ದೇವರಾಜ ಅರಸರದ್ದು ಪ್ರಜೆ, ಸೇವಕ ಸಿದ್ಧಾಂತ: ಪ್ರೊ.ಮಾಲಗತ್ತಿ Devaraja Arasaraddu Praje, Sevaka Siddhanta: Prof. Malagatti

| Published : Sep 04 2025, 01:00 AM IST

ದೇವರಾಜ ಅರಸರದ್ದು ಪ್ರಜೆ, ಸೇವಕ ಸಿದ್ಧಾಂತ: ಪ್ರೊ.ಮಾಲಗತ್ತಿ Devaraja Arasaraddu Praje, Sevaka Siddhanta: Prof. Malagatti
Share this Article
  • FB
  • TW
  • Linkdin
  • Email

ಸಾರಾಂಶ

ವಿಧಾನ ಪರಿಷತ್‌ ಸದಸ್ಯ ಡಾ.ಡಿ. ತಿಮ್ಮಯ್ಯ ಹಾಗೂ ಸಮಾಜ ಸೇವಕ ಕೆ. ರಘುರಾಂ ವಾಜಪೇಯಿ ಅವರಿಗೆ ಅರಸು ಸೇವಾ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಮೈಸೂರು

ರಾಜ್ಯದಲ್ಲಿ ಎರಡು ಬಾರಿ ಮುಖ್ಯಮಂತ್ರಿಗಳಾಗಿದ್ದ ದಿವಂಗತ ಡಿ. ದೇವರಾಜ ಅರಸು ಅವರದು ಪ್ರಜೆ ಮತ್ತು ಸೇವೆ ಸಿದ್ಧಾಂತ. ಆದರೆ ಇಂದು ಬಳಸು ಮತ್ತು ಬಿಸಾಡು ಸಿದ್ದಾಂತ ಎಂದು ಖ್ಯಾತ ಸಾಹಿತಿ ಪ್ರೊ.ಅರವಿಂದ ಮಾಲಗತ್ತಿ ವಿಷಾದಿಸಿದರು.

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ, ಕನ್ನಡ ಸಾಹಿತ್ಯ ಪರಿಷತ್‌ ಹಾಗೂ ಕನ್ನಡ ಸಾಹಿತ್ಯ ಕಲಾಕೂಟವು ಬುಧವಾರ ವಿಜಯನಗರ ಕನ್ನಡ ಸಾಹಿತ್ಯ ಭವನದಲ್ಲಿ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಜಯಂತಿ ಅಂಗವಾಗಿ ಏರ್ಪಡಿಸಿದ್ದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು,

ಅರಸರು ತಮ್ಮನ್ನು ಧನುರ್ಧಾರಿ ಎಂದು ಕರೆದುಕೊಂಡಿದ್ದರು. ಧನುರ್ಧಾರಿ ಎಂದರೇ ಅರ್ಜುನ. ಮಹಾಭಾರತದಲ್ಲಿ ಅರ್ಜುನನು ಶ್ರೀಕೃಷ್ಣನ ಮಾರ್ಗದರ್ಶನದಲ್ಲಿ ಕೆಲಸ ಮಾಡಿದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾನು ಪ್ರಜೆಗಳೆಂಬ ಶ್ರೀಕೃಷ್ಣ ಹೇಳಿದಂತೆ ಕೆಲಸ ಮಾಡುತ್ತಿದ್ದೇನೆ ಎಂದು ಅರಸರು ಭಾವಿಸಿದ್ದರು ಎಂದರು.

ಇದರಿಂದಾಗಿಯೇ ಅರಸು ಅವರು ಭೂಸುಧಾರಣೆ ಕಾಯಿದೆ ಜಾರಿಗೆ ತಂದರು. ವಿಶಾಲ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಪುನರ್‌ ನಾಮಕರಣ ಮಾಡಿದರು ಎಂದರು.

ಆದರೆ ಇಂದು ಐದು ವರ್ಷಗಳಿಗೊಮ್ಮೆ ಮತದಾರರ ಮನೆ ಬಾಗಿಲಿಗೆ ತೆರಳಿ ಮತ ಪಡೆದು ನಂತರ ಅವರನ್ನು ಮರೆತು ಬಳಸು, ಬಿಸಾಡು ಸಿದ್ಧಾಂತ ಅನುಸರಿಸುತ್ತಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಬೇಡದವರನ್ನು ಮತಪಟ್ಟಿಯಿಂದ ತೆಗೆಯುವುದು, ಬೇಕಾದವರನ್ನು ಮತಪಟ್ಟಿಗೆ ಸೇರಿಸುವ ಮೂಲಕ

ಬಿಸಾಡು, ಮರು ಸೃಷ್ಟಿಸು ಸಿದ್ಧಾಂತ ಅನುಸರಿಸುತ್ತಿದ್ದಾರೆ ಎಂದು ಮಾರ್ಮಿಕವಾಗಿ ಹೇಳಿದರು.

