ಸಾರಾಂಶ
ವಿಶೇಷ ವರದಿ ಗದಗ
ಜಿಲ್ಲೆಯ ಪುರಸಭೆ, ಪಪಂ ಸಂಸ್ಥೆಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬೇಕಾದ ಸ್ಪಷ್ಟ ಬಹುಮತ ಹೊಂದಿದ್ದರೂ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ವೇಳೆ ಬಂಡಾಯದ ಬಿಸಿ ಎದುರಿಸಿ ಅಧಿಕಾರ ಕಳೆದುಕೊಂಡಿದೆ. ಬಿಜೆಪಿ ಸದಸ್ಯರಲ್ಲಿ ಒಗ್ಗಟ್ಟು ಮೂಡದ ಪರಿಣಾಮ ಉಂಟಾಗಿದ್ದ ಬಂಡಾಯದ ಲಾಭ ಕಾಂಗ್ರೆಸ್ ಪಡೆದುಕೊಂಡಿದೆ.ಬಿಜೆಪಿಯಿಂದ ಅಧಿಕೃತವಾಗಿ ನಾಮಪತ್ರ ಸಲ್ಲಿಸುತ್ತಿರುವ ಅಭ್ಯರ್ಥಿಗಳಿಗೆ ಕೈಕೊಟ್ಟು, ಬಂಡಾಯ ಬಿಜೆಪಿ ಸದಸ್ಯರು ಕಾಂಗ್ರೆಸ್ ಸದಸ್ಯರ ಬೆಂಬಲದೊಂದಿಗೆ ಅಧಿಕಾರದ ಗದ್ದುಗೆ ಹಿಡಿದಿದ್ದಾರೆ. ಸ್ಥಳೀಯ ಸಂಸ್ಥೆಗಳಲ್ಲಿ ಬಹುಮತದ ಸಂಖ್ಯಾಬಲ ಇದ್ದರೂ ಸಹ ಪಕ್ಷದ ಅಧಿಕೃತ ಅಭ್ಯರ್ಥಿಯನ್ನು ಗೆಲ್ಲಿಸಲು ಬಿಜೆಪಿಗೆ ಸಾಧ್ಯವಾಗುತ್ತಿಲ್ಲ. ಸ್ಥಳೀಯ ನಾಯಕರೊಂದಿಗೆ ವೈಮನಸ್ಸು, ತಾರತಮ್ಯ ಆರೋಪ, ಅಧಿಕಾರದ ಆಸೆಯಿಂದ ಚುನಾವಣಾ ಪೂರ್ವದಲ್ಲೇ ಬಿಜೆಪಿಯಿಂದ ಬಂಡಾಯ ಎದ್ದು ಕಾಂಗ್ರೆಸ್ ಸದಸ್ಯರೊಂದಿಗೆ ಗುರುತಿಸಿಕೊಂಡು ಮಾತೃ ಪಕ್ಷಕ್ಕೆ ಮುಜುಗರ ಉಂಟು ಮಾಡಿದ್ದಾರೆ.
ಮುಂಡರಗಿ ಪುರಸಭೆ: ಮುಂಡರಗಿ ಪುರಸಭೆಯಲ್ಲಿ 15 ಜನ ಬಿಜೆಪಿ ಸದಸ್ಯರಿದ್ದರೂ ಒಗ್ಗಟ್ಟಿಲ್ಲ. ಚುನಾವಣಾ ಪೂರ್ವದಲ್ಲಿ ಕೆಲ ಬಂಡಾಯ ಬಿಜೆಪಿ ಸದಸ್ಯರು ಹೈಜಾಕ್ ಆಗಿದ್ದರು. ಚುನಾವಣೆ ದಿನವೇ ಪುರಸಭೆ ಆವರಣದಲ್ಲಿ ಪ್ರತ್ಯಕ್ಷರಾಗಿ ಬಂಡಾಯ ಅಭ್ಯರ್ಥಿಗೆ ಬೆಂಬಲ ನೀಡಿದ್ದರು. ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ 15 ಬಿಜೆಪಿ ಸದಸ್ಯರ ಪೈಕಿ 7 ಜನ ಬಿಜೆಪಿ ಸದಸ್ಯರು ಬಂಡಾಯ ಬಿಜೆಪಿ ಅಭ್ಯರ್ಥಿಗೆ ಮತ ಚಲಾಯಿಸಿ ಗೆಲ್ಲಿಸಿದ್ದಾರೆ. 5 ಜನ ಕಾಂಗ್ರೆಸ್ ಸದಸ್ಯರು ಮತ್ತು 7 ಬಿಜೆಪಿ ಸದಸ್ಯರ ಬೆಂಬಲದೊಂದಿಗೆ ಬಿಜೆಪಿ ಬಂಡಾಯ ಅಭ್ಯರ್ಥಿ ನಿರ್ಮಲಾ ಕೊರ್ಲಹಳ್ಳಿ ಬಿಜೆಪಿಯ ಅಧಿಕೃತ ಅಭ್ಯರ್ಥಿ ಜ್ಯೋತಿ ಹಾನಗಲ್ಲ ವಿರುದ್ಧ ಗೆಲವು ಸಾಧಿಸಿ ಅಧ್ಯಕ್ಷರಾಗಿದ್ದಾರೆ.