ಗೊಂದಲದ ನಡುವೆಯೂ ತೋಟಗಾರಿಕಾ ಬೆಳೆ ವಿಮೆ ತುಂಬಿದ ರೈತರು

| Published : Aug 06 2024, 12:33 AM IST

ಗೊಂದಲದ ನಡುವೆಯೂ ತೋಟಗಾರಿಕಾ ಬೆಳೆ ವಿಮೆ ತುಂಬಿದ ರೈತರು
Share this Article
  • FB
  • TW
  • Linkdin
  • Email

ಸಾರಾಂಶ

ತೋಟಗಾರಿಕೆ ಬೆಳೆ ವಿಮೆ ಕಂತು ತುಂಬಲು ವಿಮಾ ಇಲಾಖೆ ಹೊಸ ಯೋಜನೆ ರೂಪಿಸಿ ರೈತರು ಗೊಂದಲಕ್ಕೀಡಾದರೂ, ಹಾನಗಲ್ಲ ತಾಲೂಕಿನಲ್ಲಿ ಕಳೆದ ವರ್ಷಕ್ಕಿಂತ ೧೫೦೦ ಹೆಕ್ಟೇರ್‌ನಷ್ಟು ಅಧಿಕ ಬೆಳೆ ವಿಮೆಯನ್ನು ರೈತರು ಈ ಬಾರಿ ತುಂಬಿದ್ದಾರೆ. ಬೆಳೆ ಹಾನಿ ಮಾತ್ರ ಮುಂದುವರೆದಿದೆ.

