ಸಾರಾಂಶ
ಪ್ರವೀಣ ಹೆಗಡೆ ಕರ್ಜಗಿ
ಶಿರಸಿ: ಮಳೆಗಾಲದಲ್ಲಿ ಹದಗೆಟ್ಟ ಬಹುತೇಕ ರಸ್ತೆಗಳ ದುರಸ್ತಿಗಷ್ಟೇ ಸರ್ಕಾರ ಅನುದಾನ ನೀಡುವಲ್ಲಿ ಲಕ್ಷ್ಯ ಹರಿಸಿದೆ. ಹೀಗಾಗಿ ಮರುಡಾಂಬರೀಕರಣಕ್ಕೆ ಅನುದಾನವಿಲ್ಲದೇ ಸುಗಮ ಸಂಚಾರ ದುಸ್ತರದ ಪರಿಸ್ಥಿತಿ ಎದುರಿಸಬೇಕಾಗಿದೆ.ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆಗಳು ಹೊಂಡಗಳಿಂದ ತುಂಬಿ ಮಾರ್ಗದ ಇಕ್ಕೆಲಗಳಲ್ಲಿ ಬೆಳೆದ ಗಿಡಗಂಟಿಗಳನ್ನು ತೆರವುಗೊಳಿಸಲು ಇಲಾಖೆಯ ಶಿರಸಿ ವಿಭಾಗಕ್ಕೆ ಸುಮಾರು ₹೪ ಕೋಟಿ ಅನುದಾನ ಮಂಜೂರಿಯಾಗಿತ್ತು. ಟೆಂಡರ್ ಕರೆದು ಪ್ಯಾಚ್‌ವರ್ಕ್ ಕಾಮಗಾರಿಗಳನ್ನು ಗುತ್ತಿಗೆದಾರರು ಆರಂಭಿಸಿದ್ದಾರೆ. ಆದರೆ ದೊಡ್ಡ ಹೊಂಡಗಳನ್ನು ತುಂಬಿ ಚಿಕ್ಕಪುಟ್ಟ ಹೊಂಡಗಳನ್ನು ಹಾಗೆಯೇ ಬಿಡುತ್ತಿದ್ದಾರೆ.
ಬಹುತೇಕ ರಸ್ತೆಗಳಿಗೆ ತೇಪೆ ಹಚ್ಚುವ ಕಾರ್ಯ ಮುಕ್ತಾಯದ ಹಂತ ತಲುಪಿದೆ. ಕೆಲವೊಂದು ರಸ್ತೆಗಳಲ್ಲಿ ಕಾಮಗಾರಿ ನಡೆಯುತ್ತಿದ್ದು, ಈ ಕುರಿತು ಇಲಾಖೆಯ ಎಂಜಿನಿಯರ್ ಗಮನವಹಿಸಿ, ಸಣ್ಣ ಹೊಂಡ ತುಂಬಿ ಅನುಕೂಲ ಕಲ್ಪಿಸಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.ರಾಜ್ಯ ಹೆದ್ದಾರಿ ಪ್ರತಿ ಕಿಮೀಗೆ ಸುಮಾರು ₹೮೦ ಸಾವಿರ ಹಾಗೂ ಎಂಡಿಆರ್ ರಸ್ತೆಗೆ ₹೬೦ ಸಾವಿರದಂತೆ ಅನುದಾನ ಬಿಡುಗಡೆಯಾಗಿದ್ದು, ಪ್ರಸಕ್ತ ವರ್ಷದಲ್ಲಿ ಸುರಿದ ಭಾರಿ ಮಳೆಯಿಂದ ಬಹುತೇಕ ರಸ್ತೆಗಳು ಹದಗೆಟ್ಟಿದ್ದು, ಬಹುತೇಕ ರಸ್ತೆಗಳು ಮರುಡಾಂಬರೀಕರಣವನ್ನೇ ಹೊಂದಬೇಕಾದ ಸ್ಥಿತಿಯಲ್ಲಿವೆ. ಅದಕ್ಕೆ ಪ್ಯಾಚ್‌ವರ್ಕ್ ಮಾಡಿದರೂ ಪ್ರಯೋಜನವಿಲ್ಲ. ಪ್ಯಾಚ್‌ವರ್ಕ್‌ಗೆ ಮೀಸಲಿಟ್ಟ ಹಣದಲ್ಲಿ ಸಂಪೂರ್ಣ ಹೊಂಡ ತುಂಬಿದರೆ ನಷ್ಟ ಅನುಭವಿಸಬೇಕಾಗುತ್ತದೆ. ಈ ಕಾರಣದಿಂದ ದೊಡ್ಡ ಹೊಂಡಗಳಿಗೆ ಮಾತ್ರ ಡಾಂಬರ್ ಹಾಕಿ ಸರಿಪಡಿಸಲಾಗುತ್ತಿದೆ.