ಲಕ್ಷ್ಮೇಶ್ವರ ಪುರಸಭೆ: ಲಕ್ಷ್ಮೇಶ್ವರ ಪುರಸಭೆಯಲ್ಲಿ ಬಿಜೆಪಿ ಒಡೆದ ಮನೆಯಂತಾಗಿದೆ. ವಿಪ್ ಉಲ್ಲಂಘಿಸಿದ ಬಿಜೆಪಿ ಸದಸ್ಯೆ ಯಲ್ಲವ್ವ ದುರ್ಗಣ್ಣವರ ಕಾಂಗ್ರೆಸ್ಸಿನ 9, ಜೆಡಿಎಸ್ ಒಬ್ಬರು ಹಾಗೂ ಪಕ್ಷೇತರ 5 ಸದಸ್ಯರ ಬೆಂಬಲದೊಂದಿಗೆ ಅಧ್ಯಕ್ಷರಾಗಿ. ಉಪಾಧ್ಯಕ್ಷರಾಗಿ ಕಾಂಗ್ರೆಸ್ ಸದಸ್ಯ ಫಿರ್ದೋಷ ಆಡೂರು ಆಯ್ಕೆಯಾಗಿದ್ದಾರೆ. ಬಿಜೆಪಿಯಿಂದ ಅಧಿಕೃತವಾಗಿ ಕವಿತಾ ಶರಸೂರಿ ನಾಮಪತ್ರ ಸಲ್ಲಿಸಿದ್ದರು.
ನರೇಗಲ್ ಪಪಂ:ನರೇಗಲ್ಲ ಪಪಂನಲ್ಲಿಯೂ ಇದೇ ಕಥೆ, ಅಧಿಕಾರಕ್ಕೆ ಬೇಕಾದ ಸ್ಪಷ್ಟ ಬಹುಮತವಿದ್ದು ಮೊದಲ ಅವಧಿಗೆ ಅಧಿಕಾರ ಅನುಭವಿಸಿದ ಬಿಜೆಪಿ ಸದಸ್ಯರೇ ಕಾಂಗ್ರೆಸ್ ಜತೆ ಕೈ ಜೋಡಿಸಿ ಬಿಜೆಪಿ ಅಧಿಕೃತ ಅಭ್ಯರ್ಥಿ ವಿರುದ್ಧವೇ ತೊಡೆತಟ್ಟಿ ಕಾಂಗ್ರೆಸ್ 3, ಪಕ್ಷೇತರ 1 ಹಾಗೂ ಬಿಜೆಪಿಯ 5 ಜನರ ಬೆಂಬಲದೊಂದಿಗೆ ಫಕ್ಕೀರಪ್ಪ ಮಳ್ಳಿ ಅಧ್ಯಕ್ಷರಾಗಿ, ಕುಮಾರಸ್ವಾಮಿ ಕೋರಧಾನ್ಯಮಠ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದ ಬಿಜೆಪಿ ಅಧಿಕೃತ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನಗೌಡ ಬೂಮನಗೌಡರ ನಾಮಪತ್ರ ಸಲ್ಲಿಸಿದ್ದರು.ಗಜೇಂದ್ರಗಡ ಪುರಸಭೆ: ಗಜೇಂದ್ರಗಡ ಪುರಸಭೆಯ 23 ಜನ ಸದಸ್ಯರಲ್ಲಿ 18 ಜನ ಬಿಜೆಪಿ ಸದಸ್ಯರಿದ್ದರೂ ಸಹ ಬಿಜೆಪಿಯ ಅಧಿಕೃತ ಅಭ್ಯರ್ಥಿ ಸೋಲು ಕಂಡಿದ್ದು ಕಾಂಗ್ರೆಸ್ ಬೆಂಬಲಿತ ಬಿಜೆಪಿ ಅಭ್ಯರ್ಥಿ ಗೆಲವು ಸಾಧಿಸಿ ಬಿಜೆಪಿ ಮರ್ಮಾಘಾತ ನೀಡಿದ್ದಾರೆ. 18 ಜನ ಬಿಜೆಪಿ ಸದಸ್ಯರಲ್ಲಿ 7 ಜನ ಬಿಜೆಪಿ ಸದಸ್ಯರು ಮತ್ತು 5 ಜನ ಕಾಂಗ್ರೆಸ್ ಸದಸ್ಯರ ಬೆಂಬಲದೊಂದಿಗೆ ಬಂಡಾಯ ಬಿಜೆಪಿ ಅಭ್ಯರ್ಥಿ ಸುಭಾಸ ಮ್ಯಾಗೇರಿ ಅಧ್ಯಕ್ಷರಾಗಿ ಹಾಗೂ ಕಾಂಗ್ರೆಸ್ಸಿನ ಸವಿತಾ ಬಿದರಹಳ್ಳಿ ಉಪಾಧ್ಯಕ್ಷರಾಗಿದ್ದು ಬಿಜೆಪಿಯಿಂದ ಅಧಿಕೃತವಾಗಿ ಯಮನಪ್ಪ ತಿರಕೋಜಿ ನಾಮಪತ್ರ ಸಲ್ಲಿಸಿದ್ದರು.