ಮಾರುತಿ ಶಿಡ್ಲಾಪೂರಕನ್ನಡಪ್ರಭ ವಾರ್ತೆ ಹಾನಗಲ್ಲ ತೋಟಗಾರಿಕೆ ಬೆಳೆ ವಿಮೆ ಕಂತು ತುಂಬಲು ವಿಮಾ ಇಲಾಖೆ ಹೊಸ ಯೋಜನೆ ರೂಪಿಸಿ ರೈತರು ಗೊಂದಲಕ್ಕೀಡಾದರೂ, ಹಾನಗಲ್ಲ ತಾಲೂಕಿನಲ್ಲಿ ಕಳೆದ ವರ್ಷಕ್ಕಿಂತ ೧೫೦೦ ಹೆಕ್ಟೇರ್‌ನಷ್ಟು ಅಧಿಕ ಬೆಳೆ ವಿಮೆಯನ್ನು ರೈತರು ಈ ಬಾರಿ ತುಂಬಿದ್ದಾರೆ. ಬೆಳೆ ಹಾನಿ ಮಾತ್ರ ಮುಂದುವರೆದಿದೆ.ಹಾನಗಲ್ಲ ತಾಲೂಕು ಅರೆ ಮಲೆನಾಡು ಪ್ರದೇಶ. ಇಲ್ಲಿ ಹತ್ತಾರು ವರ್ಷಗಳಿಂದ ಮಳೆ ಕೊರತೆ ಕಾರಣದಿಂದಾಗಿ, ಕೂಲಿ ಕಾರ್ಮಿಕರ ಕೊರತೆಯೂ ಕಾರಣವಾಗಿ ಬಹುತೇಕ ರೈತರು ತೋಟಗಾರಿಕೆ ಬೆಳೆಗಳ ಕಡೆಗೆ ತಮ್ಮ ಚಿತ್ತ ಬೆಳೆಸಿದ್ದಾರೆ. ಭತ್ತದ ನಾಡು ಗೋವಿನ ಜೋಳದಿಂದ ಆವರಿಸಿದೆ. ಮಾವು ತೆಗೆದು ಅಡಕೆ ತೋಟ ಮಾಡಲು ಮುಂದಾಗಿದ್ದಾರೆ. ಆದರೆ ಕಳೆದ ಬೇಸಿಗೆಯಲ್ಲಿ ಕೊಳವೆ ಬಾವಿಗಳ ನೀರು ಕೊರತೆಯಾಗಿ ಅನೇಕ ತೋಟಗಳು ಒಣಗಿ ರೈತರು ಕಂಗಾಲಾಗಿದ್ದಾರೆ. ಇದೆಲ್ಲದರ ನಡುವೆ ಇಲ್ಲಿ ಪ್ರಸ್ತುತ ವರ್ಷ ಆರಂಭವಾಗಿರುವ ಬಾಳಂಬೀಡ ಹಾಗೂ ಹಿರೇಕಾಂಸಿ ನೀರಾವರಿ ಯೋಜನೆಗಳು ರೈತರಲ್ಲಿ ತೋಟಗಾರಿಕೆ ಬೆಳೆ ಬೆಳೆಯಲು ಸಹಕಾರಿಯಾಗಿವೆ. ಹಾನಗಲ್ಲ ತಾಲೂಕಿನಲ್ಲಿ ೩೧೮೨ ಹೆಕ್ಟೇರ್ ಮಾವು ಇದೆ. ಸುಮಾರು ೧ ಸಾವಿರ ಹೆಕ್ಟೇರ್‌ನಷ್ಟು ಮಾವು ತೆಗೆದು ತೋಟಗಾರಿಕೆ ಇತರ ಬೆಳೆಗೆ ರೈತರು ಮುಂದಾಗಿದ್ದಾರೆ. ೧೦ ಸಾವಿರ ಹೆಕ್ಟೇರ್‌ನಷ್ಟು ಅಡಕೆ ಬೆಳೆ ಇದೆ. ೧ ಸಾವಿರ ಹೆಕ್ಟೇರ್‌ಗೂ ಅಧಿಕ ಶುಂಠಿ ಬೆಳೆ ಬೆಳೆಯುತ್ತಿದ್ದಾರೆ. ಕಳೆದ ಒಂದೂವರೆ ತಿಂಗಳಿನಿಂದ ಹಿಡಿದ ಮಳೆಗೆ ತೋಟಗಾರಿಕೆ ಬೆಳೆಗಳು ನೀರು ಹಿಡಿದು ಜೌಗು ಆಗುತ್ತಿವೆ. ಈಗಾಗಲೇ ೭೧ ಹೆಕ್ಟೇರ್‌ನಷ್ಟು ತೋಟಗಾರಿಕೆ ಬೆಳೆ ಹಾಳಾದ ವರದಿ ಇದೆ. ಜೌಗು ಹಿಡಿದು ಶುಂಠಿ, ಕ್ಯಾಬೀಜ, ಹಸಿ ಮೆಣಸಿನಕಾಯಿ ಬೆಳೆ ಹಾಳಾಗಿದೆ. ಅಡಕೆಗೆ ಜೌಗು