ಯಂತ್ರಗಳ ಬಳಕೆಯಿಂದ ಸಂವೇದನಾಶೀಲತೆ ನಾಶ: ಬಸವರಾಜ್‌ ಕಳವಳ

| Published : Aug 25 2024, 01:47 AM IST

ಯಂತ್ರಗಳ ಬಳಕೆಯಿಂದ ಸಂವೇದನಾಶೀಲತೆ ನಾಶ: ಬಸವರಾಜ್‌ ಕಳವಳ
Share this Article
  • FB
  • TW
  • Linkdin
  • Email

ಸಾರಾಂಶ

ಮಕ್ಕಳ ವಿದ್ಯಾಭ್ಯಾಸದಲ್ಲಿ ಮೌಲ್ಯಯುತ ಶಿಕ್ಷಣ ನೀಡುವುದರ ಮೂಲಕ ಅವರನ್ನು ರಾಷ್ಟ್ರಕ್ಕೆ ಉತ್ಪಾದಕ ಶಕ್ತಿಯನ್ನಾಗಿಸುವತ್ತಾ ಎಲ್ಲರೂ ಗಮನಹರಿಸಬೇಕಾಗಿದೆ

ಕನ್ನಡಪ್ರಭ ವಾರ್ತೆ ಸಿರಿಗೆರೆ

ದೈನಂದಿನ ಬದುಕಿನಲ್ಲಿ ಯಂತ್ರಗಳ ಬಳಕೆ ಜಾಸ್ತಿಯಾಗಿರುವುದರಿಂದ ಮನುಷ್ಯ ಸಂವೇದನಾಶೀಲತೆ ಕಳೆದುಕೊಳ್ಳುತ್ತಿದ್ದಾನೆ ಎಂದು ಚಿತ್ರದುರ್ಗ ಸರ್ಕಾರಿ ಡಯಟ್‌ ಸಂಸ್ಥೆಯ ಉಪನ್ಯಾಸಕ ಬಸವರಾಜ್‌ ಕಳವಳ ವ್ಯಕ್ತಪಡಿಸಿದ್ದಾರೆ.

ಸಮೀಪದ ಕಡ್ಲೇಗುದ್ದು ಗ್ರಾಮದ ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆ ಹಾಗೂ ಆಂಜನೇಯ ಪ್ರೌಢ ಶಾಲೆ ಸಹಯೋಗದಲ್ಲಿ ಜರುಗಿದ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯಂತ್ರೋಪಕರಣಗಳ ಅವಲಂಬನೆ ಹೆಚ್ಚಾಗುತ್ತಿರುವ ಈ ದಿನಗಳಲ್ಲಿ ಮಕ್ಕಳ ವಿದ್ಯಾಭ್ಯಾಸದಲ್ಲಿ ಮೌಲ್ಯಯುತ ಶಿಕ್ಷಣ ನೀಡುವುದರ ಮೂಲಕ ಅವರನ್ನು ರಾಷ್ಟ್ರಕ್ಕೆ ಉತ್ಪಾದಕ ಶಕ್ತಿಯನ್ನಾಗಿಸುವತ್ತಾ ಎಲ್ಲರೂ ಗಮನಹರಿಸಬೇಕಾಗಿದೆ ಎಂದರು.

ಭಾರತ ಇಂದು ಚಂದ್ರನ ಸಮೀಪಕ್ಕೆ ನೌಕೆಯನ್ನು ಕಳುಹಿಸಿದ ನಾಲ್ಕನೇ ರಾಷ್ಟ್ರ ಹಾಗೂ ದಕ್ಷಿಣ ದ್ರುವದ ಮೇಲೆ ಹೆಜ್ಜೆಯಿರಿಸಿದ ಜಗತ್ತಿನ ಮೊದಲ ರಾಷ್ಟ್ರವಾಗಿದೆ. ಮಕ್ಕಳಲ್ಲಿ ಬಾಹ್ಯಾಕಾಶ ಕುರಿತಾದ ಹೆಚ್ಚಿನ ವಿಷಯಗಳನ್ನ ತಂತ್ರಜ್ಞಾನದ ಮೂಲಕ ನೀಡುವುದರೂಂದಿಗೆ ವಿಜ್ಞಾನದಲ್ಲಿ ಆಸಕ್ತಿ ಮೂಡಿಸುವಂತಹ ಕಾರ್ಯಕ್ರಮ ಆಯೋಜಿಸಬೇಕಾಗಿದೆ. ಜೊತೆಗೆ ಪಠ್ಯೇತರ ಚಟುವಟಿಕೆಗಳು, ಸ್ಪರ್ಧೆಗಳು ಇನ್ನಿತರ ಚಟುವಟಿಕೆ ಹಮ್ಮಿಕೊಳ್ಳುವುದರ ಮೂಲಕ ಮೌಲ್ಯ ಬೆಳಸಬೇಕಾಗಿದೆ. ಇದರಲ್ಲಿ‌ ಪೋಷಕರ ಪಾತ್ರವು ದೊಡ್ಡದಿದೆ ಎಂದರು.

ಚಂದ್ರನ ಮೇಲೆ ಭಾರತವು ಮಾನವಸಹಿತ ನೌಕೆಯನ್ನು ಇದುವರೆಗೂ ಕಳಿಸಲಾಗಿಲ್ಲ. ಅಂತಹ ಪ್ರಯತ್ನ ೨೦೨೬ರಲ್ಲಿ ದೇಶದ ವಿಜ್ಞಾನಿಗಳಿಂದ ಆಗಬಹುದು. ಇಸ್ರೋ ವಿಜ್ಞಾನಿಗಳು ಚಂದ್ರನ ದಕ್ಷಿಣ ದ್ರುವಕ್ಕೆ ಚಂದ್ರಯಾನ-3ಯು ಯಶಸ್ವಿಯಾದ ಸವಿನೆನಪಿಗಾಗಿ ಈ ದಿನವನ್ನು ಸಂಭ್ರಮದಿಂದ ಬಾಹ್ಯಾಕಾಶ ದಿನವನ್ನಾಗಿ ಆಚರಿಸುತ್ತಿದ್ದೇವೆ ಎಂದು ಹವ್ಯಾಸಿ ಖಗೋಳ ಶಾಸ್ತ್ರಜ್ಞರಾದ ಎಚ್.ಎಸ್.ಟಿ.ಸ್ವಾಮಿ ತಿಳಿಸಿದರು.

ಮುಖ್ಯ ಅತಿಥಿಯಾಗಿದ್ದ ಆಜನೇಯ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಡಾ.ಮಹೇಶ್ ಇಸ್ರೂ ಸಾಧನೆಗಳ ಕುರಿತು ಮಾತನಾಡಿದರು. ಶಾಲೆಯ ಪ್ರಾಂಶುಪಾಲ ರಮೇಶ್ ಮಾತನಾಡುತ್ತಾ ವಿದ್ಯಾರ್ಥಿಗಳು ವೈಜ್ಞಾನಿಕ ಹಾಗೂ ವೈಚಾರಿಕ ಮನೋಭಾವವನ್ನು ಬೆಳಸಿಕೊಂಡು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದರು.

ಟಿ. ಸಿದ್ದಪ್ಪ ಸ್ವಾಗತಿಸಿದರು. ಬಿ.ಜಯಪ್ಪ ವಂದಿಸಿದರು. ಬಿ. ಪ್ರಕಾಶ್‌ ನಿರೂಪಣೆ ಮಾಡಿದರು.