ಅಡಕೆ ಸಸಿ ನಾಶ: ಪಟ್ಟಣ ಪಂಚಾಯಿತಿ ವಿರುದ್ಧ ರೈತರ ಪ್ರತಿಭಟನೆ

| Published : Aug 24 2024, 01:29 AM IST

ಸಾರಾಂಶ

ತ್ಯಾಜ್ಯ ವಿಲೇವಾರಿ ಘಟಕಕ್ಕೆ ನಮ್ಮ ಜಮೀನನ್ನು ಅತಿಕ್ರಮಿಸಿದ್ದಾರೆ ಎಂದು ಆರೋಪಿಸಿ ಪಟ್ಟಣ ಪಂಚಾಯಿತಿ ಮುಂದೆ ರೈತರು ಧರಣಿ ನಡೆಸಿದರು.

ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು

ತ್ಯಾಜ್ಯ ವಿಲೇವಾರಿ ಘಟಕಕ್ಕೆ ನಮ್ಮ ಜಮೀನನ್ನು ಅತಿಕ್ರಮಿಸಿದ್ದಾರೆ ಹಾಗೂ ಅದರಲ್ಲಿರುವ ಅಡಿಕೆ ಸಸಿಗಳನ್ನು ಜೆಸಿಬಿ ಮುಖಾಂತರ ನಾಶಗೊಳಿಸಿದ್ದಾರೆ ಎಂದು ಆರೋಪಿಸಿ ರೈತರು ಪಟ್ಟಣ ಪಂಚಾಯಿತಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿದರು.

ಸಮೀಪದ ಮೂಡಲವಿಠಲಾಪುರದ ಸರ್ವೇ ನಂ.25ರಲ್ಲಿ 2 ಎಕರೆ ಜಮೀನು ರಾಮಪ್ಪನವರು ಸುಮಾರು 35 ವರ್ಷಗಳ ಹಿಂದಿನಿಂದಲೂ ಬೇಸಾಯ ಮಾಡುತ್ತಿ ದ್ದಾರೆ. ಇದೇ ಜಮೀನನ್ನು ಪಟ್ಟಣ ಪಂಚಾಯಿತಿ ತ್ಯಾಜ್ಯ ವಿಲೇವಾರಿ ಘಟಕ ಒತ್ತುವರಿ ಮಾಡಿಕೊಂಡು, ಗುರುವಾರ ಏಕಾಏಕಿ ಜಮೀನಿಗೆ ತೆರಳಿ ಅಡಿಕೆಗಳನ್ನು ನಾಶ ಮಾಡಿದ್ದಾರೆ ಎಂದು ಆರೋಪಿಸಿದರು.

ಪಟ್ಟಣ ಪಂಚಾಯಿತಿ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಅದೇ ಸರ್ವೇ ನಂಬರ್ 25ರಲ್ಲಿ ಬೇಕಾದಷ್ಟು ಜಮೀನಿದ್ದು, ಆ ಜಮೀನನ್ನು ಅತಿಕ್ರಮಿಸಿಕೊಳ್ಳದೇ ರೈತ ರಾಮಪ್ಪ ನವರ ಜಮೀನಿನಲ್ಲಿ ಲಕ್ಷಾಂತರ ಖರ್ಚು ಮಾಡಿ ಅಡಿಕೆ ಸಸಿಗಳನ್ನು ನೆಟ್ಟು ಕಳೆದ ಎರಡು ವರ್ಷಗಳಿಂದ ಮಕ್ಕಳಂತೆ ಕಾಪಾಡಿಕೊಂಡಿದ್ದ ಸಸಿಗಳನ್ನು ನಾಶ ಮಾಡಿರುವುದು ಪಟ್ಟಣ ಪಂಚಾಯಿತಿಗೆ ಶೋಭೆ ತರುವುದಿಲ್ಲ ಎಂದು ಆರೋಪಿಸಿದರು.

ಈಗಾಗಲೇ ಎಸಿ ಕೋರ್ಟ್‌ನಲ್ಲಿ ರಾಮಪ್ಪನವರಂತೆ ಉಪ ವಿಭಾಗಾಧಿಕಾರಿಗಳು ಆದೇಶ ನೀಡಿದ್ದಾರೆ. ಇದರ ಬಗ್ಗೆ ತಹಸೀಲ್ದಾರ್ ರವರಿಗೆ ಆದೇಶ ನೀಡಿದ್ದು, ಇದುವರಗೂ ತಹಸೀಲ್ದಾರ್ ಗಮನ ಹರಿಸಿರುವುದಿಲ್ಲ. ಈಗ ಪಟ್ಟಣ ಪಂಚಾಯಿತಿ ಜಮೀನುದಾರರಿಗೆ ನೋಟಿಸ್ ನೀಡದೇ ಹಾಗೂ ಮಾಹಿತಿ ನೀಡದೇ ಜೆಸಿಬಿ ಮುಖಾಂತರ 2 ಎಕರೆ ಅಡಕೆ ಸಸಿಗಳನ್ನು ನಾಶ ಮಾಡಿದ್ದಾರೆ ಎಂದರು.

ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿರೇಶ್, ರಾಮಪ್ಪ, ರಂಗಪ್ಪ, ಕುಮಾರ್, ಬಸವರಾಜಪ್ಪ, ಸುರೇಶ್, ರಮೇಶ್, ವಿಜಯ್, ಹಾಲೇಶ್, ಶೇಖರಪ್ಪ, ಪ್ರಜ್ವಲ್, ದರ್ಶನ್, ನಾಗರಾಜ್ ಸೇರಿದಂತೆ ಇನ್ನಿತರರು ಹಾಜರಿದ್ದರು.