ಪರಿಸರ ನಾಶದಿಂದ ಜೀವ ಜಗತ್ತು ಸಂಕಷ್ಟಕ್ಕೆ: ನಾಗೇಶ್ ಹೆಗಡೆ

| Published : Sep 05 2024, 12:30 AM IST

ಪರಿಸರ ನಾಶದಿಂದ ಜೀವ ಜಗತ್ತು ಸಂಕಷ್ಟಕ್ಕೆ: ನಾಗೇಶ್ ಹೆಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ಅರಣ್ಯನಾಶ, ಇಂಧನಗಳ ಅತಿಯಾದ ಬಳಕೆಯಿಂದ ಜಗತ್ತಿನ ತಾಪಮಾನ ಹೆಚ್ಚುತ್ತಿದೆ. ಭೂಮಿ ಕೋಪಗೊಂಡಿದೆ.

ಸಂಡೂರು: ಅರಣ್ಯ ನಾಶ, ಪರಿಸರ ಮಾಲಿನ್ಯ, ಪರಿಸರ ನಾಶದಿಂದ ಜೀವ ಜಗತ್ತು ಸಂಕಷ್ಟಕ್ಕೆ ಸಿಲುಕುತ್ತಿದೆ. ಪ್ರಾಕೃತಿಕ ವಿಕೋಪಗಳನ್ನು ಪ್ರಪಂಚ ಎದುರಿಸುವಂತಾಗಿದೆ ಎಂದು ಹಿರಿಯ ಪತ್ರಕರ್ತ, ಪರಿಸರ ಹೋರಾಟಗಾರ ನಾಗೇಶ್ ಹೆಗಡೆ ಅಭಿಪ್ರಾಯಪಟ್ಟರು.

ಪಟ್ಟಣದ ಆದರ್ಶ ಸಮುದಾಯ ಕೇಂದ್ರದಲ್ಲಿ ಬುಧವಾರ ಜನ ಸಂಗ್ರಾಮ ಪರಿಷತ್‌ನಿಂದ ಹಮ್ಮಿಕೊಂಡಿದ್ದ ಗಣಿ ಬಾಧಿತ ಜನರ ಬದುಕು ಮತ್ತು ಪರಿಸರ ಪುನಶ್ಚೇತನ ಸಂಕಲ್ಪ ಸಮಾವೇಶದಲ್ಲಿ ಅವರು ಜಾಗತಿಕ ತಾಪಮಾನ ಮತ್ತದರ ನಿಯಂತ್ರಣ ವಿಷಯ ಕುರಿತು ವಿಷಯ ಮಂಡನೆ ಮಾಡಿದರು.

