ದೇವರ ದಾಸಿಮಯ್ಯ ವಚನ ಸಾಹಿತ್ಯದ ಧ್ರುವತಾರೆ: ಅನಿಲ ಬಡಿಗೇರ

| Published : Apr 03 2025, 12:30 AM IST

ದೇವರ ದಾಸಿಮಯ್ಯ ವಚನ ಸಾಹಿತ್ಯದ ಧ್ರುವತಾರೆ: ಅನಿಲ ಬಡಿಗೇರ
Share this Article
  • FB
  • TW
  • Linkdin
  • Email

ಸಾರಾಂಶ

ವಚನಗಳ ಪರ್ವ ಆರಂಭವಾಗಿದ್ದೇ ದೇವರ ದಾಸಿಮಯ್ಯ ಅವರಿಂದ. ಬಸವಣ್ಣನ ಮಹಾಮನೆಗೆ ಮೊಟ್ಟಮೊದಲು ಅಡಿಪಾಯ ಹಾಕಿ ವಚನಗಳ ಹುಟ್ಟಿಗೆ ಕಾರಣರಾದರು ಎಂದು ತಹಸೀಲ್ದಾರ್ ಅನಿಲ ಬಡಿಗೇರ ಹೇಳಿದರು.

ಶಿರಹಟ್ಟಿ: ಮನುಕುಲದ ಒಳಿತಿಗಾಗಿ ವಚನಕಾರ ದೇವರ ದಾಸಿಮಯ್ಯ ಅವಿರತವಾಗಿ ಶ್ರಮಿಸಿದ್ದಾರೆ. ದೇವರ ದಾಸಿಮಯ್ಯ ಅವರು ವಚನ ಸಾಹಿತ್ಯದ ಧ್ರುವತಾರೆ ಎಂದು ತಹಸೀಲ್ದಾರ್‌ ಅನಿಲ ಬಡಿಗೇರ ಹೇಳಿದರು.

ಇಲ್ಲಿಯ ತಹಸೀಲ್ದಾರ್‌ ಕಾರ್ಯಾಲಯದ ಸಭಾಭವನದಲ್ಲಿ ದೇವರ ದಾಸಿಮಯ್ಯ ಜಯಂತಿ ನಿಮಿತ್ತ ಅವರ ಭಾವಚಿತ್ರಕ್ಕೆ ಬುಧವಾರ ಪೂಜೆ ಸಲ್ಲಿಸಿ ಮಾತನಾಡಿದರು. ವಚನಗಳ ಪರ್ವ ಆರಂಭವಾಗಿದ್ದೇ ದೇವರ ದಾಸಿಮಯ್ಯ ಅವರಿಂದ. ಬಸವಣ್ಣನ ಮಹಾಮನೆಗೆ ಮೊಟ್ಟಮೊದಲು ಅಡಿಪಾಯ ಹಾಕಿ ವಚನಗಳ ಹುಟ್ಟಿಗೆ ಕಾರಣರಾದರು ಎಂದು ಹೇಳಿದರು.

