ಕಾಡು ಹಂದಿಗಳ ಉಪಟಳಕ್ಕೆ ಭತ್ತದ ಬೆಳೆ ನಾಶ

| Published : Jan 27 2024, 01:19 AM IST

ಸಾರಾಂಶ

ಗದ್ದೆಗೆ ಕಾಡು ಹಂದಿಗಳು ದಿನಂಪ್ರತಿ ಗುಂಪು ಗುಂಪಾಗಿ ದಾಳಿ ಮಾಡಿ ಪೈರುಗಳನ್ನು ನಾಶಪಡಿಸಿವೆ. ಈಗಾಗಲೇ ಬರದಿಂದ ತತ್ತರಿಸಿರುವ ರೈತರಿಗೆ ಕಾಡು ಪ್ರಾಣಿ ಉಪಟಳದಿಂದ ಭಾರಿ ನಷ್ಟ ಉಂಟಾಗುತ್ತಿದೆ. ಕಥಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿ ನಿರ್ಮಾಣವಾಗಿದೆ.

ದುಗ್ಗಳ ಸದಾನಂದ

ಕನ್ನಡಪ್ರಭ ವಾರ್ತೆ ನಾಪೋಕ್ಲು

ವೆಸ್ಟ್ ಕೊಳಕೇರಿ ಗ್ರಾಮದಲ್ಲಿ ಕಾಡು ಹಂದಿಗಳ ಉಪಟಳ ವಿಪರೀತವಾಗಿದ್ದು, ಬತ್ತದ ಬೆಳೆ ಸಂಪೂರ್ಣ ನಾಶವಾಗಿದೆ. ತಡವಾಗಿ ಭತ್ತ ಕೊಯ್ಲು ಮಾಡಲು ಹೊರಟ ಬೆಳೆಗಾರರಿಗೆ ಏನು ದಕ್ಕದ ಪರಿಸ್ಥಿತಿ ನಿರ್ಮಾಣವಾಗಿ ಭಾರಿ ನಷ್ಟ ಸಂಭವಿಸಿ ಚಿಂತೆಗೀಡಾಗಿದ್ದಾರೆ.

ಇಲ್ಲಿಗೆ ಸಮೀಪದ ವೆಸ್ಟ್ ಕೊಳಕೇರಿ ಗ್ರಾಮದ ನಿವಾಸಿ ಕಲಿಯಂಡ ದರ್ಶನ್ ಅಯ್ಯಪ್ಪ ಅವರ ಗದ್ದೆಗೆ ಕಾಡು ಹಂದಿಗಳು ದಿನಂಪ್ರತಿ ಗುಂಪು ಗುಂಪಾಗಿ ದಾಳಿ ಮಾಡಿ ಪೈರುಗಳನ್ನು ನಾಶಪಡಿಸಿವೆ. ಸುಮಾರು ಒಂದು ಎಕರೆಯಷ್ಟು ಕೃಷಿ ಭೂಮಿ ಕಾಡು ಹಂದಿಗಳ ದಾಳಿಗೆ ತುತ್ತಾಗಿ ಇಳುವರಿ ಹೋಗಲಿ ಹುಲ್ಲು ಕೂಡ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಅವರು ಅಧಿಕ ಇಳುವರಿ ನೀಡಬಲ್ಲ ತಮಿಳುನಾಡಿನ ನಾಟಿ ಬತ್ತದ ತಳಿಯನ್ನು ಬಿತ್ತಿದ್ದರು. ಅಧಿಕ ಮಳೆಯಿಂದಾಗಿ ಆಗಸ್ಟ್ ತಿಂಗಳಲ್ಲಿ ಡ್ರಮ್ ಸೀಡ್ ಪದ್ಧತಿಯಲ್ಲಿ ವ್ಯವಸ್ಥಿತವಾಗಿ ನಾಟಿ ಕೈಗೊಳ್ಳಲಾಗಿತ್ತು. ಇದೀಗ ಬೆಳೆ ಕಟಾವ್ ಮಾಡುವ ಅವಧಿಯಾಗಿದ್ದು, ಕಾಡು ಹಂದಿಗಳ ಉಪಟಳದಿಂದಾಗಿ ಬೆಳೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

ಈ ಹಿಂದೆ ಕೊಡಗು ಭತ್ತದ ಕಣಜ ಎಂದೇ ಪ್ರಖ್ಯಾತಿ ಪಡೆದಿತ್ತು. ಅದರೆ ಇತ್ತೀಚಿನ ವರ್ಷಗಳಲ್ಲಿ ಹವಮಾನದ ವೈಪರೀತ್ಯ ಹಾಗೂ ಕಾಡು ಪ್ರಾಣಿಗಳ ಉಪಟಳ ಸೇರಿದಂತೆ ಹಲವಾರು ಕಾರಣಗಳಿಂದಾಗಿ ಬಹುತೇಕ ಫಲವತ್ತಾದ ಗದ್ದೆಗಳು ಬಂಜರು ಬಿದ್ದಿದೆ. ಇದೀಗ ಬೆರಳೆಣಿಕೆಯ ರೈತರು ಕಷ್ಟಪಟ್ಟು ಬೇಸಾಯ ಮಾಡಿ ಭತ್ತ ಬೆಳೆದರೂ ಧಾನ್ಯ ದಕ್ಕದೆ ಬೇಸಾಯಕ್ಕೆ ವಿಮುಖರಾಗುತ್ತಿದ್ದಾರೆ.

ಈ ನಿಟ್ಟಿನಲ್ಲಿ ಕೃಷಿ ಇಲಾಖೆ ಹಾಗೂ ಸರ್ಕಾರ ಸೂಕ್ತ ಪರಿಹಾರ ಹಾಗೂ ಸಹಕಾರ ನೀಡಿ ಪ್ರೋತ್ಸಾಹಿಸಬೇಕೆಂದು ಇಲ್ಲಿಯ ಗದ್ದ ಬೇಸಾಯಗಾರರು ಒತ್ತಾಯ ಪಡಿಸಿದ್ದಾರೆ.

ಸರ್ಕಾರ ವಿವಿಧ ಇಲಾಖೆಗಳು ರೈತರ ಶ್ರೇಯೋಭಿವೃದ್ಧಿಗೆ ಕ್ರಮ ಕೈಗೊಳ್ಳುತ್ತಿಲ್ಲ. ರೈತರಿಗೆ ಸೂಕ್ತ ಪರಿಹಾರ ಒದಗಿಸಿದರಷ್ಟೇ ಕೃಷಿ ಮಾಡಲು ಸಾಧ್ಯ. ಇಲ್ಲದಿದ್ದಲ್ಲಿ ರೈತರು ಕೃಷಿಯಲ್ಲಿ ಆಸಕ್ತಿ ಕಳೆದುಕೊಳ್ಳುವಂತಾಗುತ್ತದೆ.

। ಕಲಿಯ೦ಡ ದರ್ಶನ್ ಅಯ್ಯಪ್ಪ, ವೆಸ್ಟ್ ಕೊಳಕೇರಿ ಗ್ರಾಮ