ಭೀಕರ ಬರ ಆವರಿಸಿದ್ದರೂ ಸಿಎಂರಿಂದ ಡ್ಯಾನ್ಸ್‌, ಮೋಜು ಮಸ್ತಿ

| Published : Nov 05 2023, 01:16 AM IST

ಸಾರಾಂಶ

ರಾಜ್ಯದಲ್ಲಿ ತೀವ್ರ ಬರ ಆವರಿಸಿದ್ದರೂ ಅದನ್ನು ಪರಿಹರಿಸಿ ರೈತರಿಗೆ ಸಾಂತ್ವನ ಹೇಳಿ ನೆರವು ನೀಡುವ ಬದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಬರೀ ಡ್ಯಾನ್ಸ್ ಮಾಡುತ್ತಾ ಮೋಜು ಮಸ್ತಿಗೆ ಇಳಿದಿದ್ದಾರೆ ಎಂದು ಮಾಜಿ ಸಚಿವ ಬಿ. ಶ್ರೀ ರಾಮುಲು ಕಿಡಿಕಾರಿದರು.

ಶಿರಹಟ್ಟಿ: ರಾಜ್ಯದಲ್ಲಿ ತೀವ್ರ ಬರ ಆವರಿಸಿದ್ದರೂ ಅದನ್ನು ಪರಿಹರಿಸಿ ರೈತರಿಗೆ ಸಾಂತ್ವನ ಹೇಳಿ ನೆರವು ನೀಡುವ ಬದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಬರೀ ಡ್ಯಾನ್ಸ್ ಮಾಡುತ್ತಾ ಮೋಜು ಮಸ್ತಿಗೆ ಇಳಿದಿದ್ದಾರೆ ಎಂದು ಮಾಜಿ ಸಚಿವ ಬಿ. ಶ್ರೀ ರಾಮುಲು ಕಿಡಿಕಾರಿದರು.

ಶನಿವಾರ ಇಲ್ಲಿ ರೈತರ ಜಮೀನುಗಳಿಗೆ ಭೇಟಿ ನೀಡಿ ಬರ ಪರಿಸ್ಥಿತಿ ಅವಲೋಕಿಸಿ ಮಾತನಾಡಿದ ಅವರು, ದೇಶಕ್ಕೆ ಅನ್ನ ನೀಡುವ ರೈತರ ಶಾಪ ಯಾರಿಗೂ ಒಳ್ಳೆಯದಲ್ಲ. ಯಾವುದೇ ಸರ್ಕಾರವಿರಲಿ ಮೊದಲು ರೈತರ ಬೆನ್ನಲುಬಾಗಿ ಕೆಲಸ ಮಾಡಬೇಕು ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಉಚಿತ ಭರವಸೆ ಘೋಷಣೆ ಮಾಡಿ ಅಧಿಕಾರಕ್ಕೆ ಬಂದಿದೆ. ಯಾವುದೇ ಭರವಸೆಗಳನ್ನು ಈಡೇರಿಸುತ್ತಿಲ್ಲ. ಜನರಿಗೆ ಸುಳ್ಳು ಹೇಳಿ ಮತ ಗಿಟ್ಟಿಸಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಸರ್ಕಾರ ಬರೀ ಭಾಗ್ಯಗಳ ಹೆಸರಿನಲ್ಲಿ ರೈತರ ಸಂಕಷ್ಟಕ್ಕೆ ಸ್ಪಂದಿಸದೇ ಜವಾಬ್ದಾರಿ ಮರೆತಂತೆ ವರ್ತಿಸುತ್ತಿದೆ ಎಂದು ಟೀಕಿಸಿದರು.

