ಸಾರಾಂಶ
ಗೋಕರ್ಣ:ಶತಮಾನಗಳಿಂದ ನಿರ್ಜಲವಾಗಿದ್ದ ಅಶೋಕೆಯ ಪುಣ್ಯ ಪರಿಸರದಲ್ಲಿ ಮತ್ತೆ ಜೀವಚೈತನ್ಯ ಪ್ರವಾಹವಾಗಿ ಹರಿದಿರುವುದು ಶಂಕರಾಚಾರ್ಯರು ಸ್ಥಾಪಿಸಿದ ಮೂಲಮಠದ ಪುನರುತ್ಥಾನದ ಪರ್ವ ಕಾಲ ಎಂದು ರಾಘವೇಶ್ವರ ಭಾರತೀ ಶ್ರೀಗಳು ಹೇಳಿದರು.
ಆದಿಗುರು ಶಂಕರರು ಮೂಲಮಠ ಸ್ಥಾಪಿಸಿದ ಅಶೋಕೆಯ ಪರಿಸರದಲ್ಲಿ ಶ್ರೀರಾಮಚಂದ್ರಾಪುರ ಮಠದ ಶಿಷ್ಯರು ಹಮ್ಮಿಕೊಂಡಿದ್ದ ಖ್ಯಾಪನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಅಶೋಕೆಯ ಪುಣ್ಯಭೂಮಿಗೆ ಇಂದು ಜನಸ್ತೋಮ ಹರಿದು ಬಂದಿದೆ. ಜೀವಚೈನತ್ಯ ಮೈವೆತ್ತಿದ ಪುಣ್ಯಪರ್ವ. ಆದಿ ಗುರು ಶಂಕರರೆಂಬ ಮಹಾಚೈತನ್ಯವನ್ನು ಮೂರು ಬಾರಿ ಆಕರ್ಷಿಸಿದ ಈ ಕ್ಷೇತ್ರ ಕಳೆದುಕೊಂಡಿದ್ದನ್ನು ಮರಳಿ ಪಡೆಯುವ ತಪೋಭೂಮಿ.
ಹೀಗೆ ಇಡೀ ಗೋಕರ್ಣ ಮಂಡಲಕ್ಕೆ ರಾಜಧಾನಿಯಾಗಿ ಸಮಸ್ತ ಸಮಾಜಕ್ಕೆ ಧರ್ಮನಿರ್ದೇಶ ನೀಡುತ್ತಾ ವೈಭವದಿಂದ ಮೆರೆಯುತ್ತಿದ್ದ ಆದ್ಯ ರಘೂತ್ತಮ ಮಠ (ಈಗಿನ ರಾಮಚಂದ್ರಾಪುರ ಮಠ) ಇದೀಗ ಗತವೈಭವವನ್ನು ಮರಳಿ ಪಡೆಯುವ ಕಾಲ ಸನ್ನಿಹಿತವಾಗಿದೆ ಎಂದು ಬಣ್ಣಿಸಿದರು.
ಸುಮತಿಯಿಂದ ಸೋತ ಅಶೋಕನೆಂಬ ರಾಜ ಪ್ರಕ್ಷದ್ವೀಪದಿಂದ ಇಲ್ಲಿಗೆ ಬಂದು ಘೋರ ತಪಸ್ಸು ಮಾಡಿ, ಕಳೆದುಕೊಂಡಿದ್ದನ್ನು ಮರಳಿ ಪಡೆದು ಧರ್ಮರಾಜ್ಯ ಸ್ಥಾಪನೆ ಮಾಡಿದ ಬಗ್ಗೆ ಸ್ಕಂದ ಪುರಾಣದಲ್ಲಿ ಉಲ್ಲೇಖವಿದೆ.