ಹಿಡಿದಿದೆ. ಪ್ರಸ್ತುತ ವರ್ಷ ಬೆಳೆ ವಿಮೆ ನಿಯಮ ಬದಲಾಗಿದೆ. ಕಳೆದ ಮೂರು ವರ್ಷಗಳಿಂದ ಇದ್ದ ಬೆಳೆಗೆ ಮಾತ್ರ ವಿಮೆ ಕಂತು ತುಂಬುವ ಸೌಲಭ್ಯ ಎನ್ನುತ್ತಿದೆ ವಿಮಾ ಇಲಾಖೆ. ಇದರೊಂದಿಗೆ ಆಸ್ತಿ ಹಂಚಿಕೆಯಾಗಿದ್ದರೆ, ಖರೀದಿಯಾಗಿದ್ದರೆ ಕೂಡ ತೋಟಗಾರಿಕೆ ಬೆಳೆ ವಿಮೆ ತುಂಬಲು ಸಾಧ್ಯವಾಗಿಲ್ಲ. ಬೆಳೆ ನಮೂದು ಮಾಡುವ ಸಂದರ್ಭದಲ್ಲಿ ವೈಜ್ಞಾನಿಕವಾಗಿ ನಮೂದು ಮಾಡದೇ ಮಾವು ತೋಟವಿರುವಲ್ಲಿಯೂ ಗೋವಿನ ಜೋಳ, ಅಡಕೆ ಇರುವಲ್ಲಿ ಬೇರೆ ಬೇರೆ ಬೆಳೆಗಳಿವೆ ಎಂದು ಹಿಂದಿನ ವರ್ಷಗಳಲ್ಲಿ ನಮೂದಾಗಿರುವುದರಿಂದ ಈ ಬಾರಿ ಬೆಳೆವಿಮೆ ಕಂತು ತುಂಬಲು ಸಮಸ್ಯೆಯಾಗಿದೆ. ಇದೆಲ್ಲದರ ನಡುವೆಯೂ ಈ ಬಾರಿ ಹಿಂದಿನ ವರ್ಷಕ್ಕಿಂತ ಅಂದಾಜು ೧೫೦೦ ಹೆಕ್ಟೇರ್ ಗೂ ಹೆಚ್ಚು ತೋಟಗಾರಿಕಾ ಬೆಳೆ ವಿಮೆ ಕಂತು ತುಂಬಲಾಗಿದೆ. ಹಲವು ರೈತರು ತೋಟಗಾರಿಕೆ ಕಚೇರಿಗೆ ಅಲೆದಾಡದೇ ಕಂತು ತುಂಬುವುದನ್ನೆ ಬಿಟ್ಟಿದ್ದಾರೆ. ಹಾನಗಲ್ಲ ತಾಲೂಕು ರೈತರ ಬೆಳೆಗಳ ವಿಮಾ ಸೌಲಭ್ಯ ಪಡೆಯುವಲ್ಲಿ ಇಡೀ ರಾಜ್ಯದಲ್ಲಿಯೇ ಮುಂಚೂಣಿಯಲ್ಲಿದೆ. ಇಂತಹ ದೊಡ್ಡ ಜಾಗೃತಿ ಮೂಡಿಸಿ, ರೈತರಿಗೆ ಮಾಹಿತಿ ನೀಡಿದ ಮಾಜಿ ಸಚಿವ ದಿ.ಸಿಎಂ.ಉದಾಸಿ ಅವರನ್ನು ಈ ತಾಲೂಕಿನ ರೈತರು ಮರೆಯಲಾರರು. ಬೆಳೆವಿಮೆ ಎಂದರೆ ಅದು ಹಾನಗಲ್ಲ ತಾಲೂಕು. ಅದು ಸಿ.ಎಂ.ಉದಾಸಿ ಅವರ ಕೊಡುಗೆ ಎಂಬಂತೆ ಇಲ್ಲಿ ಜಾಗೃತಿ ಇದೆ.ಬೆಳೆವಿಮೆ ಹೊಸ ನಿಯಮದಿಂದ ಶೆ.೨ರಷ್ಟು ರೈತರು ಬೆಳೆ ವಿಮೆ ತುಂಬಲು ಸಾಧ್ಯವಾಗಿಲ್ಲ. ಆದರೆ ಈ ಬಾರಿ ಹಿಂದಿನ ವರ್ಷಗಳಿಗಿಂತ ಹೆಚ್ಚು ರೈತರು ಬೆಳೆ ವಿಮೆ ತುಂಬಿದ್ದಾರೆ. ಸಾಧ್ಯವಿರುವಲ್ಲಿ ಬೆಳೆ ವಿಮೆ ತುಂಬುವ ಸಮಸ್ಯೆಗಳನ್ನು ಪರಿಹಾರಿಸಲಾಗಿದೆ. ಮುಂದಿನ ವರ್ಷ ಇಂತಹ ಸಮಸ್ಯೆಯಾಗಲಾರದು ಎಂದು ಹಾನಗಲ್ಲ ತೋಟಗಾರಿಕೆ ಇಲಾಖೆ ಅಧಿಕಾರಿ ಮಂಜುನಾಥ ಬಣಕಾರ ಹೇಳಿದರು.