ಅನ್ನ ನೀಡುವ ರೈತ ಸಂಕಷ್ಟದಲ್ಲಿದ್ದು, ಮುಂಗಾರು, ಹಿಂಗಾರು ಬೆಳೆಗಳು ಮಳೆ ಇಲ್ಲದೇ ಒಣಗಿ ಹೋಗಿವೆ. ಬರಗಾಲ ಛಾಯೆ ಆವರಿಸಿದೆ. ರೈತರ ಮತ್ತು ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವನ್ನು ಸರ್ಕಾರ ಮಾಡಬೇಕು. ಬರೀ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುತ್ತಾ ಜವಾಬ್ದಾರಿ ಮರೆತು ಬರ ಪರಿಹಾರದ ಹಣ ನೀಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ದೂರಿದರು.

ಬರದ ಛಾಯೆ ಆವರಿಸಿ ರೈತ ಸಂಕಷ್ಟದ ದಿನ ಕಳೆಯುತ್ತಿದ್ದರೂ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅತ್ಯಂತ ಸಂತೋಷದಿಂದ ಕುಣಿದು ಕುಪ್ಪಳಿಸುತ್ತ ಮೋಜು ಮಸ್ತಿಗೆ ಮುಂದಾಗಿದ್ದಾರೆ. ರೈತರ ಗೋಳಾಟ, ಬರದ ತೀವ್ರತೆ ಸಿಎಂ ಅವರಿಗೆ ಅರ್ಥವಾಗುತ್ತಿಲ್ಲ. ಬೇರೆ ಪಕ್ಷದ ಸಚಿವರು ಈ ರೀತಿ ವರ್ತಿಸಿದರೆ ಸಿದ್ದರಾಮಯ್ಯ ಕೆರಳಿ ಕೆಂಡವಾಗುತ್ತಿದ್ದರು. ಇನ್ನಾದರೂ ಎಚ್ಚೆತ್ತುಕೊಂಡು ರೈತರ ಗೋಳು ಆಲಿಸಬೇಕು ಎಂದು ಆಗ್ರಹಿಸಿದರು.

ನಿಮ್ಮ ಸಂಖ್ಯೆ ೩೬ಕ್ಕೆ ಇಳಿಯಲಿದೆ: ಮಾಜಿ ಸಚಿವ ಸಿ.ಸಿ. ಪಾಟೀಲ ಮಾತನಾಡಿ, ರಾಜ್ಯದಲ್ಲಿ ಬರಗಾಲ ತೀವ್ರವಾಗಿದೆ. ರೈತರು ಗುಳೆ ಹೋಗುತ್ತಿದ್ದಾರೆ. ಇಲಾಖೆ ಅಧಿಕಾರಿಗಳ ಮಾಹಿತಿ ಪ್ರಕಾರ ಮುಂಗಾರು ₹ ೪೦೦ ಕೋಟಿ, ಹಿಂಗಾರು ₹ ೧೨೭ ಕೋಟಿ ಹಾನಿಯಾದ ಬಗ್ಗೆ ವರದಿ ನೀಡಿದೆ. ಸರ್ಕಾರ ರೈತರಿಗೆ ಶಕ್ತಿ, ಸ್ಫೂರ್ತಿ ತುಂಬುವ ಕೆಲಸ ಮಾಡದೇ ನಿರ್ಲಕ್ಷ್ಯ ತೋರಿದ್ದು, ಬರೀ ಗ್ಯಾರಂಟಿ ಹೆಸರಿನಲ್ಲಿ ಕಾಲ ಕಳೆಯುತ್ತಾ ವಿಧಾನ ಸೌಧದಲ್ಲಿ ಕುಣಿದಾಡಿದರೆ ಮುಂದೆ ೧೩೬ರ ಬದಲು ನಿಮ್ಮ ಸಂಖ್ಯೆ ೩೬ಕ್ಕೆ ಇಳಿಯಲಿದೆ ಎಂದರು.