ಹಿಂದೆ ವಿದ್ಯಾ ತಪಸ್ಸಿನ ಜ್ಞಾನ ಸಾಮ್ರಾಜ್ಯವಾಗಿ ಕಂಗೊಳಿಸಿದ್ದ ಅಶೋಕೆ ಕಾಲಗರ್ಭದಲ್ಲಿ ಸಿಲುಕಿ ಇಲ್ಲಿನ ಚೈತನ್ಯಕ್ಕೆ ಮಬ್ಬು ಕವಿದಿತ್ತು. ಆದರೆ ಇಡೀ ಸಮಾಜವೇ ಮತ್ತೊಮ್ಮೆ ಸೇರುವ ಮೂಲಕ ಚೈತನ್ಯ ಪುಟಿದೆದ್ದಿದೆ. ಇದು ಶ್ರೀಮಠದ ಪುನರುತ್ಥಾನದ ಪರ್ವಕಾಲ ಎಂದು ವಿವರಿಸಿದರು.
ಆದಿಗುರು ಶಂಕರರ ವಾಕ್ಯ ಪರಿಪಾಲನೆಗಾಗಿ ಬೋಳುಗುಡ್ಡವಾಗಿದ್ದ ಅಶೋಕೆಗೆ ಆಗಮಿಸಿ ಮೂಲಮಠದ ಪುನರುತ್ಥಾನದ ಸಂಕಲ್ಪ ಮಾಡಿದ್ದೇವೆ. ಮೂಲಮಠ ಸ್ಥಾಪನೆ ಸಂದರ್ಭದಲ್ಲಿ ಶ್ರೀಶಂಕರರು ತಮ್ಮ ಜ್ಯೇಷ್ಠ ಶಿಷ್ಯರಿಗೆ ನೀಡಿದ್ದ ಅತ್ರತಿಷ್ಠ ಯತಿಶ್ರೇಷ್ಠ ಎಂಬ ಗುರುವಾಕ್ಯ ಪರಿಪಾಲನೆಯಷ್ಟೇ ಈ ಸಂಕಲ್ಪಕ್ಕೆ ಮೂಲ ಎಂದರು.
ಆದಿಗುರುವಿನ ವಾಕ್ಯ ಪರಿಪಾಲನೆ ಸಾಧ್ಯವಾಗದ ಬೇಸರ, ನೋವಿನಿಂದ ಅಶೋಕೆಯನ್ನು ನಮ್ಮ ಪೂರ್ವಾಚಾರ್ಯರು ತೊರೆಯಬೇಕಾದ ಸಂದರ್ಭ ಬಂದದ್ದು ನಮ್ಮ ಇಡೀ ಸಮಾಜದ ಅಧಃಪತನಕ್ಕೆ ಕಾರಣವಾಯಿತು.
ಮೂಲಮಠವಷ್ಟೇ ಅಲ್ಲದೇ ಇಲ್ಲಿದ್ದ ಅಗ್ರಹಾರ ಕೂಡಾ ನಾಶವಾಯಿತು. ಇದಕ್ಕೆ ಗುರುಗಳ ನೋವು ಕಾರಣ. ಮಲ್ಲಿಕಾರ್ಜುನನ ಉಪೇಕ್ಷೆ ಕಾರಣ. ಇಂಥ ತಪ್ಪುಗಳಿಗೆ ಖ್ಯಾಪನೆಯ ಮೂಲಕ ಪೂರ್ವಾಚಾರ್ಯರ ಕ್ಷಮೆಯಾಚಿಸುವ ಮೂಲಕ ಪುನರುತ್ಥಾನಕ್ಕೆ ಅವರ ಅನುಗ್ರಹ ಬೇಡೋಣ ಎಂದು ಸೂಚಿಸಿದರು.
ಹವ್ಯಕ ಮಹಾಮಂಡಲದ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ ಮಾತನಾಡಿ, ಗುರುಪರಂಪರೆಯ ನೋವಿನ ಪರಿಮಾರ್ಜನೆಗಾಗಿ ಇಡೀ ಸಮಾಜ ಖ್ಯಾಪನೆ ಮಾಡುತ್ತಿದೆ. ಭಕ್ತಿ-ಭಾವದಿಂದ, ನಿರ್ಮೋಹದಿಂದ ಪಶ್ಚಾತ್ತಾಪ ಪಡುತ್ತಿದ್ದೇವೆ. ಇಡೀ ಸಮಾಜ ಖ್ಯಾಪನೆಗಾಗಿ ಎದ್ದು ಬಂದಿದ್ದು, ಪರಿಮಾರ್ಜನೆಯಿಂದ ಪ್ರಸನ್ನರಾಗಬೇಕು ಎಂದು ಮನವಿ ಮಾಡಿಕೊಂಡರು.
