ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ಮಾಜಿ ಪ್ರಧಾನಿ ದಿ. ಚಂದ್ರಶೇಖರ್ ಅವರಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ವಿನಂತಿಸಿ ವಾಲ್ಮೀಕಿ ಜನಾಂಗವನ್ನು ಎಸ್‌ಟಿ ವರ್ಗಕ್ಕೆ ಸೇರಿಸಲು ಶ್ರಮಿಸಿದ್ದರು. ಜತೆಗೆ ೧೮ ಶಾಸಕರು ಹಾಗೂ ೩ ಸಂಸದರು ಆಯ್ಕೆಯಾಗಲು ಸಾಧ್ಯವಾಗಿತ್ತು ಎಂದು ಶಾಸಕ ಎಚ್.ಡಿ.ರೇವಣ್ಣ ಹೇಳಿದರು.
ಪಟ್ಟಣದ ಸಾರ್ವಜನಿಕ ಸಮುದಾಯ ಭವನದಲ್ಲಿ ತಾಲೂಕು ಆಡಳಿತ, ತಾ. ಪಂಚಾಯತ್, ಪುರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಯೋಜನೆ ಮಾಡಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಹರ್ಷಿ ವಾಲ್ಮೀಕಿಯವರು ನಮ್ಮ ಸಂಸ್ಕೃತಿ, ಮಾನವೀಯ ಮೌಲ್ಯಗಳು ಹಾಗೂ ಮೌಲ್ಯಯುತ ಜೀವನಕ್ಕೆ ದಾರಿದೀಪವಾಗಿರುವ ರಾಮಾಯಣ ಗ್ರಂಥವನ್ನು ರಚಿಸಿದ್ದಾರೆ ಮತ್ತು ಶ್ರೀ ರಾಮನ ಆದರ್ಶಗಳನ್ನು ನಮಗೆ ತಿಳಿಸಿಕೊಟ್ಟಿದ್ದಾರೆ. ದಾರ್ಶನಿಕರು ನೀಡಿರುವ ಮಹತ್ವದ ಕಾವ್ಯಗಳನ್ನು ಅರ್ಥ ಮಾಡಿಕೊಂಡು ತತ್ವಗಳನ್ನು ಅನುಸರಿಸುತ್ತಾ, ಸಹಬಾಳ್ವೆಯ ಜೀವನ ನಡೆಸಬೇಕಿದೆ ಎಂದರು.ನಂತರ ಜೆಡಿಎಸ್ ಪಕ್ಷದ ಆಡಳಿತ ಅವಧಿಯಲ್ಲಿ ನಾಯಕ ಜನಾಂಗ ಅಭಿವೃದ್ಧಿಗೆ ಕೈಗೊಂಡ ಹಲವಾರು ಜನಪರ ಕಾರ್ಯಗಳ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು. ಹಳ್ಳಿಮೈಸೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರಭುಶಂಕರ್ ಎಚ್.ಎಸ್. ಅವರು ಪ್ರಧಾನ ಭಾಷಣ ಮಾಡುತ್ತಾ ಸಂಸ್ಕಾರ, ಸಂಸ್ಕೃತಿ, ಭಾವನೆಗಳ ಸಾರಕ್ಕೆ ವಿಶೇಷ ಮೆರಗನ್ನು ನೀಡಿ, ವಾಲ್ಮೀಕಿ ಮಹರ್ಷಿಗಳು ಸಂಸ್ಕೃತ ಭಾಷೆಯಲ್ಲಿ ಪ್ರಥಮ ಗ್ರಂಥವನ್ನು ರಚಿಸಿ, ಇಂದಿಗೂ ನಾವುಗಳು ವಾಲ್ಮೀಕಿ ಮಹರ್ಷಿಗಳ ಜಯಂತ್ಯುತ್ಸವ ಅಚರಿಸುತ್ತೇವೆ ಎಂದಾದರೇ ಅವರ ಗ್ರಂಥದಲ್ಲಿ ಅವರು ನೀಡಿರುವ ಸಂದೇಶಗಳ ಉತ್ಕೃಷ್ಟತೆ ಮತ್ತು ಮಾರ್ಗದರ್ಶನಕ್ಕೆ ಸಾಕ್ಷಿಯಾಗಿದೆ ಎಂದು ರಾಮಾಯಣ ಗ್ರಂಥ ಕುರಿತಂತೆ ಸವಿಸ್ತಾರವಾಗಿ ವಿವರಿಸಿದರು. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ನಾಯಕ ಜನಾಂಗದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಕಾರ್ಯಕ್ರಮಕ್ಕೂ ಮುನ್ನ ಆಯೋಜನೆ ಮಾಡಿದ್ದ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರದ ಮೆರವಣಿಗೆಗೆ ಸಂಸದ ಶ್ರೇಯಸ್ ಎಂ.ಪಟೇಲ್ ಚಾಲನೆ ನೀಡಿದರು. ವಿವಿಧ ಕಲಾ ತಂಡಗಳ ಪ್ರದರ್ಶನದೊಂದಿಗೆ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ವೈಭವದಿಂದ ನಡೆಸಲಾಯಿತು.ತಹಸೀಲ್ದಾರ್ ಕೆ.ಕೆ.ಕೃಷ್ಣಮೂರ್ತಿ, ತಾ. ವಾಲ್ಮೀಕಿ ಸಂಘದ ಅಧ್ಯಕ್ಷ ಜವರಪ್ಪನಾಯಕ, ಪುರಸಭಾಧ್ಯಕ್ಷ ಕೆ.ಶ್ರೀಧರ್, ಉಪಾಧ್ಯಕ್ಷೆ ಸಾವಿತ್ರಮ್ಮ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಕೌಸರ್ ಅಹಮದ್, ಚಿಕ್ಕನಿಂಗೇಗೌಡ, ಬಿಇಒ ಸೋಮಲಿಂಗೇಗೌಡ, ಪುರಸಭೆ ಮುಖ್ಯಾಧಿಕಾರಿ ನಾಗೇಂದ್ರ ಕುಮಾರ್, ಕೃಷಿ ಇಲಾಖೆ ಅಧಿಕಾರಿ ಸಪ್ನ, ಪುರಸಭಾ ಸದಸ್ಯರಾದ ಜಗನ್ನಾಥ್ ನಾಯಕ ಜನಾಂಗದ ಮುಕಂಡರಾದ ಮಹಾಂತಪ್ಪ, ಮಹೇಶ್ ನಾಯಕ, ರವಿ ನಾಯಕ, ಕುಮಾರ್ ನಾಯಕ, ಇತರರು ಇದ್ದರು.