ಜಿಲ್ಲಾ ಬಿಜೆಪಿಯಲ್ಲಿ ಏನಾಗುತ್ತಿದೆ ಎಂದು ಕಾರ್ಯಕರ್ತರೇ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಹಗಲಿರುಳು ಶ್ರಮಿಸಿ ವಾರ್ಡ್‌ಗಳಲ್ಲಿ ನೂರಾರು ಜನರ ವಿರೋಧ ಕಟ್ಟಿಕೊಂಡು ಪಕ್ಷದಿಂದ ಆಯ್ಕೆ ಮಾಡಿ ಕಳಿಸಿರುತ್ತಾರೆ. ಆದರೆ ಚುನಾಯಿತ ಸದಸ್ಯರೇ ಆಸೆ ಆಮಿಷಗಳಿಗೆ ಬಲಿಯಾಗಿ ವಿರೋಧ ಪಕ್ಷದೊಂದಿಗೆ ಕೈ ಜೋಡಿಸಿ ಪ್ರಾಮಾಣಿಕ ಕಾರ್ಯಕರ್ತರು ಮುಜುಗರ ಅನುಭವಿಸುವಂತಾಗಿದೆ. ಪಕ್ಷದಿಂದ ವಿಪ್ ಜಾರಿ ಮಾಡಿದ್ದರೂ ಅದನ್ನು ಲೆಕ್ಕಿಸದೇ ವಿರೋಧ ಪಕ್ಷದೊಂದಿಗೆ ಕೈ ಜೋಡಿಸಿರುವುದನ್ನು ನೋಡಿದಲ್ಲಿ ಜಿಲ್ಲಾ ಬಿಜೆಪಿಯಲ್ಲಿ ಯಾರದ್ದೂ ಹಿಡಿತವಿಲ್ಲವೇ? ಎನ್ನುವ ಪ್ರಶ್ನೆ ಎದುರಾಗಿದೆ.ದುರ್ಬಲ ಅಧ್ಯಕ್ಷರು: ಈ ಹಿಂದೆ ಲೋಕಸಭಾ ಚುನಾವಣೆಯಲ್ಲಿ ಮಾಜಿ ಸಚಿವರು, ಮಾಜಿ ಸಿಎಂಗಳ ವಿರುದ್ಧವೇ ಮಾತನಾಡಿದ ವ್ಯಕ್ತಿಯ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳಲು ಬಿಜೆಪಿ ಜಿಲ್ಲಾಧ್ಯಕ್ಷರಿಗೆ ಸಾಧ್ಯವಾಗಲಿಲ್ಲ. ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ವಿಫ್ ಜಾರಿ ಮಾಡುವುದು ಒಂದು ಭಾಗವಷ್ಟೇ, ಜಿಲ್ಲಾಧ್ಯಕ್ಷರಾದವರು ಪಕ್ಷದಲ್ಲಿ ಬಿಗಿ ಹಿಡಿತ ಹೊಂದಿರಬೇಕು, ಆದರೆ ಈಗಿನ ಜಿಲ್ಲಾಧ್ಯಕ್ಷರು ಅಂತಹ ಯಾವುದೇ ಪ್ರಭಾವ ಹೊಂದಿರದೇ ಇರುವುದರಿಂದ ಹೀಗೆಲ್ಲ ಆಗುತ್ತಿದೆ, ಹಾಲಿ ಅಧ್ಯಕ್ಷರ ದುರ್ಬಲತೆಯಿಂದ ಹೀಗಾಗುತ್ತಿದೆ ಎನ್ನುವುದು ಕಾರ್ಯಕರ್ತರ ಅಭಿಪ್ರಾಯ.
ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ವಿಷಯವಾಗಿ ಪಕ್ಷದ ಚುನಾಯಿತ ಸದಸ್ಯರಿಗೆ ವಿಪ್ ಜಾರಿ ಮಾಡಲಾಗಿತ್ತು. ಕೆಲ ಸದಸ್ಯರು ವಿಪ್ ಉಲ್ಲಂಘಿಸಿದ್ದಾರೆ, ಈ ಕುರಿತು ಪಕ್ಷದ ರಾಜ್ಯಾಧ್ಯಕ್ಷರಿಗೆ ವಿವರವಾದ ಪತ್ರ ಬರೆಯಲಾಗಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷರಾಜು ಕುರುಡಗಿ ತಿಳಿಸಿದ್ದಾರೆ.
;Resize=(128,128))
;Resize=(128,128))
;Resize=(128,128))
;Resize=(128,128))