ಸಾರಾಂಶ
ಕನ್ನಡಪ್ರಭ ವಾರ್ತೆ ರಾಮನಗರ
ಜಗತ್ತಿನಲ್ಲಿ ಜನಾಂಗೀಯ ಅಧ್ಯಯನದ ನೆಲೆಗಳು ಹಲವು ಸಿದ್ಧಾಂತಗಳ ಮೇಲೆ ರೂಪಿತವಾಗಿವೆ. ಸೃಷ್ಟಿಮೂಲ ಸಿದ್ಧಾಂತ, ಕುಲಮೂಲ ಸಿದ್ಧಾಂತ, ಪುರಾಣಮೂಲ ಸಿದ್ಧಾಂತ ಇತ್ಯಾದಿಗಳ ಹಿನ್ನೆಲೆಯಲ್ಲಿ ರೂಪಿತವಾದ ವಿವರಗಳಲ್ಲಿ ಅಗ್ನಿಬನ್ನಿರಾಯಸ್ವಾಮಿ ಕುರಿತ ವಿವರಗಳು ಪುರಾಣಮೂಲ ಸಿದ್ಧಾಂತದಿಂದ ಆರಂಭವಾಗುತ್ತದೆ ಎಂದು ಜಾನಪದ ವಿದ್ವಾಂಸ ಡಾ. ಎಂ. ಬೈರೇಗೌಡ ಹೇಳಿದರು.ನಗರದ ಕಂದಾಯ ಭವನದಲ್ಲಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಗ್ನಿಬನ್ನಿರಾಯಸ್ವಾಮಿ ದಿನಾಚರಣೆಯ ಅಂಗವಾಗಿ ಅವರು ಉಪನ್ಯಾಸ ನೀಡಿದರು.
ಅಗ್ನಿಬನ್ನಿರಾಯ ಅಗ್ನಿಯಿಂದ ಅನುಭವಿಸಿದ್ದು, ಬಹುಭಾಹು, ಬಹುಕಣ್ಣುಗಳನ್ನು ಹೊಂದಿರುವ, ಶಂಖ ಚಕ್ರಾದಿಗಳನ್ನು ಹಿಡಿದಿರುವ ಸಣ್ಣ ಹಾಗೂ ದೊಡ್ಡ ಎಲ್ಲ ಲೋಕಗಳಿಗೂ ಒಡೆಯನೆನಿಸಿದ ಶ್ರೀಮನ್ನಾರಾಯಣನಿಗೆ ಅತಿಪ್ರಿಯನಾದವನೆಂಬ ಉಲ್ಲೇಖಗಳನ್ನು ಗಮನಿಸಬಹುದು. ಆದರೆ ತಾವು ಅಗ್ನಿಯಿಂದಲೇ ಹುಟ್ಟಿದ ಅಗ್ನಿಬನ್ನಿರಾಯನ ವಂಶಸ್ಥರೆಂದು ಹೇಳಿಕೊಳ್ಳುತ್ತಾರೆ. ಕಾಂಜಿವರ ಶಾಸನದ ನಕಲು ಎಂದು ಹೇಳಲಾದ ಒಂದು ಹಸ್ತಪ್ರತಿ ಇಟ್ಟುಕೊಂಡು, ಅದರಲ್ಲಿನ ‘ಇದು ಕಾಂಜೀವರನ ಆರಾಧ್ಯದೈವ ವರದರಾಜರ ಪ್ರೇರಣೆಯಿಂದ ಅಶ್ವತ್ಥನಾರಾಯಣಸ್ವಾಮಿ ಪ್ರಕಟಿಸಿರುವ ಕಾಂಚಿ ಶಾಸನವಾಗಿದೆ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆಂದು ವಿವರಿಸಿದರು.ಅಗ್ನಿಬನ್ನಿರಾಯ ತಿಗಳ ಜನಾಂಗದ ಆರಾಧ್ಯದೈವ. ವಾಸ್ತವವಾಗಿ ತಿಗಳ ಸಮುದಾಯವು ಕೃಷಿ ಮೂಲದ ರೈತಾಪಿ ವರ್ಗಕ್ಕೆ ಸೇರಿದವರು. ಕೆಳಜಾತಿಗಳ ಯಾವುದೇ ತಮಿಳು ಶೂದ್ರ ಸಮುದಾಯವನ್ನು ತಿಗಳರು ಎಂದು ಕನ್ನಡಿಗರು ಸಂಬೋಧಿಸುತ್ತಾರೆ. ತಮಿಳು ಭಾಷೆಗೆ ತಿಗಳು ಭಾಷೆ ಎಂಬ ಉಲ್ಲೇಖವಿದೆ. ಕನ್ನಡಿಗ ಮಾಧ್ವ, ತಮಿಳಿನ ಸ್ಮರ್ಥ ಬ್ರಾಹ್ಮಣರನ್ನೂ ಸಹ ತಿಗಳರು ಎಂದು ಕರೆಯುತ್ತಾರೆ ಎಂದು ಹೇಳಿದರು.
