ಸಾರಾಂಶ
ಮಲ್ಲಿಕಾರ್ಜುನ ಪಟ್ಟಣಶೆಟ್ಟಿ
ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿರಾಜ್ಯದಲ್ಲಿ 2018 ರಿಂದ ಇದುವರೆಗೆ ಒಟ್ಟು 63 ಹೊಸ ತಾಲೂಕುಗಳನ್ನು ರಚಿಸಲಾಗಿದೆ. ಈ ಪೈಕಿ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ, ತಾಳಿಕೋಟಿ, ಚಡಚಣ, ಕೊಲ್ಹಾರ, ನಿಡಗುಂದಿ, ಬಬಲೇಶ್ವರ, ತಿಕೋಟಾ ಹಾಗೂ ಆಲಮೇಲ ತಾಲೂಕುಗಳಾಗಿವೆ. ಆದರೆ, ಹೊಸ ಹೋಬಳಿ ರಚನೆ ಆಗಿಯೇ ಇಲ್ಲ. ಇದರಿಂದಾಗಿ ಕಂದಾಯ ಸಹಿತ ಪ್ರತಿ ಸರ್ಕಾರಿ ಸೇವೆ, ಕೆಲಸಗಳಿಗೂ ದೂರದಲ್ಲಿರುವ ತಾಲೂಕು ಕಚೇರಿಗಳಿಗೇ ಎಡತಾಕಬೇಕಾದ ಸ್ಥಿತಿ ಇದೆ.
ದೇವರಹಿಪ್ಪರಗಿ ಕ್ಷೇತ್ರ ವ್ಯಾಪ್ತಿಯಲ್ಲಿ ತಾಳಿಕೋಟಿ, ನಿಡಗುಂದಿ ಹಾಗೂ ಸಿಂದಗಿ ತಾಲೂಕಿನ ಹಲವು ಗ್ರಾಮಗಳು ಸೇರಿ ದೇವರಹಿಪ್ಪರಗಿ ತಾಲೂಕಾಗಿದೆ. ಬಹು ವಿಸ್ತಾರವಾಗಿರುವ ಈ ಕ್ಷೇತ್ರದ ಒಂದು ತುದಿಯಿಂದ ಮತ್ತೊಂದು ತುದಿಗೆ ಸುಮಾರು 150 ಕಿಮೀ ಅಂತರವಿದೆ. ನೂತನ ತಾಲೂಕು ರಚನೆ ನಂತರ ಹಲವು ಕಚೇರಿಗಳು ದೇವರಹಿಪ್ಪರಗಿ ಪಟ್ಟಣಕ್ಕೆ ಬರಬೇಕಾಗಿದೆ. ಪಟ್ಟಣವು ಹೋಬಳಿಯಿಂದ ನೂತನ ತಾಲೂಕು ಆಗಿದೆ. ಆದರೆ, ಕಚೇರಿಗಳಿಲ್ಲದೇ ಜನಸಾಮಾನ್ಯರಿಗೆ ತೊಂದರೆ ಆಗುತ್ತಿದೆ. ಆದಷ್ಟು ಬೇಗ ರಾಜ್ಯ ಸರ್ಕಾರ ನೂತನ ತಾಲೂಕುಗಳಿಗೆ ಕಚೇರಿಗಳನ್ನು ಒದಗಿಸಿ ಹಾಗೂ ತಾಲೂಕಿನಲ್ಲಿ ಹೋಬಳಿಗಳನ್ನು ಸೃಷ್ಟಿಸಿ ಜನಸಾಮಾನ್ಯರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎನ್ನುವುದು ಸಾರ್ವಜನಿಕರ ಒತ್ತಾಯ. ಹೊಸ ತಾಲೂಕುಗಳನ್ನು ರಚಿಸಿರುವ ಸರ್ಕಾರಗಳು ಆಡಳಿತ ವ್ಯವಸ್ಥೆಯ ಬೆನ್ನೆಲುಬಾದ ಹೋಬಳಿಗಳನ್ನು ರಚಿಸದ ಪರಿಣಾಮ ವಿವಿಧ ಸೇವೆಗಳಿಗಾಗಿ ದೂರದ ಕಚೇರಿಗೆ ಅಲೆದಾಟಕ್ಕೆ ಮುಕ್ತಿ ಸಿಗುತ್ತಿಲ್ಲ ಎನ್ನುವುದು ಸಾರ್ವಜನಿಕರ ಆರೋಪ.ಹೋಬಳಿಯೇ ತಾಲೂಕಾದ ದೇವರಹಿಪ್ಪರಗಿ:
ಒಂದೊಂದು ಹೋಬಳಿಯನ್ನೇ ಹೊಸ ತಾಲೂಕು ಆಗಿ ಮಾಡಲಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಹಲವು ತಾಲೂಕು ಮಾಡಲಾಯಿತ್ತಾದರೂ ಇದುವರೆಗೆ ತಾಲೂಕಿನಲ್ಲಿ ಹೊಸ ಹೋಬಳಿ ಮಾಡಿಲ್ಲ. ಎಲ್ಲ ಹೊಸ ತಾಲೂಕುಗಳದ್ದೂ ಇದೇ ಕಥೆಯಾಗಿದೆ.ಹೋಬಳಿಗಾಗಿ ಹೆಚ್ಚಿದ ಒತ್ತಾಯ:
