ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗೇಪಲ್ಲಿ
ಕೋಮುವಾದಿಗಳ ಜೊತೆ ಯಾವುದೇ ಕಾರಣಕ್ಕೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ, ಮುಂದಿನ ಜನ್ಮ ಇದ್ದರೆ ನಾನು ಮುಸ್ಲಿಂ ಆಗಿ ಹುಟ್ಟುವುದಾಗಿ ಹೇಳಿಕೆ ನೀಡಿದ್ದ ಮಾಜಿ ಪ್ರಧಾನಿ ದೇವೇಗೌಡರು ತಮ್ಮ ರಾಜಕೀಯ ಮತ್ತು ಜೆಡಿಎಸ್ ಪಕ್ಷದ ಉಳಿವಿಗಾಗಿ ಯಾವು ಪಕ್ಷವನ್ನು ತೆಗಳಿದ್ದರೋ ಅದೇ ಪಕ್ಷದ ಜೊತೆ ಚುನಾವಣೆ ಹೊಂದಾಣಿಕೆ ಮಾಡಿಕೊಂಡು ಕೇವಲ 3 ಸ್ಥಾನಗಳನ್ನ ತೆಗೆದುಕೊಂಡು ಬಿಜೆಪಿಯವರ ಜೊತೆ ಸೇರಿಕೊಂಡಿರುವುದಕ್ಕೆ ಸಿಎಂ ಸಿದ್ದರಾಮಯ್ಯ ಮಾಜಿ ಪ್ರಧಾನ ಮಂತ್ರಿ ದೇವೇಗೌಡರ ಬಗ್ಗೆ ಲೇವಡಿ ಮಾಡಿದರು.ಪಟ್ಟಣಕ್ಕೆ ಸಮೀಪದ ಕೆ.ಹೆಚ್‍ಬಿ ಲೇಔಟ್‍ನಲ್ಲಿ ಏರ್ಪಡಿಸಲಾಗಿದ್ದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಪರ ಚುನಾವಣಾ ಪ್ರಚಾರದ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಬಿಜೆಪಿ ಜೊತೆ ಸೇರಿ ಜೆಡಿಎಸ್ ಬಾಯ್ ಬಾಯ್ ಎನ್ನುತ್ತಿದೆ:2019ರ ಲೋಕ ಸಭಾ ಚುನಾವಣೆ ಸಂದರ್ಭದಲ್ಲಿ ಹಾಸನದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ರಾಹುಲ್ ಗಾಂಧಿ ಜೆಡಿಎಸ್ ಪಕ್ಷ ಬಿಜೆಪಿ ಬಿ ಟೀಮ್ ಎಂದು ಕರೆದಿದ್ದರು. ಇದಕ್ಕೆ ದೇವೇಗೌಡ ಕೆಂಡಾಮಂಡಲಾಗಿ ನಾವು ಬಿಜೆಪಿ ಬಿ ಟೀಮ್ ಅಲ್ಲ, ರಾಹುಲ್ ಗಾಂಧಿ ಚುನಾವಣೆ ಗಿಮಿಕ್ ಮಾಡುತ್ತಿದ್ದಾರೆ, ನಾವು ಎಂದಿಗೂ ಕೋಮುವಾದಿ ಪಕ್ಷದ ಜೊತೆ ಸೇರಲ್ಲ, ಮುಂದಿ ಜನ್ಮ ಇದ್ದರೆ ನಾನು ಮುಸ್ಲಿಂ ಆಗಿ ಹುಟ್ಟುತ್ತೇನೆ ಎಂದು ಇದೇ ವೇದಿಕೆಯಲ್ಲಿ ಹೇಳಿದ್ದರು. ಏನಾದ್ರೂ ನರೇಂದ್ರ ಮೋದಿ 2ನೇ ಬಾರಿ ಪ್ರಧಾನಿಯಾದರೆ ನಾನು ಈ ದೇಶವನ್ನೇ ಬಿಟ್ಟು ಹೋಗುತ್ತೇನೆ ಎಂದು ಹೇಳಿದ್ದರು, ಹಾವು ಮುಂಗಿಸಿಯಂತಿದ್ದ ಜೆಡಿಎಸ್ ಮತ್ತು ಬಿಜೆಪಿ ಇಂದು ಜೆಡಿಎಸ್ ಪಕ್ಷದ ಉಳಿವಿಗಾಗಿ ಬಿಜೆಪಿ ಜೊತೆ ಸೇರಿಕೊಂಡು ಬಾಯ್ ಬಾಯ್ ಎನ್ನುತ್ತಿದ್ದಾರೆ ಇದನ್ನು ನೋಡಿದರೆ ದೇವೇಗೌಡರ ಇಬ್ಬಂದಿತನ ತೋರಿಸುತ್ತೆ ಎಂದು ವ್ಯೆಂಗ್ಯವಾಡಿದರು.