ಅರಣ್ಯನಾಶ, ಇಂಧನಗಳ ಅತಿಯಾದ ಬಳಕೆಯಿಂದ ಜಗತ್ತಿನ ತಾಪಮಾನ ಹೆಚ್ಚುತ್ತಿದೆ. ಭೂಮಿ ಕೋಪಗೊಂಡಿದೆ. ಇದರಿಂದಾಗಿ ಪ್ರಾಕೃತಿಕ ಅವಘಡಗಳು ಸಂಭವಿಸುತ್ತಿವೆ. ಹಿಮ ಪರ್ವತಗಳು ಕರಗುತ್ತಿವೆ. ಸಮುದ್ರಮಟ್ಟ ಹೆಚ್ಚುತ್ತಿದೆ. ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ಸಮಾಜ ಪರಿವರ್ತನ ಸಮುದಾಯದ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್. ಹಿರೇಮಠ ಅಕ್ರಮ ಗಣಿಗಾರಿಕೆ ಹಾಗೂ ಕಾನೂನು ಹೋರಾಟ ವಿಷಯ ಕುರಿತು ಮಾತನಾಡಿ, ಸಂಡೂರಿನಲ್ಲಿ ೨೦೦೭-೦೮ರಲ್ಲಿ ಅಕ್ರಮ ಗಣಿಗಾರಿಕೆ ಮಿತಿ ಮೀರಿತ್ತು. ಇಲ್ಲಿ ಸಂವಿಧಾನದ ಆಶಯಗಳು ಅನುಷ್ಠಾನವಾಗಿದೆ ಎಂಬಂತಿರಲಿಲ್ಲ. ಪ್ರತಿದಿನ ಸುಮಾರು 10 ಸಾವಿರ ಅದಿರು ಹೊತ್ತ ಲಾರಿಗಳು ಚೆನ್ನೈ, ಕಾರವಾರ ಮುಂತಾದ ಬಂದರುಗಳಿಗೆ ತೆರಳಿ, ಅಲ್ಲಿಂದ ಅದಿರನ್ನು ಹೊರ ದೇಶಗಳಿಗೆ ಕಳುಹಿಸಲಾಗುತ್ತಿತ್ತು. ಇಲ್ಲಿನ ಅಕ್ರಮ ಗಣಿಗಾರಿಕೆ ತಡೆಯಲು ನಾವು ತೀರ್ಮಾನಿಸಿದಾಗ, ಸಾತ್ವಿಕ ರಾಜಕಾರಣಿ ಎಂ.ಪಿ. ಪ್ರಕಾಶ್ ಗಣಿ ಭಾಗದಲ್ಲಿ ಪರಿಸ್ಥಿತಿ ಸರಿ ಇಲ್ಲ. ಅಲ್ಲಿಗೆ ಬರುವುದು ಬೇಡ ಎಂದು ತಿಳಿಸಿದ್ದರು. ಆದರೆ, ಇಲ್ಲಿನ ಖನಿಜ ಸಂಪತ್ತು ಲೂಟಿಯಾಗುತ್ತಿರುವುದನ್ನು ತಡೆಯಲು ಇಲ್ಲಿಗೆ ಬರಬೇಕಾಯಿತು ಎಂದರು.

೨೦೦೮ರಲ್ಲಿ ಅಂದಿನ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ಅಕ್ರಮ ಗಣಿಗಾರಿಕೆ ಕುರಿತು ವರದಿ ಸಲ್ಲಿಸಿದರು. ಅಕ್ರಮ ಗಣಿಗಾರಿಕೆ ವಿರುದ್ಧ ಸುಪ್ರೀಂ ಕೋರ್ಟಿಗೆ ಹೋಗಬೇಕಾಯಿತು. ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಇಲ್ಲಿನ ಅಕ್ರಮ ಗಣಿಗಾರಿಕೆಗೆ ಬ್ರೇಕ್ ಬಿದ್ದಿತು. ಇಲ್ಲಿನ ಜನರ ಮಾನವೀಯ ವಿಕಾಸವಾಗಬೇಕಿದೆ. ಇಲ್ಲಿನ ಜನರ ಬದುಕು ಮತ್ತು ಪರಿಸರ ಪುನಶ್ಚೇತನ ಹಾಗೂ ಪುನರ್ ನಿರ್ಮಾಣವಾಗಬೇಕಿದೆ. ಕಾರ್ಯಕ್ಕೆ ಎಲ್ಲರೂ ಶ್ರಮಿಸೋಣ ಎಂದರು.

ಜನ ಸಂಗ್ರಾಮ ಪರಿಷತ್ ಸಂಸ್ಥಾಪಕ ಅಧ್ಯಕ್ಷ ರಾಘವೇಂದ್ರ ಕುಷ್ಟಗಿ ಮುಂದಿನ ಹೋರಾಟದ ದಿಕ್ಸೂಚಿ, ಸಂತೋಷ್ ಮಾರ್ಟಿನ್ ಸಂಡೂರಿನ ಅರಣ್ಯ ಮತ್ತು ಅಲ್ಲಿನ ವೈವಿಧ್ಯತೆ, ರೈತ ಸಂಘದ ರಾಜ್ಯ ಸಮಿತಿ ಅಧ್ಯಕ್ಷ ಬಡಗಲಪುರ ನಾಗೇಂದ್ರ ಕೃಷಿ ಭೂಮಿ ಸದ್ಬಳಕೆ ಕುರಿತು ವಿಷಯ ಮಂಡಿಸಿದರು.

