ಕೊಪ್ಪಳ: ವಚನ ಸಾಹಿತ್ಯಕ್ಕೆ ದೇವರ ದಾಸಿಮಯ್ಯ ಕೊಡುಗೆ ಅಪಾರವಾಗಿದ್ದು, ವಚನಗಳ ಮೂಲಕ ಸಮಾಜಕ್ಕೆ ಮಾರ್ಗದರ್ಶನ ನೀಡಿದರು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ ಹೇಳಿದರು.

ಸೋಮವಾರ ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಪ್ಪಳ ನಗರಸಭೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಶ್ರೀ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ದಾಸಿಮಯ್ಯ ಅವರ ವಚನಗಳು ಸರಳತೆ, ಸಮಾನತೆ ಹಾಗೂ ಭಕ್ತಿ ತತ್ವಗಳನ್ನು ಸಾರುತ್ತವೆ. ಅವರು ಜಾತಿ ಭೇದ ವಿರೋಧಿಸಿ, ಮಾನವೀಯ ಮೌಲ್ಯಗಳನ್ನು ಉತ್ತೇಜಿಸಿದ ಶ್ರೇಷ್ಠ ವಚನಕಾರರು. ಅವರ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಹೇಳಿದರು.

ಗಂಗಾವತಿಯ ಮುರಹರಿನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ, ಸಾಹಿತಿ ಅಮರಮ್ಮ ಕೋಚಿ ಅವರು ದೇವರ ದಾಸಿಮಯ್ಯ ಕುರಿತು ನೀಡಿದ ವಿಶೇಷ ಉಪನ್ಯಾಸದಲ್ಲಿ, ದಾಸಿಮಯ್ಯ ಅವರು ಕನ್ನಡದ ಮೊದಲ ವಚನಕಾರರಲ್ಲಿ ಒಬ್ಬರು. ಅವರನ್ನು ವಚನ ಸಾಹಿತ್ಯದ ಆದ್ಯ ವಚನಕಾರ ಎಂದು ಕರೆಯಲಾಗುತ್ತದೆ. ಅಂದಿನ ಕಾಲದ ಜನರಲ್ಲಿದ್ದ ಮೂಢನಂಬಿಕೆ, ಮೇಲು-ಕೀಳು ಎಂಬ ಭೇದ-ಭಾವವನ್ನು ಅವರು ತಮ್ಮ ಸರಳ ಮಾತುಗಳ ಮೂಲಕ ತಿದ್ದಿದರು ಎಂದು ಹೇಳಿದರು.

ಉಪ ತಹಸೀಲ್ದಾರ್ ಗವಿಸಿದ್ದಪ್ಪ ಹಾಗೂ ನೇಕಾರ ಸಮುದಾಯದ ಅಧ್ಯಕ್ಷ ಶಿವಶಂಕರಪ್ಪ ಚೆನ್ನಿ, ಶಿವಶಂಕರಪ್ಪ ಕರಡಕಲ ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೂ ಮೊದಲು ನಗರದ ಗೌರಿಶಂಕರ ದೇವಸ್ಥಾನ ಆವರಣದಿಂದ ಸಾಹಿತ್ಯ ಭವನದ ವರೆಗೆ ಶ್ರೀ ದೇವರ ದಾಸಿಮಯ್ಯ ಅವರ ಭಾವಚಿತ್ರದ ಮೆರವಣಿಗೆ ಜರುಗಿತು.

ಗ್ರೇಡ್-೨ ತಹಸೀಲ್ದಾರ್ ಗವಿಸಿದ್ದಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ, ಸಮುದಾಯದ ಮುಖಂಡರಾದ ಪ್ರಹ್ಲಾದ್ ಅಗಳಿ, ಕಾಳಪ್ಪ ಕೊಂಕಿ, ಶಶಿಧರ ಸಕ್ರಿ, ಕಿರಣಕುಮಾರ್, ಹನುಮಂತಗೌಡ ಗಾಳಿ, ಶಂಕ್ರಪ್ಪ ಸೂಪ್ಪರದ, ಈರಣ್ಣ ಮುಜಾವರ್, ಚಂದ್ರಕಾಂತ ಬೆಟಗೇರಿ, ಹನುಮಗೌಡ ಗಾಳಿ, ಅನುರಾಧಾ, ಸುಮಿತಾ ಶಾವಿ, ವಿದ್ಯಾ ಬೆಟಿಗೇರಿ ಇದ್ದರು.