ತಮ್ಮ ಶ್ರೇಷ್ಠ ಅನುಭವದಿಂದ ಸಮಾಜದ ಪರಿವರ್ತನೆಗೆ ಶ್ರಮಿಸಿದರು. ಬಡವರಾದರೂ ಭಕ್ತಿಗೆ ಒಡೆಯರಾಗಿದ್ದರು. ಆಧುನಿಕ ಯುಗ ನಾಚುವಂತೆ ಮಾದರಿ ದಾಂಪತ್ಯ ಜೀವನ ನಡೆಸಿದ್ದರು. ಜೇಡರ ದಾಸಿಮಯ್ಯ ಕಾಲಕ್ರಮೇಣ ದೇವರ ದಾಸಿಮಯ್ಯನಾಗಿ ಪರಿವರ್ತನೆಯಾದ. ಆ ಮೂಲಕ ಸಮಾಜ ಪರಿವರ್ತನೆಗೆ ತನ್ನನ್ನೇ ತಾನು ತೊಡಗಿಸಿಕೊಂಡ ಎಂದು ಹೇಳಿದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ತ ಅಧ್ಯಕ್ಷ ಕೆ.ಎ. ಬಳಿಗೇರ ಮಾತನಾಡಿ, ವಚನಗಳ ಮೂಲಕ ಬಲಾಢ್ಯ ಸಮಾಜ ಕಟ್ಟುವ ಕೆಲಸ ಮಾಡಿರುವ ದೇವರ ದಾಸಿಮಯ್ಯ ಬರೆದ ವಚನಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಡೆದು ಆರ್ಥಿಕವಾಗಿ, ಸಾಮಾಜಿಕವಾಗಿ ಮುಂದೆ ಬರಬೇಕು. ಅವರು ರಚಿಸಿದ ವಚನಗಳು ಇಂದಿಗೂ ಪ್ರಸ್ತುತವಾಗಿದ್ದು, ವಚನಗಳ ಮೂಲಕ ಸಮಾಜಕ್ಕೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ ಎಂದು ಹೇಳಿದರು.

ಕನ್ನಡ ವ್ಯಾಕರಣದಲ್ಲಿ ಹಾಸುಹೊಕ್ಕು ಎಂಬ ವಾಕ್ಯವನ್ನು ಕೊಟ್ಟವನೇ ದೇವರ ದಾಸಿಮಯ್ಯ. ಸುಮಾರು ೧೭೬ ವಚನಗಳನ್ನು ಈ ನಾಡಿಗೆ ನೀಡಿದ್ದಾರೆ. ವಚನಗಳಲ್ಲಿ ಸತಿ-ಪತಿಗಳ ದಾಂಪತ್ಯ ಹೇಗಿರಬೇಕು ಎಂಬುದರ ಬಗ್ಗೆ ಬರೆದಿದ್ದಾರೆ. ಕಾಯಕ ಸಿದ್ಧಾಂತಕ್ಕೆ ವಚನ ಬರೆದಿದ್ದಾರೆ. ಮನುಷ್ಯನ ಭವಿಷ್ಯ ದುಡಿಯುವ ರಟ್ಟೆಯ ಮೇಲೆ ಇದೆ. ಮಾನವ ಮಹಾದೇವ ಆಗುವುದನ್ನು ಕಲಿಸಿಕೊಟ್ಟಿದ್ದಾರೆ ಎಂದು ತಿಳಿಸಿದರು.

ಮಾಧ್ಯಮಿಕ ಶಾಲಾ ನೌಕರ ಸಂಘದ ಜಿಲ್ಲಾ ಅಧ್ಯಕ್ಷ ಎಂ.ಕೆ. ಲಮಾಣಿ ಮಾತನಾಡಿ, ದೇವರ ದಾಸಿಮಯ್ಯ ಅವರ ವಚನಗಳು ಅರ್ಥೈಸಿಕೊಳ್ಳಲು ಬಹಳ ಸರಳವಾಗಿದ್ದು, ಸಮಾಜಕ್ಕೆ ವಿಶೇಷವಾದ ಧಾರ್ಮಿಕ ಪ್ರಜ್ಞೆಯ ಸ್ಫೂರ್ತಿಯ ಚಿಲುಮೆಯಾಗಿವೆ ಎಂದರು.

ಜೆ.ಪಿ. ಪೂಜಾರ, ಸಂತೋಷ ಅಸ್ಕಿ, ಜೆ.ಎಚ್. ಭಾವಿಕಟ್ಟಿ, ವಿನೋದ ಪಾಟೀಲ, ಪ್ರವೀಣ ಕಗ್ಗಲಗೌಡ್ರ, ಬಿ.ಎಸ್. ಕುರಡಗಿ, ರಾಧಾ ದೇಸಾಯಿಪಟ್ಟಿ ಉಪಸ್ಥಿತರಿದ್ದರು.