ಇತರೆ ನಿಗಮ ಮಂಡಳಿಗಳ ಬ್ಯಾಂಕ್ ಖಾತೆಗಳ ವಿವರ ಬಹಿರಂಗಪಡಿಸಲಿ: ಆರ್.ರಘು ಆಗ್ರಹ

| Published : Jun 02 2024, 01:46 AM IST / Updated: Jun 02 2024, 01:09 PM IST

Indian Money
ಇತರೆ ನಿಗಮ ಮಂಡಳಿಗಳ ಬ್ಯಾಂಕ್ ಖಾತೆಗಳ ವಿವರ ಬಹಿರಂಗಪಡಿಸಲಿ: ಆರ್.ರಘು ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಇತರ ನಿಗಮ ಮಂಡಳಿಗಳ ಬ್ಯಾಂಕ್ ಖಾತೆಗಳ ವಿವರಗಳನ್ನು ರಾಜ್ಯ ಸರ್ಕಾರ ಬಹಿರಂಗಪಡಿಸಬೇಕು ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯಾಧ್ಯಕ್ಷ ಆರ್.ರಘು ಆಗ್ರಹಿಸಿದ್ದಾರೆ.

 ಮೈಸೂರು :  ಇತರ ನಿಗಮ ಮಂಡಳಿಗಳ ಬ್ಯಾಂಕ್ ಖಾತೆಗಳ ವಿವರಗಳನ್ನು ರಾಜ್ಯ ಸರ್ಕಾರ ಬಹಿರಂಗಪಡಿಸಬೇಕು ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯಾಧ್ಯಕ್ಷ ಆರ್.ರಘು ಆಗ್ರಹಿಸಿದ್ದಾರೆ.

ರಾಜ್ಯದಲ್ಲಿ ಒಂದು ವರ್ಷದಿಂದ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ಮತ ಬ್ಯಾಂಕ್ ಆಧಾರಿತ ಯೋಜನೆಗಳನ್ನು ಜಾರಿಗೊಳಿಸಲು ತನ್ನ ಬೊಕ್ಕಸ ಬರಿದು ಮಾಡಿಕೊಂಡಿದ್ದು, ಅಭಿವೃದ್ಧಿ ಕಾರ್ಯಗಳನ್ನು ಮೂಲೆಗೆ ಸರಿಸಿದೆ. ಜೊತೆಗೆ ಕಾಂಗ್ರೆಸ್ ಪಕ್ಷದ ಪರವಾಗಿ ಚುನಾವಣೆ ಎದರಿಸಲು ಅಕ್ರಮ ಮಾರ್ಗದಲ್ಲಿ ಸರ್ಕಾರಿ ನಿಗಮಗಳ ಹಣ ದುರುಪಯೋಗ ಪಡಿಸಿಕೊಂಡಿರುವ ಪ್ರಕರಣವೂ ವಾಲ್ಮೀಕಿ ನಿಗಮದ ಮೂಲಕ ಬೆಳಕಿಗೆ ಬಂದಿದೆ ಎಂದು ಹೇಳಿದ್ದಾರೆ.

ಸದ್ಯ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹೆಸರಿನಲ್ಲಿದ್ದ ಖಾತೆಯಿಂದ 187 ಕೋಟಿ ದುರುಪಯೋಗ ಆಗಿರುವ ಬಹುದೊಡ್ಡ ಹಗರಣದ ಹಿನ್ನೆಲೆಯಲ್ಲಿ ಸರ್ಕಾರದ ಇತರ ಅಭಿವೃದ್ಧಿ ನಿಗಮಗಳು ಹಾಗೂ ಮಂಡಳಿಗಳ ಆರ್ಥಿಕ ಸ್ಥಿತಿಗತಿಯ ಬಗ್ಗೆ ಹಾಗೂ ನಿಗಮ ಮಂಡಳಿಗಳು ಹೊಂದಿರುವ ಖಾತೆಗಳು ಹಾಗೂ ಅವುಗಳ ವಿವರವನ್ನು ಸಾರ್ವಜನಿಕರು ಪಾರದರ್ಶಕವಾಗಿ ತಿಳಿಯುವಂತಾಗಲು ಈ ಕೂಡಲೇ ಸರ್ಕಾರ ಶ್ವೇತ ಪತ್ರ ಹೊರಡಿಸಲಿ ಎಂದು ಒತ್ತಾಯಿಸಿದ್ದಾರೆ.

ಡಾ.ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮ, ಡಿ. ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಸೇರಿದಂತೆ ಇತರ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಗಳು ಹಾಗೂ ಸರ್ಕಾರದ ಅನುದಾನ ಪಡೆಯುವ ಇತರ ಮಂಡಳಿಗಳು ಹಾಗೂ ಪ್ರಾಧಿಕಾರಗಳ ಖಾತೆಗಳಲ್ಲಿ ಇರುವ ಹಣದ ವಿವರ ಬಯಲಾಗಬೇಕಿದೆ ಎಂದು ತಿಳಿಸಿದ್ದಾರೆ.

ಈ ನಿಟ್ಟಿನಲ್ಲಿ ಆರ್ಥಿಕ ಇಲಾಖೆ ಈ ಕೂಡಲೇ ಎಲ್ಲಾ ನಿಗಮಗಳ ಹಾಗೂ ಅನುದಾನ ಪಡೆಯುವ ಮಂಡಳಿಗಳ ಅರ್ಥಿಕ ವಿವರಗಳ ಸ್ಥಿತಿ ಗತಿಗಳ ಬಗ್ಗೆ ಶ್ವೇತಪತ್ರ ಹೊರಡಿಸುವ ಮೂಲಕ ರಾಜ್ಯದ ಆರ್ಥಿಕ ಸ್ಥಿತಿಯ ನಿರ್ವಹಣೆಯ ಶಿಸ್ತಿನ ಕುರಿತು ಪಾರದರ್ಶಕ ಮಾಹಿತಿ ಒದಗಿಸುವುದು ಸರ್ಕಾರದ ಕರ್ತವ್ಯವಾಗಿದೆ ಎಂದಿದ್ದಾರೆ.

ಆರ್ಥಿಕ ಇಲಾಖೆಯ ಕಣ್ಣು ತಪ್ಪಿಸಿ ವಾಲ್ಮೀಕಿ ನಿಗಮದ ಹಣ ದುರುಪಯೋಗವಾಗಲು ಕಾರಣವಾಗಿದೆ. ಈ ನಿಟ್ಟಿನಲ್ಲಿ ಅತೀ ತುರ್ತಾಗಿ ಸರ್ಕಾರ ನಿಗಮ ಮಂಡಳಿಗಳ ಬ್ಯಾಂಕ್ ಖಾತೆಗಳ ವಿವರ ಪ್ರಕಟಿಸಿದರೆ, ವಾಲ್ಮೀಕಿ ನಿಗಮದ ಹಗರಣದಂತೆ ಇನ್ನಷ್ಟು ಹಗರಣಗಳು ಹೊರಬರುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.