ಬರೀ ಕೇಂದ್ರ ಸರ್ಕಾರ ಬರ ಪರಿಹಾರದ ಹಣ ಬಿಡುಗಡೆ ಮಾಡಿಲ್ಲ ಎಂದು ನೆಪ ಹೇಳುತ್ತಾ ರೈತರನ್ನು ರಾಜ್ಯ ಸರ್ಕಾರ ಸಂಕಷ್ಟಕ್ಕೆ ತಳ್ಳಿದೆ. ರಾಜ್ಯ ಸರ್ಕಾರವಾದರೂ ರೈತರ ಸ್ಥಿತಿಗತಿ ಅರಿತು ತುರ್ತಾಗಿ ಬರ ಪರಿಹಾರದ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು. ರೈತರ ನೀರಾವರಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಇಲ್ಲ. ಜಲಾಶಯಗಳು, ಕೆರೆ, ಡ್ಯಾಂ ಬರಿದಾಗಿವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಸರ್ಕಾರ ತಮಿಳುನಾಡಿಗೆ ನೀರು ಬಿಡುತ್ತಿದ್ದು, ರಾಜ್ಯದ ರೈತರ ಜೀವದ ಜೊತೆ ಚೆಲ್ಲಾಟವಾಡುತ್ತಿದೆ. ಭೀಕರ ಬರ ಎದುರಾಗಿದ್ದು, ರೈತರ ನೆರವಿಗೆ ಬಾರದೇ ಹೋದರೆ ರಾಜ್ಯದಲ್ಲಿ ಎಲ್ಲ ಬರ ಸಮೀಕ್ಷೆ ನಡೆಸಿ ಮುಂಬರುವ ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಪ್ರಸ್ತಾವನೆ ಮಾಡಲಾಗುವುದು ಎಂದು ತಿಳಿಸಿದರು.

ಸರ್ಕಾರ ಕುಡಿಯುವ ನೀರು, ಮೇವು ಮತ್ತಿತರ ಉದ್ದೇಶಕ್ಕಾಗಿ ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ಗದಗ ಜಿಲ್ಲೆಗೆ ಕೇವಲ ₹ ೧೦ ಕೋಟಿ ನೀಡಿದ್ದು, ಯಾವುದಕ್ಕೂ ಸಾಲುವುದಿಲ್ಲ ಎಂದು ದೂರಿದರು.

ಶಾಸಕ ಡಾ. ಚಂದ್ರು ಕೆ. ಲಮಾಣಿ, ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಮಾಜಿ ಶಾಸಕ ಕಳಕಪ್ಪ ಬಂಡಿ, ಮುತ್ತಣ್ಣ ಲಿಂಗನಗೌಡರ, ರವಿ ದಂಡಿನ, ಪ್ರಕಾಶ ನಾಯ್ಕರ, ಭೀಮಸಿಂಗ್ ರಾಠೋಡ, ಶರಣು ಅಂಗಡಿ, ಉಷಾ ದಾಸರ, ಜಾನು ಲಮಾಣಿ, ಗಂಗಾಧರ ಮೆಣಸಿನಕಾಯಿ, ಗುಂಡೇಶ ಕೊಟಗಿ, ಫಕೀರೇಶ ರಟ್ಟಿಹಳ್ಳಿ, ಅಶೋಕ ಪಲ್ಲೇದ, ನಾಗರಾಜ ಲಕ್ಕುಂಡಿ, ಗೂಳಪ್ಪ ಕರಿಗಾರ, ಸಿದ್ರಾಮಪ್ಪ ಮೊರಬದ, ತಿಮ್ಮರಡ್ಡಿ ಮರಡ್ಡಿ, ಮೋಹನ್ ಗುತ್ತೆಮ್ಮನವರ, ಸಂದೀಪ ಕಪ್ಪತ್ತನವರ, ಅಶೋಕ ವರವಿ, ಪುಂಡಲೀಕ ಲಮಾಣಿ, ಕೊಟ್ರೇಶ ಸಜ್ಜನರ ಸೇರಿ ಅನೇಕರು ಇದ್ದರು.