ಅರಸು ಅವರ ಪ್ರತಿರೂಪದಂತಿರುವ, ಅವರ ಹಾದಿಯಲ್ಲಿಯೇ ಸಾಗುತ್ತಿರುವ ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅರಸರ ಸಿದ್ಧಾಂತವನ್ನು ಮುಂದುವರೆಸಿಕೊಂಡು ಹೋಗಬೇಕು. ಏಕೆಂದರೆ ವ್ಯಕ್ತಿಗಿಂತ ತತ್ವ ಜೀವಂತವಾಗಿರುವುದು ಮುಖ್ಯ ಎಂದರು.

ಅರಸರ ತತ್ವ ಸಿದ್ಧಾಂತಗಳು ಅರ್ಥವಾಗಬೇಕಾದರೆ ಮೈಸೂರು ವಿವಿ ಪ್ರಸಾರಾಂಗ ಪ್ರಕಟಿಸಿರುವ ''''''''''''''''ಜಯವಾಗಲಿ ಕರ್ನಾಟಕ'''''''''''''''' ಕೃತಿ ಓದಬೇಕು. ಆಗ ಉತ್ತರ ಮತ್ತು ದಕ್ಷಿಣ ಕರ್ನಾಟಕಗಳು ಏಕೆ ಒಂದಾಗಬೇಕಿತ್ತು, ಒಂದಾದವು ಎಂಬುದು ಅರ್ಥವಾಗುತ್ತದೆ ಎಂದು ಪ್ರೊ.ಮಾಲಗತ್ತಿ ಹೇಳಿದರು.

ಅರಸರು ''''''''''''''''ಹೆಸರಾಗಲಿ ಕರ್ನಾಟಕ, ಉಸಿರಾಗಲಿ ಕನ್ನಡ'''''''''''''''' ಎಂಬ ಆಶಯ ಹೊಂದಿದ್ದರು. ಆದರೆ ಇನ್ನೂ ಅದು ನನಸಾಗಿಲ್ಲ. ಆದ್ದರಿಂದ ಆಂಗ್ಲ ಮಾಧ್ಯಮ ಶಾಲೆಗಳು ಸೇರಿದಂತೆ ಎಲ್ಲೆಡೆ ಪ್ರಾಥಮಿಕ ಹಂತದಲ್ಲಿ ಕನ್ನಡವನ್ನು ಕಲಿಸುವ ಕೆಲಸ ಆಗಬೇಕು ಎಂದರು.

ಇದೇ ಸಂದರ್ಭದಲ್ಲಿ ವಿಧಾನ ಪರಿಷತ್‌ ಸದಸ್ಯ ಡಾ.ಡಿ. ತಿಮ್ಮಯ್ಯ ಹಾಗೂ ಸಮಾಜ ಸೇವಕ ಕೆ. ರಘುರಾಂ ವಾಜಪೇಯಿ ಅವರಿಗೆ ಅರಸು ಸೇವಾ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್‌ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್‌, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌, ಮೈಸೂರು ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆ ಅಧ್ಯಕ್ಷ ಕೆ.ಬಿ. ಲಿಂಗರಾಜು ಮುಖ್ಯ ಅತಿಥಿಗಳಾಗಿದ್ದರು. ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ. ಚಂದ್ರಶೇಖರ್‌ ಪ್ರಾಸ್ತಾವಿಕ ಭಾಷಣ ಮಾಡಿದರು. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್‌. ಶಿವರಾಮ್‌ ಸ್ವಾಗತಿಸಿದರು. ಉಪ್ಪಾರ ಸಂಘದ ಜಿಲ್ಲಾಧ್ಯಕ್ಷ ಯೋಗೀಶ್‌ ಉಪ್ಪಾರ ಕಾರ್ಯಕ್ರಮ ನಿರೂಪಿಸಿದರು ಕುಂಬಾರ ಸಂಘದ ಜಿಲ್ಲಾಧ್ಯಕ್ಷ ಎಚ್.ಎಸ್‌. ಪ್ರಕಾಶ್‌ ವಂದಿಸಿದರು.. ಮಡಿವಾಳ ಸಂಘದ ಜಿಲ್ಲಾಧ್ಯಕ್ಷ ರವಿನಂದನ್‌ ಮೊದಲಾದವರು ಇದ್ದರು.