ಹೊಸ ಗ್ಯಾಂಗ್‌ಮನ್ ನೇಮಕವಿಲ್ಲ: ಲೋಕೋಪಯೋಗಿ ಇಲಾಖೆಯ ಪ್ರತಿ ರಸ್ತೆಯ ನಿರ್ವಹಣೆಗೆ ಗ್ಯಾಂಗ್‌ಮನ್‌ಗಳಿದ್ದರು. ಈಗ ಎಲ್ಲ ಗ್ಯಾಂಗ್‌ಮನ್‌ಗಳು ನಿವೃತ್ತಿಯಾಗಿದ್ದಾರೆ. ಹೊಸ ಗ್ಯಾಂಗ್‌ಮನ್‌ಗಳ ನೇಮಕಾತಿ ಪ್ರಕ್ರಿಯೆ ನಡೆದಿಲ್ಲ. ಈ ಕಾರಣಕ್ಕೆ ಪ್ಯಾಚ್‌ವರ್ಕ್‌ಗೆ ಮಂಜೂರಿಯಾದ ಹಣದಲ್ಲಿಯೇ ಗ್ಯಾಂಗ್‌ಮನ್‌ಗಳಿಗೆ ವೇತನ ನೀಡಲು ₹೨.೮೦ ಲಕ್ಷ ಹಣ ತೆಗೆದಿಡಲಾಗಿದೆ. ಈ ಕಾರಣದಿಂದ ನಿರ್ವಹಣೆಗೆ ಅನುದಾನ ಕೊರತೆಯಾಗುವುದು ಸಹಜ. ಇಲಾಖೆಯ ಅಂದಾಜು ಪ್ರತಿಯಂತೆ ಕೆಲಸ ನಿರ್ವಹಿಸುವುದು ನಮಗೆ ಅನಿವಾರ್ಯ ಎನ್ನುತ್ತಾರೆ ಗುತ್ತಿಗೆದಾರರು.ಹಳೆ ಬಾಕಿ: ಲೋಕೋಪಯೋಗಿ ಇಲಾಖೆ ವಿಭಾಗವು ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ, ಹಳಿಯಾಳ, ಜೋಯಿಡಾ ವ್ಯಾಪ್ತಿಯನ್ನು ಹೊಂದಿದೆ. ವಿವಿಧ ಯೋಜನೆಯಡಿ ನಿರ್ವಹಿಸಿದ ಹಳೆಯ ಕಾಮಗಾರಿಯ ಬಿಲ್ ಸುಮಾರು ₹೧೬೦ ಕೋಟಿ ಬಾಕಿ ಇದೆ. ಈಗ ಹೊಸ ಕೆಲಸವೂ ಇಲ್ಲದೇ ಗುತ್ತಿಗೆದಾರರು ತಮ್ಮ ಬಳಿಯಲ್ಲಿರುವ ಯಂತ್ರೋಪಕರಣಗಳನ್ನು ಮಾರಾಟ ಮಾಡಿದ್ದಾರೆ. ಸದ್ಯದ ಪರಿಸ್ಥಿತಿ ಗಮನಿಸಿದರೆ ಹೊಸ ಕಾಮಗಾರಿಯೂ ಮಂಜೂರಿಯಾಗುವ ಭರವಸೆ ಇಲ್ಲ. ಈಗಾಗಲೇ ಹಳೆಯ ಹಣ ಬಿಡುಗಡೆಯೂ ಬಾಕಿ ಉಳಿದಿದ್ದು, ಹಳೆ ಬಾಕಿ ಜತೆ ನಿರ್ವಹಣೆ ಕಾಮಗಾರಿಯ ಹಣ ಬಾಕಿ ಉಳಿಯುವ ಆತಂಕ ಗುತ್ತಿಗೆದಾರರದ್ದಾಗಿದೆ.ಬಿಡುಗಡೆಯಾಗದ ಅನುದಾನ: ತಾಲೂಕಿನಲ್ಲಿ ಮುಖ್ಯ ರಸ್ತೆಯ ಲೋಕೋಪಯೋಗಿ ಇಲಾಖೆಯ ಅಧೀನದಲ್ಲಿದ್ದರೆ ಒಳರಸ್ತೆಗಳೆಲ್ಲವೂ ಜಿಪಂ ಎಂಜಿನಿಯರಿಂಗ್ ವಿಭಾಗದ ಅಧೀನದಲ್ಲಿದೆ. ಲೋಕೋಪಯೋಗಿ ಇಲಾಖೆಯ ರಸ್ತೆಗೆ ನಿರ್ವಹಣೆಗಾದರೂ ಅನುದಾನ ಮಂಜೂರಿಯಾಗಿದೆ. ಜಿಪಂ ರಸ್ತೆ ನಿರ್ವಹಣೆಗೆ ನಯಾಪೈಸೆ ಅನುದಾನ ದೊರೆತಿಲ್ಲ. ಬಹುತೇಕ ರಸ್ತೆಗಳು ಹಾಳಾಗಿದ್ದು, ಈ ರಸ್ತೆಗೂ ಅನುದಾನ ಮಂಜೂರು ಮಾಡಿಸಲು ಜನಪ್ರತಿನಿಧಿಗಳು ವಿಶೇಷ ಆಸಕ್ತಿ ವಹಿಸಬೇಕಿದೆ.ಶೇ. 30ರಷ್ಟು ಹದಗೆಟ್ಟಿರುವ ರಸ್ತೆಗಳು
