ಸಾರಾಂಶ
ತಾಲೂಕಿನಾದ್ಯಂತ ನಾಡಹಬ್ಬದಸರಾ ಆಚರಣೆಯನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು.ಗಬ್ಬೂರಿನ ಶ್ರೀ ಲಕ್ಷ್ಮೀ ವೆಂಕಟೇಶ್ವರ, ಜಾಲಹಳ್ಳಿ ಶ್ರೀ ಲಕ್ಷ್ಮೀ ರಂಗನಾಥ, ಮಾನಸಗಲ್ ಶ್ರೀ ಲಕ್ಷ್ಮೀ ರಂಗನಾಥ, ಕೊಪ್ಪರ ಶ್ರೀ ಲಕ್ಷ್ಮೀ ನರಸಿಂಹ, ದೇವದುರ್ಗ ಪಟ್ಟಣದ ಶ್ರೀ ಅಂಬಾಭವಾನಿ, ಶಿಖರ ಮಠ, ಅರಕೇರಾ ಭಗಮ್ಮ ದೇವಸ್ಥಾನ ಸೇರಿದಂತೆ ಅನೇಕ ಗ್ರಾಮಗಳಲ್ಲಿ ನವರಾತ್ರಿ ಉತ್ಸವ ಆಚರಿಸಲಾಯಿತು.
ಕನ್ನಡಪ್ರಭ ವಾರ್ತೆ ದೇವದುರ್ಗ
ತಾಲೂಕಿನಾದ್ಯಂತ ನಾಡಹಬ್ಬದಸರಾ ಆಚರಣೆಯನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು.ಗಬ್ಬೂರಿನ ಶ್ರೀ ಲಕ್ಷ್ಮೀ ವೆಂಕಟೇಶ್ವರ, ಜಾಲಹಳ್ಳಿ ಶ್ರೀ ಲಕ್ಷ್ಮೀ ರಂಗನಾಥ, ಮಾನಸಗಲ್ ಶ್ರೀ ಲಕ್ಷ್ಮೀ ರಂಗನಾಥ, ಕೊಪ್ಪರ ಶ್ರೀ ಲಕ್ಷ್ಮೀ ನರಸಿಂಹ, ದೇವದುರ್ಗ ಪಟ್ಟಣದ ಶ್ರೀ ಅಂಬಾಭವಾನಿ, ಶಿಖರ ಮಠ, ಅರಕೇರಾ ಭಗಮ್ಮ ದೇವಸ್ಥಾನ ಸೇರಿದಂತೆ ಅನೇಕ ಗ್ರಾಮಗಳಲ್ಲಿ ನವರಾತ್ರಿ ಉತ್ಸವ ಆಚರಿಸಲಾಯಿತು.ದಸರಾ ನಿಮಿತ್ತ ಪುರಾಣ, ಪ್ರವಚನ, ಸಾಮೂಹಿಕ ಉಡಿ ತುಂಬುವ ಕಾರ್ಯಕ್ರಮ, ವಿಶೇಷ ಪೂಜೆ, ಅಭಿಷೇಕ, ಅನ್ನಸಂತರ್ಪಣೆ ಕಾರ್ಯಕ್ರಮಗಳು ಜರುಗಿದವು. ದೇವದುರ್ಗ ಪಟ್ಟಣದಲ್ಲಿ ಐತಿಹಾಸಿಕ ದೇವಸ್ಥಾನವಾಗಿರುವ ಶ್ರೀ ವೇಣುಗೋಪಾಲಸ್ವಾಮಿ ದೇವಾಲಯದಿಂದ ಪಲ್ಲಕ್ಕಿ ಮೆರವಣಿಗೆ ಮಾಡಿದ ನಂತರ ಬನ್ನಿಮಂಟಪದಲ್ಲಿ ಪೂಜಾ ವಿಧಿವಿಧಾನಗಳು ಜರುಗಿದವು. ಸ್ಥಳೀಯ ಪೊಲೀಸ್ ಠಾಣೆಯಿಂದ ಆಯುಧಗಳನ್ನು ಮೆರವಣಿಗೆ ಮೂಲಕ ಬನ್ನಿಮಂಟಪಕ್ಕೆ ತಂದು ಪೂಜೆ ಸಲ್ಲಿಸಲಾಯಿತು.ಬನ್ನಿಮಂಟಪದಲ್ಲಿ ಪೂಜೆ ಬಳಿಕ ಪರಸ್ಪರ ಬನ್ನಿ ವಿತರಿಸಿ ಶುಭಕೋರಲಾಯಿತು. ಪಟ್ಟಣದಲ್ಲಿ ಪ್ರತಿಯೊಬ್ಬರು ಪರಸ್ಪರ ಸಂಪರ್ಕಿಸಿ, ಮನೆ ಮನೆಗೆ ತೆರಳಿ ಬಂಗಾರ ರೂಪದ ಬನ್ನಿ ವಿತರಿಸಿ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.ಈ ಸಂದರ್ಭದಲ್ಲಿ ರಾಜಾ ವೆಂಕಟೇಶನಾಯಕ, ರಾಜಾ ಅರ್ಜುನ ನಾಯಕ, ರಾಜ ಜೋಷಿ ತಿರುಮಲಾಚಾರ್, ಕೃಷ್ಟಾಚಾರ್ ರಾಜ ಜೋಷಿ, ಶೆಟ್ಟಿ ಶಿವನಗೌಡ ಸೇರಿ ಪಟ್ಟಣದ ಅನೇಕ ಗಣ್ಯರು, ವರ್ತಕರು, ನಾಗರಿಕರು, ನೌಕರರು, ಪೊಲೀಸ್ ಇಲಾಖೆ ಸಿಬ್ಬಂದಿ ಪಾಲ್ಗೊಂಡಿದ್ದರು.