ಮೈಸೂರು ಭಾಗದಲ್ಲಿ ನೆಲೆಸಿರುವ ತಿಗಳ ಸಮುದಾಯವು ತಮ್ಮ ಮೂಲದ ಭಾಷೆ ತಮಿಳನ್ನು ಮರೆತು ಕನ್ನಡದಲ್ಲಿಯೇ ಮಾತಾಡುವುದನ್ನು ಗಮನಿಸಬಹುದು. ಲಕ್ಕಮ್ಮನ ಬುಡದ ತೋಟದೇವರು, ದೊಡ್ಡದೇವರು, ದೊಡ್ಡನರಸಯ್ಯ, ದೊಡ್ಡನಂಜಪ್ಪ, ಎಲ್ಲಮ್ಮನ ಬುಡದ ನರಸಯ್ಯ, ಮುದ್ದಣ್ಣ, ಸಿದ್ದೇದೇವರು ಹೀಗೆ ತಿಗಳ ಸಮುದಾಯದಲ್ಲಿ ಹಲವು ಉಪವಿಭಾಗಗಳನ್ನು ಕಾಣಬಹುದು. ಮೈಸೂರು ಅರಸರ ಆಡಳಿತ ಕೊನೆಗೊಂಡು, ಹೈದರಾಲಿ ಆಡಳಿತಕ್ಕೆ ಬಂದಾಗ ತಮಿಳುನಾಡಿನ ಭಾಗದಿಂದ ಕೃಷಿಕರನ್ನು ಕರೆತಂದು ಅರವತ್ತು ಎಕರೆ ಪ್ರದೇಶದಲ್ಲಿ ಸುಂದರ ತೋಟವೊಂದನ್ನು ನಿರ್ಮಾಣ ಮಾಡಿಸಿದ ಬಗ್ಗೆ ದಾಖಲೆಗಳಿದ್ದು, ಆ ತೋಟವೆ ಇಂದಿನ ಲಾಲ್ ಬಾಗ್ ಸಸ್ಯಕಾಶಿ ಎಂದು ತಿಳಿಸಿದರು.ಬೆಂಗಳೂರಿನ ಜಗದ್ವಿಖ್ಯಾತ ಕರಗ ಮಹೋತ್ಸವದ ಅಧ್ಯಾಯ ತಿಗಳ ಸಮುದಾಯದವರೇ ಆಗಿದ್ದು, ದ್ರೌಪದಿ ಆದಿಶಕ್ತಿಯ ಸ್ವರೂಪ, ಪಾಂಡವರ ರಕ್ಷಣೆ ಅವರ ಹೊಣೆ. ಈ ಹಿನ್ನೆಲೆಯಲ್ಲಿ ಸುಧೀರ್ಘ ಕತೆಯೊಂದು ಪ್ರಚಲಿತವಿದೆ. ಜನಾಂಗೀಯ ಅಧ್ಯಯನವೆನ್ನುವುದೇ ಒಂದು ವಿಭಿನ್ನ ಲೋಕ. ಅಂತಹ ಲೋಕವನ್ನು ಪ್ರವೇಶಿಸಿದಾಗ ಇರುವ, ಇಲ್ಲದ, ಕಲ್ಪಿತ ವಿವರಗಳು ಪುಂಖಾನುಪುಂಖವಾಗಿ ತೆರೆದುಕೊಳ್ಳುತ್ತವೆ. ಹೀಗೆ ಇತಿಹಾಸ, ಪುರಾಣ, ಕುಲಸಂಬಂಧಿ ಹಲವು ವಿಚಾರಗಳನ್ನು ಬೈರೇಗೌಡ ತೆರೆದಿಟ್ಟರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕೆ. ಸತೀಶ್ ಮಾತನಾಡಿ, ಸಮುದಾಯಕ್ಕೆ ಸರ್ಕಾರ ನೀಡುವ ಸವಲತ್ತುಗಳನ್ನು ಬಳಸಿಕೊಂಡು ಆ ಮೂಲಕ ಸಮಗ್ರ ಅಭಿವೃದ್ಧಿಯ ಕಡೆಗೆ ಮುನ್ನಡೆಯಬೇಕೆಂದು ಕರೆ ನೀಡಿದರು.ಸಮುದಾಯದ ರಾಜ್ಯ ಗೌರವಾಧ್ಯಕ್ಷ ತಿಮ್ಮರಾಯಿಗೌಡ, ಮಾಗಡಿ ಪುರಸಭೆ ಮಾಜಿ ಅಧ್ಯಕ್ಷ ಗಂಗರೇವಣ್ಣ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಕೃಷ್ಣಪ್ಪ, ಸಮುದಾಯದ ಮುಖಂಡರಾದ ಗುರುವೇಗೌಡ, ದೊಡ್ಡಮೊಗಣ್ಣ, ಈಶ್ವರ್, ಕುಮಾರ್, ಲೋಕೇಶ್, ನಾಗರಾಜ್, ಶಿವಣ್ಣ ಮತ್ತಿತರರು ಉಪಸ್ಥಿತರಿದ್ದರು.