೧ ಕಿಮೀ ರಸ್ತೆಯು ಶೇ. ೨ರಿಂದ ೫ರಷ್ಟು ಹಾಳಾಗಿದೆ ಎಂದು ಅಂದಾಜಿಸಿ, ಕಾಮಗಾರಿಗೆ ಟೆಂಡರ್ ಕರೆಯಲಾಗಿದ್ದು, ಆದರೆ ವಾಸ್ತವದಲ್ಲಿ ಕೆಲವು ಕಡೆ ಶೇ. ೨೫ರಿಂದ ಶೇ. ೩೦ರಷ್ಟು ಹಾಳಾಗಿದೆ. ಈ ರಸ್ತೆಗೆ ತೇಪೆ ಹಚ್ಚಿದರೆ ಏನೂ ಪ್ರಯೋಜನವಿಲ್ಲ. ಮರುಡಾಂಬರೀಕರಣವಾದರೆ ಮಾತ್ರ ರಸ್ತೆಯಲ್ಲಿ ಸಂಚಾರ ಮಾಡಲು ಸಾಧ್ಯವಿದೆ. ವಾಸ್ತವಾಂಶದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದರೆ ಇನ್ನೂ ಹೆಚ್ಚಿನ ಅನುದಾನ ಬಿಡುಗಡೆಯಾಗುತ್ತಿತ್ತು ಎಂಬುದು ಹಲವರ ಅಭಿಪ್ರಾಯವಾಗಿದೆ.ದೂರವಾಣಿ ಕರೆ ಸ್ವೀಕರಿಸಲು ಎಂಜಿನಿಯರ್ ಹಿಂದೇಟುಸಣ್ಣ ಹೊಂಡಗಳನ್ನು ತುಂಬಿ ರಸ್ತೆ ಸರಿಪಡಿಸಲು ಸಾರ್ವಜನಿಕರು ಶಿರಸಿ ಪಿಡಬ್ಲ್ಯುಡಿ ಸಹಾಯಕ ಎಂಜಿನಿಯರ್‌ರನ್ನು ಸಂಪರ್ಕಿಸಲು ದೂರವಾಣಿ ಕರೆ ಮಾಡಿದರೆ ಸ್ವೀಕರಿಸುವುದಿಲ್ಲ. ಕೆಳಹಂತದ ಎಂಜಿನಿಯರ್ ಬಳಿ ದೂರು ನೀಡಿದರೆ ಮೇಲಧಿಕಾರಿಗಳಿಗೆ ದೂರು ನೀಡಿ ಎಂದು ನುಣುಚಿಕೊಳ್ಳುತ್ತಾರೆ. ಜವಾಬ್ದಾರಿಯುತ ತಾಲೂಕು ಮಟ್ಟದ ಅಧಿಕಾರಿಗಳು ಜನರ ಅಹವಾಲು ಕೇಳುವಷ್ಟು ಪುರುಸೊತ್ತು ಇಲ್ಲವೇ? ತೇಪೆ ಹಚ್ಚುವ ಕಾರ್ಯ: ಜನರ ಟೀಕೆ ತಪ್ಪಿಸಿಕೊಳ್ಳಲು ಕಾಟಾಚಾರಕ್ಕೆ ಲೋಕೋಪಯೋಗಿ ಇಲಾಖೆಯು ರಸ್ತೆಗೆ ತೇಪೆ ಹಚ್ಚುವ ಕಾರ್ಯ ನಡೆಯುತ್ತಿದೆ. ಹಣ ವ್ಯಯವಾಗುತ್ತದೆಯೇ ಹೊರತು ಜನರಿಗೆ ಅನುಕೂಲವಾಗುವುದಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಪರಮಾನಂದ ಹೆಗಡೆ ತಿಳಿಸಿದರು.