡಳಿತ ಪ್ರತಿಕ್ರಿಯಿಸಬೇಕಿದೆ.ಗುಂಡ್ಲುಪೇಟೆ ಸ್ಥಿತಿ ಏನು?:
ಪಟ್ಟಣದ ಮೈಸೂರು, ಊಟಿ ರಾಷ್ಟ್ರೀಯ ಹೆದ್ದಾರಿ, ಕಿತ್ತೂರು ರಾಣಿ ಚೆನ್ನಮ್ಮ ರಸ್ತೆ, ಪುರಸಭೆ ವಾಣಿಜ್ಯ ಮಳಿಗೆ ಮುಂದಿನ ರಸ್ತೆಗಳಲ್ಲಿ ಪಾದಚಾರಿಗಳಿಗೆ ನಡೆಯಲು ಜಾಗವೇ ಇಲ್ಲ. ಪುಟ್ಪಾತ್ ಮೇಲೆ ಅಂಗಡಿ ಬೋರ್ಡ್ಗಳು, ವಸ್ತುಗಳು, ಬೈಕ್ ನಿಲುಗಡೆ, ಫಾಸ್ಟ್ಫುಡ್ ಅಂಗಡಿಗಳು ಇವೆ. ಮಹಿಳೆಯರು, ಮಕ್ಕಳು, ವೃದ್ಧರು, ವಿದ್ಯಾರ್ಥಿಗಳು ಜೀವ ಭಯದಲ್ಲಿ ರಸ್ತೆಯ ಮಧ್ಯೆ ನಡೆಯುತ್ತಿದ್ದಾರೆ.ಅಪಘಾತಕ್ಕೆ ನೇರ ಆಹ್ವಾನ?:
ಕನ್ನಡಪ್ರಭ ಜು.15,ಜು.24,ಆ.18,ಆ.20,ಸೆ.5 ಮತ್ತು ಅ.22ರಂದು ಪುಟ್ಪಾತ್ ಒತ್ತುವರಿ ತೆರವು ಸಂಬಂಧ ಸಾಕಷ್ಟು ವರದಿ ಮಾಡಿದೆ.ಪ್ರತಿ ಬಾರಿಯೂ ಪುರಸಭೆ ಮುಖ್ಯಾಧಿಕಾರಿ ಎಸ್.ಶರವಣ ಭರವಸೆ ನೀಡುತ್ತಲೇ ಬಂದಿದ್ದಾರೆ.ಮೊದಲು ಎಸ್ಐಆರ್ ಬಳಿಕ ಎಂದರು. ನಂತರ ವರ ಮಹಾಲಕ್ಷ್ಮೀ, ಗೌರಿ, ಗಣೇಶ, ದೀಪಾವಳಿ ಹಬ್ಬದ ಬಳಿಕ ಎಂದರು. ನಂತರ ಪೊಲೀಸರಿಗೆ ಪತ್ರ ಬರೆದಿದ್ದೇವೆ ಎಂದರು. ಈಗ ಹಬ್ಬವೂ ಮುಗಿದಿದೆ, ಎಸ್ಐಆರ್ ಕೂಡ ಮುಗಿದಿದೆ. ಆದರೂ ತೆರವು ಮಾಡಲು ಪುರಸಭೆ ಮನಸ್ಸು ಮಾಡುತ್ತಿಲ್ಲ.
ಜಿಲ್ಲಾಡಳಿತಕ್ಕೆ ನೇರ ಪ್ರಶ್ನೆಗಳು?:1.ಜಿಲ್ಲಾಧಿಕಾರಿಗಳೇ, ಗುಂಡ್ಲುಪೇಟೆ ಪುರಸಭೆ ೪ ತಿಂಗಳಿನಿಂದ ಸುಪ್ರೀಂ ಕೋರ್ಟ್ ಆದೇಶ ಪಾಲಿಸಿಲ್ಲ ಎಂಬುದು ನಿಮ್ಮ ಗಮನಕ್ಕೆ ಬಂದಿಲ್ವೇ?
2.ಯಳಂದೂರು,ಕೊಳ್ಳೇಗಾಲ,ಚಾಮರಾಜನಗರದಲ್ಲಿ ತೆರವು ಮಾಡಿಸಿದ ಅದೇ ನಿಯಮವನ್ನು ಗುಂಡ್ಲುಪೇಟೆಯಲ್ಲಿ ಜಾರಿ ಮಾಡಲು ನೀವು ಪುರಸಭೆಗೆ ನಿರ್ದೇಶನ ಕೊಡುವುದಿಲ್ಲವೇ?3.ಪುಟ್ ಪಾತ್ ತೆರವಿಗೆ ರಾಜಕೀಯ ವಿರೋಧವಿದೆ ಎಂಬ ಆರೋಪ ಕೇಳಿ ಬರುತ್ತಿದೆ.ಸಾರ್ವಜನಿಕರ ಆರೋಪದ ಬಗ್ಗೆ ನೀವು ತನಿಖೆ ಮಾಡಿಸುವುದಿಲ್ಲವೇ?
4.ಬೆಂಗಳೂರು ಮಾದರಿಯಲ್ಲಿ ಪೊಲೀಸ್ ಮತ್ತು ಪುರಸಭೆ ಜಂಟಿ ಕಾರ್ಯಪಡೆ ರಚಿಸಿ,ಮರು ಒತ್ತುವರಿ ಮಾಡಿದರೆ ದಂಡ ಮತ್ತು ವಸ್ತು ವಶ ಮಾಡುವ ಆದೇಶವನ್ನು ನೀವು ಕೊಡುವುದಿಲ್ಲವೇ?5.ಇನ್ನೂ ಎಷ್ಟು ದಿನ ಪಾದಚಾರಿಗಳು ರಸ್ತೆಯಲ್ಲೇ ನಡೆಯಬೇಕು? ಪುಟ್ ಪಾತ್ ಒತ್ತುವರಿ ತೆರವಿಗೆ ಒಂದು ಕೊನೆಯ ದಿನಾಂಕವನ್ನು ನೀವು ನಿಗದಿ ಮಾಡುವುದಿಲ್ಲವೇ?
6.ಜನರು ಈಗ ಭರವಸೆ ಕೇಳಲು ಸಿದ್ಧರಿಲ್ಲ. ಪುಟ್ಪಾತ್ ಒತ್ತುವರಿ ತೆರವಿಗೆ ದಿನಾಂಕ ಕೇಳುತ್ತಿದ್ದಾರೆ.ಜಿಲ್ಲಾಡಳಿತ ಮಧ್ಯಪ್ರವೇಶಿಸಿ,ಪುರಸಭೆ ಮತ್ತು ಪೊಲೀಸ್ ಜಂಟಿ ಕಾರ್ಯಾಚರಣೆ ನಡೆಸಿ ತೆರವು ಮಾಡಿಸಲಿ ಎಂದು ಸಾರ್ವಜನಿಕರ ಆಗ್ರಹ.