ರಾಜಕೀಯ ಮತ್ತು ಪಕ್ಷದ ಉಳಿವಿಗಾಗಿ ಬಿಜೆಪಿ ಜೊತೆ ಸೇರಿಕೊಂಡು ಲೋಕಸಭಾ ಚುನಾವಣೆ ಎದುರಿಸುತ್ತಿದ್ದಾರೆ. ಈ ಲೋಕಸಭೆ ಚುನಾವಣೆ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪತವಾಗಲಿದೆ ಎಂಬುದಾಗಿ ದೇವೇಗೌಡರು ಹೇಳಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ 139 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ, ಬಿಜೆಪಿ 66 ಸ್ಥಾನಗಳು ಮಾತ್ರ, ಜೆಡಿಎಸ್ ಕೇವಲ 19 ಸ್ಥಾನಗಳು ಮಾತ್ರ ಇಂತಹ ಸಂದರ್ಭದಲ್ಲಿ ದೇವೇಗೌಡರು ಸರ್ಕಾರ ಪತನವಾಗುತ್ತೆ ಎಂದು ಹಗಲು ಕನಸು ಕಾಣುತ್ತಿದ್ದಾರೆ ಎಂದು ದೇವೇಗೌಡರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.ಬಿಜೆಪಿ ಜೆಡಿಎಸ್‌ಗೆ ಜನರ ಬಳಿ ಓಟು ಕೇಳೋ ನೈತಿಕತೆಯಿಲ್ಲ:
2014ರಲ್ಲಿ ಕಪ್ಪು ಹಣವನ್ನು ತಂದು ಜನರ ಖಾತೆಗೆ 15 ಲಕ್ಷ ಜಮಾ ಮಾಡುವುದಾಗಿ ಹೇಳಿದ್ದರು, ವರ್ಷಕ್ಕೆ 2 ಸಾವಿರ ಉದ್ಯೋಗ ಸೃಷ್ಠಿ ಸೇರಿದಂತೆ ಅನೇಕ ಭರವಸೆಗಳನ್ನು ಮೋದಿ ನೀಡಿದ್ದರು. ಯಾವುದೇ ಭರವಸೆ 10 ವರ್ಷಗಳು ಕಳೆದರೂ ಈಡೇರಿಸಿಲ್ಲ, ನಿರುದ್ಯೋಗಿ ಯುವಕರು ಕೆಲಸ ನೀಡುವಂತೆ ಕೇಳಿದರೆ ಪಕೋಡ ಮಾರಕ್ಕೆ ಹೋಗಿ ಎಂದು ಹೇಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಎಂದು ಪ್ರಧಾನ ಮಂತ್ರಿ ಮೋದಿ ಸರ್ಕಾರವನ್ನು ತರಾಟೆಗೆ ತೆಗದುಕೊಂಡು ಬಿಜೆಪಿ ಮತ್ತು ಜೆಡಿಎಸ್‌ಗೆ ಜನರ ಬಳಿ ಓಟು ಕೇಳಲು ಯಾವುದೇ ನೈತಿಕತೆ ಇಲ್ಲ, ಕಾಂಗ್ರೆಸ್ ಪಕ್ಷಕ್ಕೆ ನೈತಿಕತೆ ಇದೆ ಏಕೆಂದರೆ ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದುಕೊಂಡಿದೆ, ಬಿಜೆಪಿ ಕೊಟ್ಟು ಮಾತಿನಂತೆ ನಡೆದುಕೊಂಡಿಲ್ಲ ಎಂದರು.ಬಾಗೇಪಲ್ಲಿ ವಿಧಾನ ಸಭಾ ಕ್ಷೇತ್ರದಲ್ಲಿ ರಕ್ಷಾ ರಾಮಯ್ಯಗೆ 40 ಸಾವಿರಕ್ಕೂ ಹೆಚ್ಚಿನ ಲೀಡ್ ಬರುತ್ತೆ ಎಂಬ ವಿಶ್ವಾಸ ನನಗೆ ಇದೆ. ಇದರಿಂದ ಶಾಸಕ ಎನ್.ಎನ್.ಸುಬ್ಬಾರೆಡ್ಡಿಗೆ ಹೆಚ್ಚಿನ ಶಕ್ತಿ ಬರಲಿದೆ. ಸುಬ್ಬಾರೆಡ್ಡಿಗೆ ಮುಂದಿನ ದಿನಗಳಲ್ಲಿ ಒಳ್ಳೆ ರಾಜಕೀಯ ಭವಿಷ್ಯವಿದೆ ಎಂದು ಪರೋಕ್ಷವಾಗಿ ಮುಂದಿನ ದಿನಗಳಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿಗೆ ಮಂತ್ರಿ ಸ್ಥಾನ ನೀಡುವ ಸೂಚನೆ ನೀಡಿದರು.
ಈ ವೇಳೆ ಆರೋಗ್ಯ ಸಚಿವ ಡಾ. ಎಂ.ಸಿ.ಸುಧಾಕರ್, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ, ವಿಪ ಸದಸ್ಯ ಸೀತಾರಾಮಯ್ಯ, ಶಾಸಕ ಎಸ್.ಎನ್.ಸುಬ್ಬಾರೆಡ್ಡಿ, ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್, ಸುದರ್ಶನ್, ಮಾಜಿ ಶಾಸಕ ಎನ್.ಸಂಪಂಗಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೇಶವರೆಡ್ಡಿ ಮತ್ತಿತರರಿದ್ದರು.