ನಾಶಪಡಿಸಿದ ಸಮತಟ್ಟು ಸ್ಥಳ, ಮೆಟ್ಟಿಲು ಮರುನಿರ್ಮಾಣ ಶುರು

| Published : May 25 2024, 12:48 AM IST

ಸಾರಾಂಶ

ಹುಕ್ಕೇರಿ ತಾಲೂಕಿನ ಸಾರಾಪುರ ಎಸ್ಸಿ ಕಾಲೋನಿಗೆ ಭೇಟಿ ನೀಡಿದ ವಿವಿಧ ಇಲಾಖೆಗಳ ಅಧಿಕಾರಿಗಳ ತಂಡವು ನಾಶಪಡಿಸಿದ ಸಮತಟ್ಟು ಸ್ಥಳ ವೀಕ್ಷಿಸಿ ಮರು ನಿರ್ಮಿಸುವಂತೆ ಸೂಚಿಸಿತು.

ಕನ್ನಡಪ್ರಭ ವಾರ್ತೆ ಹುಕ್ಕೇರಿ

ತಾಲೂಕಿನ ಸಾರಾಪುರ ಗ್ರಾಮದ ಪರಿಶಿಷ್ಟ ಜಾತಿ (ಎಸ್ಸಿ) ಕಾಲೋನಿಯಲ್ಲಿ ಜಲಜೀವನ ಮಿಷನ್ (ಜೆಜೆಎಂ) ಯೋಜನೆಯಡಿ ಓವರ್ ಹೆಡ್ ಟ್ಯಾಂಕ್ (ಒಎಚ್‌ಟಿ) ನಿರ್ಮಿಸಲು ನಾಶಪಡಿಸಿರುವ ಸಮತಟ್ಟು ಪ್ರದೇಶ ಮತ್ತು ಮೆಟ್ಟಿಲುಗಳನ್ನು ಮರು ನಿರ್ಮಿಸುವ ಕಾರ್ಯ ಗುರುವಾರ ಶುರುವಾಗಿದೆ.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೇ ಎಸ್ಸಿ ಕಾಲೋನಿಯ ಸಮುದಾಯ ಭವನ ಮತ್ತು ಯುವಜನ ಕೇಂದ್ರದ ಮುಂಭಾಗದ ಆವರಣ ಧ್ವಂಸಗೊಳಿಸಿ, ನೆಲ ಅಗೆದು ತೆಗ್ಗು ಪ್ರದೇಶವನ್ನಾಗಿ ಮಾಡಲಾಗಿತ್ತು. ಇಲ್ಲಿನ ದಲಿತ ನಿವಾಸಿಗಳ ಆಕ್ರೋಶಕ್ಕೆ ಕಾರಣವಾದ ಈ ಸಮಸ್ಯೆ ಮೇಲೆ ಬೆಳಕು ಚೆಲ್ಲಿ ಕನ್ನಡಪ್ರಭ ಮೇ.23 ರಂದು ಅಭಿವೃದ್ಧಿಗಾಗಿ ಸಮತಟ್ಟು ಸ್ಥಳ, ಮೆಟ್ಟಿಲು ಧ್ವಂಸ ಶೀರ್ಷಿಕೆಯಡಿ ವಿಸ್ಕೃತ ವರದಿ ಪ್ರಕಟಿಸಿತ್ತು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಜಿಪಂ ಸಿಇಒ ರಾಹುಲ್ ಶಿಂಧೆ ಕೂಡಲೇ ಸಮಸ್ಯೆ ಇತ್ಯರ್ಥಪಡಿಸುವಂತೆ ಸಂಬಂಧಿಸಿದವರಿಗೆ ಕಟ್ಟಪ್ಪಣೆ ನೀಡಿ ಕಚೇರಿಗೆ ವರದಿ ಸಲ್ಲಿಸುವಂತೆ ಸೂಚಿಸಿದರು. ಇದೇ ವೇಳೆ ಮಾಜಿ ಸಂಸದ ರಮೇಶ ಕತ್ತಿ ಅವರು ಕೂಡ ದಲಿತ ಕಾಲೋನಿಯ ಜನರ ಕೂಗಿಗೆ ಧ್ವನಿಯಾಗಿ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸಿ ಸ್ಪಂದಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಇನ್ನು ವರದಿ ಪ್ರಕಟಗೊಂಡ ಬೆನ್ನಲ್ಲೇ ತಾಪಂ ಇಒ ಟಿ.ಆರ್.ಮಲ್ಲಾಡದ ನೇತೃತ್ವದ ವಿವಿಧ ಇಲಾಖೆಗಳ ಅಧಿಕಾರಿಗಳ ತಂಡವು ಸ್ಥಳಕ್ಕೆ ಭೇಟಿ ನೀಡಿ, ತತ್‌ಕ್ಷಣವೇ ಧ್ವಂಸಗೊಳಿಸಿರುವ ಸ್ಥಳ, ನಾಶಪಡಿಸಿರುವ ಮೆಟ್ಟಿಲುಗಳನ್ನು ಗುಣಮಟ್ಟದ ವಸ್ತುಗಳನ್ನು ಬಳಸಿ ಮರುನಿರ್ಮಿಸಲು ಕಾರ್ಯೋನ್ಮುಖರಾಗುವಂತೆ ಸಂಬಂಧಿಸಿದ ಗುತ್ತಿಗೆದಾರರಿಗೆ ಸೂಚಿಸಿತು. ಈ ಅನ್ವಯ ಮರುನಿರ್ಮಾಣ ಕಾರ್ಯ ಭರದಿಂದ ಸಾಗಿದೆ.

ಅಲ್ಲದೇ ಒಎಚ್‌ಟಿ ಟ್ಯಾಂಕ್ ನಿರ್ಮಾಣ ಕಾರ್ಯವೂ ಅಂತಿಮ ಹಂತದಲ್ಲಿದ್ದು ಶೀಘ್ರವೇ ಎಸ್ಸಿ ಕಾಲೋನಿ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆಯಾಗಲಿದೆ. ಈ ಮೂಲಕ ಯೋಜನೆ ವ್ಯಾಪ್ತಿಯ ಕೊನೆಯ ನಿವಾಸಿಗಳ ಮನೆಗಳಿಗೂ ನೀರು ಪೂರೈಕೆಯಾಗಲಿದೆ. ಸಮತಟ್ಟು ಪ್ರದೇಶ, ಮೆಟ್ಟಿಲು ಮರುನಿರ್ಮಾಣದಿಂದ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಅನುಕೂಲವಾಗಲಿದೆ. ಸಮಾಜದ ಸಭೆ, ಸಮಾರಂಭಗಳನ್ನು ಆಯೋಜಿಸಲೂ ಸಹ ಸಹಕಾರಿಯಾಗಲಿದೆ.

ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎಚ್.ಎ.ಮಾಹುತ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಎಇಇ ರಾಜೇಂದ್ರ ಜಾಧವ, ಸಹಾಯಕ ಎಂಜನೀಯರ್ ಸಂತೋಷ ಪಾಟೀಲ, ಗುತ್ತಿಗೆದಾರ ಡಿ.ಆರ್.ಪಿಡಾಯಿ, ತಾಪಂ ವ್ಯವಸ್ಥಾಪಕ ಅವಿನಾಶ ಹೊಳೆಪ್ಪಗೋಳ, ಪಿಡಿಒ ಸಂತೋಷ ಕಬ್ಬಗೋಳ ಮತ್ತಿತರರು ಉಪಸ್ಥಿತರಿದ್ದರು.