ಕಾರ್ಯಕ್ರಮದಲ್ಲಿ ಚಾಗನೂರು ಮಲ್ಲಿಕಾರ್ಜುನರೆಡ್ಡಿ, ಸೈಯ್ಯದ್ ಹೈದರ್, ಶ್ರೀಶೈಲ ಆಲ್ದಳ್ಳಿ, ಟಿ.ಎಂ. ಶಿವಕುಮಾರ್, ಜಿ.ಕೆ. ನಾಗರಾಜ, ಎಂ.ಎಲ್.ಕೆ. ನಾಯ್ಡು, ವಿನಾಯಕ ಮುದೇನೂರು, ವಿಜಯಕುಮಾರ್, ಮಲ್ಲಿಕಾರ್ಜುನ, ಉಗ್ರನರಸಿಂಹೇಗೌಡ, ರವಿಕ್ರಿಷ್ಣಾರೆಡ್ಡಿ, ಆರ್. ಸೋಮಶೇಖರಗೌಡ, ಕೆ.ಎಂ. ಈಶ್ವರಿ, ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪಟ್ಟಣದ ವಿಜಯ ವೃತ್ತಿದಿಂದ ಆದರ್ಶ ಸಮುದಾಯ ಭವನದವರೆಗೆ ಜಾಗೃತಿ ಜಾಥಾ ನಡೆಸಿದರು.

ನಿರ್ಣಯಗಳು:

ಶ್ರೀಕುಮಾರಸ್ವಾಮಿ ಬೆಟ್ಟ, ರಾಮನಮಲೈ ಅರಣ್ಯ ಸೇರಿದಂತೆ ತಾಲೂಕಿನಲ್ಲಿರುವ ನೈಸರ್ಗಿಕ ಅರಣ್ಯದಲ್ಲಿ ಗಣಿಗಾರಿಕೆಗೆ ಅವಕಾಶ ನೀಡಬಾರದು. ಜಿಂದಾಲ್ ಸಂಸ್ಥೆಗೆ ನೀಡಿರುವ ೩೬೬೭ ಎಕರೆ ಭೂಮಿ ಪರಭಾರೆಯನ್ನು ಹಿಂಪಡೆಯಬೇಕು. ಉದ್ದಿಮೆಗೆ ನೀಡಿರುವ ಭೂಮಿ ಬಳಕೆ ಬಗ್ಗೆ ಲ್ಯಾಂಡ್ ಆಡಿಟ್ ಆಗಬೇಕು. ಸಂಗ್ರಹವಾಗಿರುವ ₹೩೨೦೦೦ ಕೋಟಿ ಕೆಎಂಇಆರ್‌ಸಿ ಹಣವನ್ನು ಗಣಿಬಾಧಿತ ಜನ ಮತ್ತು ಪರಿಸರ ಪುನಶ್ಚೇತನಕ್ಕೆ ಮಾತ್ರ ಬಳಕೆ ಮಾಡಬೇಕು. ಈ ಹಣದಲ್ಲಿ ಕೆರೆ ತುಂಬಿಸುವುದು, ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ೧೫೦ ದಿನಗಳ ಉದ್ಯೋಗ ನೀಡುವುದು, ನೈಸರ್ಗಿಕ ಅರಣ್ಯ ಬೆಳೆಸಲು ಗ್ರಾಮ ಅರಣ್ಯ ಸಮಿತಿ ಮೂಲಕ ರೈತರಿಗೆ ಪ್ರೋತ್ಸಾಹ ಧನ ನೀಡುವುದು, ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ವಿನಿಯೋಗಿಸುವುದು.