ಧರ್ಮಕರ್ಮ ವಿಭಾಗದ ಶ್ರೀಸಂಯೋಜಕ ಕೂಟೇಲು ರಾಮಕೃಷ್ಣ ಭಟ್ಟ ಖ್ಯಾಪನೆ ಬೋಧಿಸಿದರು. ಅತಿರುದ್ರ ಮಹಾಸಮಿತಿ ಗೌರವಾಧ್ಯಕ್ಷ ದೇವಶ್ರವ ಶರ್ಮಾ, ಕಾರ್ಯಾಧ್ಯಕ್ಷ ಮಂಜುನಾಥ ಸುವರ್ಣಗದ್ದೆ, ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಕೋಶಾಧ್ಯಕ್ಷ ರಮಣ ಭಟ್ ಮುಂಬೈ, ಉಪಾಧ್ಯಕ್ಷರಾದ ಸಂತೋಷ ಹೆಗಡೆ, ಜಿ.ಎಲ್. ಗಣೇಶ, ಸುಬ್ರಾಯ ಅಗ್ನಿಹೋತ್ರಿ, ಆರ್.ಎಸ್. ಹೆಗಡೆ ಹರಗಿ, ಕಾರ್ಯದರ್ಶಿಗಳಾದ ಶ್ರೀಕಾಂತ ಪಂಡಿತ್, ಮುರೂರು ಸುಬ್ರಾಯ ಭಟ್, ಆರ್.ಜಿ. ಹೆಗಡೆ ಹೊಸಾಕುಳಿ, ಪರಮೇಶ್ವರ ಮಾರ್ಕಂಡೆ, ಪೆದಮಲೆ ನಾಗರಾಜ ಭಟ್, ಎಸ್.ಎಸ್. ಹೆಗಡೆ, ಜಿ.ಎಸ್. ಹೆಗಡೆ, ಅಶ್ವಿನಿ ಉಡುಚೆ, ಕಾರ್ಯಾಲಯ ಕಾರ್ಯದರ್ಶಿ ಜಿ.ವಿ. ಹೆಗಡೆ, ರಾಮಚಂದ್ರ ಅಜ್ಜಕಾನ, ವಿವಿವಿ ಆಡಳಿತಾಧಿಕಾರಿ ಡಾ. ಟಿ.ಜಿ. ಪ್ರಸನ್ನ ಕುಮಾರ್, ಲೋಕಸಂಪರ್ಕಾಧಿಕಾರಿಗಳಾದ ಜಿ.ಕೆ. ಹೆಗಡೆ, ಹರಿಪ್ರಸಾದ ಪೆರಿಯಾಪ್ಪು ಭಾಗವಹಿಸಿದ್ದರು.ವಿವಿಧ ವಿಭಾಗಗಳ ನಿರ್ದೇಶಕರಾದ ಶ್ರೀವತ್ಸ ಮುರಗೋಡು, ಪ್ರಮೋದ ಪಂಡಿತ್, ಹಾರಕೆರೆ ನಾರಾಯಣ ಭಟ್, ಶಾಂತಾರಾಮ ಹಿರೇಮನೆ, ಈಶ್ವರಿ ಬೇರ್ಕಡವು, ರಾಜಾರಾಮ ಭಟ್ ಮುರೂರು, ವೀಣಾ ಗೋಪಾಲಕೃಷ್ಣ, ಮೋಹನ ಭಟ್ ಹರಿಹರ, ಹೇರಂಬ ಶಾಸ್ತ್ರಿ, ಮಹಾಮಂಡಲ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು. ಶ್ರೀಮಲ್ಲಿಕಾರ್ಜುನ ಸ್ವಾಮಿಗೆ ಹಮ್ಮಿಕೊಂಡಿದ್ದ ಹನ್ನೊಂದು ದಿನಗಳ ಅತಿರುದ್ರ ಅಭಿಷೇಕ ಶ್ರೀಗಳ ಸುವರ್ಣ ಕಲಶಾಭಿಷೇಕ ಮಾಡುವ ಮೂಲಕ ಸಂಪನ್ನಗೊಂಡಿತು.