ಹಾಲು ಕೊಟ್ಟ ಜನರಿಗೆ ದೇವೇಗೌಡ ಕುಟುಂಬದಿಂದ ವಿಷ: ಮರಿತಿಬ್ಬೇಗೌಡ

| Published : Apr 24 2024, 02:17 AM IST

ಹಾಲು ಕೊಟ್ಟ ಜನರಿಗೆ ದೇವೇಗೌಡ ಕುಟುಂಬದಿಂದ ವಿಷ: ಮರಿತಿಬ್ಬೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಮಂಡ್ಯ ಜಿಲ್ಲೆಯ ಜನತೆ ದೇವೇಗೌಡ ಮತ್ತು ಕುಮಾರಸ್ವಾಮಿ ಕುಟುಂಬಕ್ಕೆ ಪ್ರತೀ ಬಾರಿಯೂ ತಣ್ಣಗಿನ ಹಾಲು ಕೊಟ್ಟರು. ಕಳ್ಳಬೆಕ್ಕಿನಂತೆ ಬಂದ ಗೌಡರ ಕುಟುಂಬದವರು ಹಾಲು ಕುಡಿದು ಜನರಿಗೆ ವಿಷವಿಕ್ಕಿದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತದಾರರು ಕಳ್ಳಬೆಕ್ಕಿಗೆ ಬಿಸಿಹಾಲು ಕೊಟ್ಟು ಓಡಿಸುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ವ್ಯಂಗ್ಯವಾಡಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ಜಿಲ್ಲೆಯ ಜನತೆ ದೇವೇಗೌಡ ಮತ್ತು ಕುಮಾರಸ್ವಾಮಿ ಕುಟುಂಬಕ್ಕೆ ಪ್ರತೀ ಬಾರಿಯೂ ತಣ್ಣಗಿನ ಹಾಲು ಕೊಟ್ಟರು. ಕಳ್ಳಬೆಕ್ಕಿನಂತೆ ಬಂದ ಗೌಡರ ಕುಟುಂಬದವರು ಹಾಲು ಕುಡಿದು ಜನರಿಗೆ ವಿಷವಿಕ್ಕಿದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತದಾರರು ಕಳ್ಳಬೆಕ್ಕಿಗೆ ಬಿಸಿಹಾಲು ಕೊಟ್ಟು ಓಡಿಸುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ವ್ಯಂಗ್ಯವಾಡಿದರು.ದೇವೇಗೌಡರ ಸುದೀರ್ಘ ೬೦ ವರ್ಷದ ರಾಜಕೀಯ ಜೀವನದಲ್ಲಿ ಜಿಲ್ಲೆಯ ಜನತೆ ಅವರ ಕೈ ಹಿಡಿದರು. ಕುಮಾರಸ್ವಾಮಿಯವರನ್ನೂ ಒಪ್ಪಿ ಅವರಿಗೆ ತಣ್ಣಗಿನ ಹಾಲು ಕೊಟ್ಟು ಸಲುಹಿದ್ದರು. ಅಂತಹ ಜನರಿಗೆ ನೀವು ವಿಷ ಕೊಟ್ಟಿರಿ. ಈಗ ವಿಷ ಕೊಡುತ್ತೀರೋ ಅಥವಾ ಹಾಲು ಕೊಡುತ್ತೀರೋ ಎಂದು ಕೇಳುತ್ತಾರೆ. ಹಾಲು ಕೊಟ್ಟ ಜನರಿಗೆ ನೀವು ಕೊಟ್ಟಿದ್ದೇನು ಎಂದು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.೧೦ ವರ್ಷಗಳಿಂದ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ತಾನು ಕೊಟ್ಟ ಭರವಸೆಗಳನ್ನು ಈಡೇರಿಸಿಲ್ಲ. ಮೈಸೂರಿಗೆ ಪ್ರಧಾನಿ ನರೇಂದ್ರಮೋದಿ ಬಂದಾಗ ನಾಡಿನ ಜನತೆಗೆ ತಮ್ಮ ಅವಧಿಯಲ್ಲಿ ಯಾವುದೇ ಕಲ್ಯಾಣ ಕಾರ್ಯಕ್ರಮಗಳನ್ನು ಕೊಟ್ಟಿರುವುದರ ಬಗ್ಗೆ ಪ್ರಸ್ತಾಪ ಮಾಡದೆ ಇರುವುದು ಇದಕ್ಕೆ ಸಾಕ್ಷಿಯಾಗಿದೆ ಎಂದು ಟೀಕಿಸಿದರು. ಕನ್ನಡ ನಾಡಿನ ಜನತೆಯ ಬರಿಹಾರ ಹಾಗೂ ಬಾಕಿ ತೆರಿಗೆ ನೀಡಿಲ್ಲ. ಯಾವುದೇ ನೀರಾವರಿ ಯೋಜನೆಗೆ ಅನುಮೋದನೆ ನೀಡಲಿಲ್ಲ. ಬಡವರು ರೈತರ ಹಾಗೂ ಸಂವಿಧಾನ ವಿರೋಧಿ ಸರ್ವಾಧಿಕಾರಿಯಾಗಿ ಆಡಳಿತ ನಡೆಸುತ್ತಿದೆ ಎಂದು ಕಿಡಿಕಾರಿದರು. ಸಿಎಂ ಸಿದ್ದರಾಮಯ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಒತ್ತಾಯದ ಮೇರೆಗೆ ಮೊದಲ ಬಜೆಟ್‌ನಲ್ಲಿ ಹೊಸ ಸಕ್ಕರೆ ಕಾರ್ಖಾನೆ, ಕೃಷಿ ವಿವಿ ಮತ್ತು ನೀರಾವರಿ ಯೋಜನೆಗಳಿಗೆ 2000 ಕೋಟಿ ರು. ಅನುದಾನ ನಿಗದಿಪಡಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನೀಡಿದ್ದ ಮಾತಿನಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಈಗ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಬಡ ಮಹಿಳೆಯರ ಖಾತೆಗೆ ಪ್ರತಿ ವರ್ಷ ೧ ಲಕ್ಷ ರು., ಯುವಜನರಿಗೆ ಉದ್ಯೋಗಭತ್ಯೆ ಸೇರಿದಂತೆ ೨೫ಕ್ಕೂ ಹೆಚ್ಚು ಜನಪರ ಯೋಜನೆಗಳನ್ನು ಪ್ರಕಟಿಸಿದೆ. ಈ ಎಲ್ಲ ಯೋಜನೆಗಳು ಕಾರ್ಯಗತವಾಗಬೇಕಾದರೆ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಮನವಿ ಮಾಡಿದರು. ಮುಖಂಡರಾದ ಎಂ.ಎಸ್. ಚಿದಂಬರ್, ಟಿ.ಎಸ್.ಸತ್ಯಾನಂದ, ಅಂಜನಾ ಶ್ರೀಕಾಂತ್, ಕೀಲಾರ ಕೃಷ್ಣ, ಕೋಣನಹಳ್ಳಿ ಜಯರಾಂ ಗೋಷ್ಠಿಯಲ್ಲಿದ್ದರು.