ಸಾರಾಂಶ
ವಯೋಮಿತಿ ಬೇಧವಿಲ್ಲದೆ ಪುನರ್ವಸತಿ ಕಲ್ಪಿತ ದೇವದಾಸಿಯರಿಗೆ ನೀಡುವ ಮಾಸಾಶನವನ್ನು ₹೫ ಸಾವಿರಕ್ಕೆ ಹೆಚ್ಚಿಸಬೇಕು.
ಕುರುಗೋಡು: ನ್ಯಾಯಯುತ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ದೇವದಾಸಿ ಮಹಿಳೆಯ ವಿಮೋಚನಾ ಸಂಘದ ತಾಲೂಕು ಘಟಕದಿಂದ ಪುನರ್ವಸತಿ ಕಲ್ಪಿತ ದೇವದಾಸಿಯರು ಮುಖ್ಯಮಂತ್ರಿಗೆ ಬರೆದ ಮನವಿಯನ್ನು ಇಲ್ಲಿನ ಗ್ರೇಡ್-೨ತಹಶೀಲ್ದಾರ್ ಮಲ್ಲೇಶಪ್ಪ ಅವರಿಗೆ ಸಲ್ಲಿಸಿದರು.ತಾಲೂಕು ಘಟಕದ ಅಧ್ಯಕ್ಷೆ ಎ.ಯಂಕಮ್ಮ ಮಾತನಾಡಿ, ರಾಜ್ಯ ಸರ್ಕಾರ ಎರಡು ಬಾರಿ ಗಣತಿ ಮಾಡಿದರೂ ರಾಜ್ಯವ್ಯಾಪಿ ೨೫ ಸಾವಿರಕ್ಕೂ ಅಧಿಕ ದೇವದಾಸಿಯರು ಹೊರಗುಳಿದು ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ೪೫ ವರ್ಷ ಮೇಲ್ಪಟ್ಟವರಿಗೆ ಮಾತ್ರ ಮಾಸಾಶನ ನೀಡಲಾಗುತ್ತಿದೆ. ಉಳಿದವರಿಗೆ ನೀಡುತ್ತಿಲ್ಲ. ಐದು ವರ್ಷಗಳಿಂದ ಮಾಸಾಶನ ₹೫ ಸಾವಿರಕ್ಕೆ ಹೆಚ್ಚಿಸುವಂತೆ ಒತ್ತಾಯ ಮಾಡುತಿದ್ದರೂ ಸರ್ಕಾರ ಕಿವಿಕೊಡುತ್ತಿಲ್ಲ ಎಂದು ಆರೋಪಿಸಿದರು.
ವಯೋಮಿತಿ ಬೇಧವಿಲ್ಲದೆ ಪುನರ್ವಸತಿ ಕಲ್ಪಿತ ದೇವದಾಸಿಯರಿಗೆ ನೀಡುವ ಮಾಸಾಶನವನ್ನು ₹೫ ಸಾವಿರಕ್ಕೆ ಹೆಚ್ಚಿಸಬೇಕು. ಎಲ್ಲ ಪುನರ್ವಸತಿ ಕಲ್ಪಿತ ದೇವದಾಸಿಯರಿಗೆ ೫ ಎಕರೆ ನೀರಾವರಿ ಭೂಮಿ ನೀಡಬೇಕು, ಕನಿಷ್ಟ ₹೫ ಲಕ್ಷದ ವರೆಗೆ ಬಡ್ಡಿ ರಹಿತ ಸಾಲ ನೀಡಬೇಕು. ಮಕ್ಕಳಿಗೆ ಉನ್ನತ ಶಿಕ್ಷಣದ ವರೆಗೆ ಸರ್ಕಾರ ಉಚಿತವಾಗಿ ನೀಡಬೇಕು. ದೇವದಾಸಿ ಮಕ್ಕಳು ಅಂತರ್ ಜಾತಿ ವಿವಾಹವಾದರೆ ಪ್ರೋತ್ಸಾಹ ಧನ ₹೫ಲಕ್ಷಕ್ಕೆ ಹೆಚ್ಚಿಸಬೇಕು. ನಿವೇಶನ ರಹಿತರಿಗೆ ಮೊದಲ ಆಧ್ಯತೆಯ ಮೇರೆಗೆ ನಿವೇಶನ ನೀಡಬೇಕು. ಫಲಾನುಭವಿಗಳ ಆಯ್ಕೆಗೆ ಪ್ರತಿವರ್ಷ ಅರ್ಜಿಗಳನ್ನು ಆಹ್ವಾನಿಸದೆ ಪಟ್ಟಿಯಲ್ಲಿರುವ ಫಲಾನುಭವಿಗಳನ್ನು ಆಯ್ಕೆಮಾಡಬೇಕು. ಪುನರ್ವಸತಿ ಯೋಜನೆಯ ಅಧಿಕಾರಿಗಳ ಭ್ರಷ್ಟಾಚಾರ ತಡೆಯಲು ಅವರನ್ನು ಬೇರೆಡೆಗೆ ವರ್ಗಾವಣೆಮಾಡಬೇಕು ಎನ್ನುವ ಬೇಡಿಕೆಯ ಮನವಿಯನ್ನು ಗ್ರೇಡ್೨ ತಹಶೀಲ್ದಾರ್ ಮಲ್ಲೇಶಪ್ಪ ಸ್ವೀಕರಿಸಿದರು.ಸಂಘದ ಕಾರ್ಯದರ್ಶಿ ವೀರೇಶ್, ಗಂಗಮ್ಮ, ದೊಡ್ಡಬಸಮ್ಮ, ನಾಗಮ್ಮ, ಹುಲಿಗೆಮ್ಮ ಮತ್ತು ಹನುಮಕ್ಕ ಇದ್ದರು.