ಹೊಸ ತಾಲೂಕುಗಳಲ್ಲಿ ಮತ್ತೇ ಗ್ರಾಮ ವಿಂಗಡನೆ ಮಾಡಿ ಹೋಬಳಿ ಮಾಡಬೇಕಾಗಿದೆ. ಜನರು ಇರುವಲ್ಲಿಂದ ಗರಿಷ್ಠ 5-6 ಕಿಮೀ ಒಳಗಡೆಯಲ್ಲಿಯೇ ಜನರಿಗೆ ಹೋಬಳಿ ಮಟ್ಟದ ಸೇವೆ ಸಿಗಬೇಕು ಎಂಬುವುದು ಸರ್ಕಾರದ ಲೆಕ್ಕಾಚಾರ. ಆದರೆ, ಇದಾಗದೇ ಈಗ ಜನರು ಹೋಬಳಿ ಮಟ್ಟದಲ್ಲಿ ಸಿಗುವ ಸೇವೆಗಳಿಗಾಗಿ 30-40 ಕಿಮೀ ದೂರ ತೆರಳಬೇಕಿದೆ. ಗ್ರಾಮಗಳ ಸಮೂಹ ಲೆಕ್ಕಾಚಾರ ಮಾಡಿ ಹೊಸ ತಾಲೂಕು ಘೋಷಿಸಲಾಗುತ್ತದೆ. ಅನಂತರ ಗ್ರಾಮಗಳ ಸಮೂಹವನ್ನು ಆಧರಿಸಿ ಹೊಸ ಹೋಬಳಿ ರಚಿಸಲಾಗುತ್ತದೆ. ಈ ಪ್ರಾಥಮಿಕ ಕೆಲಸವೇ ಇದುವರೆಗೆ ಆಗಿಲ್ಲ. ನೂತನ ಹೋಬಳಿ ಗಾಗಿ ಹಲವಾರು ಗ್ರಾಮಗಳ ರೈತರು ಮುಖಂಡರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.----------------------------------------
ಬಾಕ್ಸ್...ಸರ್ವ ಮುಖಂಡರ ಒತ್ತಾಯ
ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಗ್ರಾಮೀಣ ಜನರ ಮತ್ತು ಅವರ ಬೇಕು ಬೇಡಿಕೆಗಳ ಬಗ್ಗೆ ಕಾಳಜಿ ತೋರುತ್ತಿಲ್ಲ. ಹೆಸರಿಗಷ್ಟೇ ದೇವರಹಿಪ್ಪರಗಿ ತಾಲೂಕು. ಆದರೆ, ಕಚೇರಿಗಳು ಇಲ್ಲದೇ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ಆದಷ್ಟು ಬೇಗ ರಾಜ್ಯ ಸರ್ಕಾರ ನೂತನ ತಾಲೂಕುಗಳಿಗೆ ಕಚೇರಿ ಜೊತೆ ಹೋಬಳಿಗಳನ್ನು ಸೃಷ್ಟಿಸಿ ಜನಸಾಮಾನ್ಯರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಶಿವಪುತ್ರ ಸಾತಿಹಾಳ, ಸಾಯಿಬಣ್ಣ ಬಾಗೇವಾಡಿ, ರಮೇಶ ಮಸಿಬಿನಾಳ, ಸಂಗಮೇಶ ಛಾಯಗೋಳ, ಮುನೀರ್ ಅಹ್ಮದ್ ಮಳಖೇಡ, ವೀರೇಶ ಕುದುರಿ ಹಾಗೂ ತಾಲೂಕಿನ ಸರ್ವ ಪಕ್ಷದ ಹಾಗೂ ಪ್ರಗತಿಪರ ಸಂಘಟನೆಯ ಮುಖಂಡರ ಒತ್ತಾಯಿಸಿದ್ದಾರೆ.----------------------------------------
ಹೋಬಳಿ ಏಕೆ ಅಗತ್ಯ?-ಹೋಬಳಿಯಲ್ಲಿ ನಾಡ ಕಚೇರಿ ಇರುತ್ತದೆ.
-ಉಪತಹಸೀಲ್ದಾರ್ ಸಹಿತ ವಿವಿಧ ಅಧಿಕಾರಿಗಳು ಲಭ್ಯ.-ಕಂದಾಯ ಇಲಾಖೆ ಸಂಬಂಧಿ ಬಹುತೇಕ ಕೆಲಸಗಳು ಇಲ್ಲಿ ಲಭ್ಯ.
-ಪಿಂಚಣಿ ಸಹಿತ ವಿವಿಧ ಸೇವೆಗಳನ್ನು ಪಡೆಯಬಹುದು.-ಪ್ರತಿಯೊಂದಕ್ಕೂ ತಾಲೂಕು ಕಚೇರಿಗೆ ಅಲೆದಾಡುವ ಪ್ರಮೇಯ ಇರುವುದಿಲ್ಲ.
-ಸರ್ಕಾರದಿಂದ ಹೋಬಳಿ ಮಟ್ಟದ ಅನುದಾನ ಹಂಚಿಕೆ ಸಾಧ್ಯ.-ಹೋಬಳಿ ಮಟ್ಟದ ಕ್ರೀಡಾಕೂಟ, ಯುವಜನ ಮೇಳ ಇತ್ಯಾದಿ ಆಯೋಜನೆ ಸಾಧ್ಯ.
-ಹೋಬಳಿ ಮಟ್ಟದ ಆಡಳಿತ ಸುಧಾರಣೆಗೆ ವಿಶೇಷ ಸಭೆ ಆಯೋಜನೆ.-ಪಶು ವೈದ್ಯಕೀಯ ಆಸ್ಪತ್ರೆ, ಹೆಸ್ಕಾಂ ಶಾಖಾ ಅಧಿಕಾರಿ, ಕೃಷಿ ಅಧಿಕಾರಿ ಸಹಿತ ವಿವಿಧ ಆಡಳಿತ ಕೇಂದ್ರಗಳು ಲಭ್ಯ.