ಸಾರಾಂಶ
ದ್ವೇಷದ ರಾಜಕಾರಣ ಹಾಗೂ ಇನ್ನೊಬ್ಬರನ್ನು ಮುಗಿಸೋದರಲ್ಲಿ ದೇವೇಗೌಡರು ನಂಬರ್ 1. ಅವರು ಯಾವುದೇ ಒಕ್ಕಲಿಗ ನಾಯಕರನ್ನು ಬೆಳೆಯಲು ಬಿಡಲ್ಲ.
ಚನ್ನಪಟ್ಟಣ: ದ್ವೇಷದ ರಾಜಕಾರಣ ಹಾಗೂ ಇನ್ನೊಬ್ಬರನ್ನು ಮುಗಿಸೋದರಲ್ಲಿ ದೇವೇಗೌಡರು ನಂಬರ್ 1. ಅವರು ಯಾವುದೇ ಒಕ್ಕಲಿಗ ನಾಯಕರನ್ನು ಬೆಳೆಯಲು ಬಿಡಲ್ಲ. ನಾನು ಹಿಂದುಳಿದವನು ಅಂತ ನನ್ನನ್ನು ವಿರೋಧಿಸ್ತಾರೆ, ಸರಿ. ಆದರೆ, ಅವರು ವೈ.ಕೆ. ರಾಮಯ್ಯ, ನಾಗೇಗೌಡ, ಬಚ್ಚೇಗೌಡ, ವರದೇಗೌಡ, ಪುಟ್ಟಣ್ಣ, ಚಲುವರಾಯಸ್ವಾಮಿ, ಬಾಲಕೃಷ್ಣ, ಬೈರೇಗೌಡ, ಕೆ.ಆರ್.ಪೇಟೆ ಚಂದ್ರಶೇಖರ್ ಸೇರಿ ಸಾಲು ಸಾಲು ಒಕ್ಕಲಿಗರನ್ನು ರಾಜ್ಯದಲ್ಲಿ ಮುಗಿಸಿದರು.
ರಾಜ್ಯದಲ್ಲಿ ಒಕ್ಕಲಿಗ ನಾಯಕತ್ವವೇ ಬೆಳೆಯದಂತೆ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ವಿರುದ್ಧ ವಾಗ್ದಾಳಿ ನಡೆಸಿದರು.
ತಾಲೂಕಿನ ದೊಡ್ಡಮಳೂರು ಗ್ರಾಮದ ಬಳಿ ಸೋಮವಾರ ನಡೆದ ಕಾಂಗ್ರೆಸ್ ಬೃಹತ್ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಬುದ್ದಿವಂತ ಒಕ್ಕಲಿಗರನ್ನು, ರಾಜಕೀಯ ಪ್ರಜ್ಞೆ ಇರುವ ಒಕ್ಕಲಿಗರನ್ನು ಯಾರನ್ನೂ ದೇವೇಗೌಡರು ಬೆಳೆಯಲು ಬಿಡದೆ ಮುಗಿಸುತ್ತಾರೆ ಎಂದು ಆರೋಪಿಸಿದರು.
ಜಿಟಿಡಿಗೆ ಎಚ್ಚರಿಸಿದ್ದೇನೆ:
ಈಗ ಅವರು ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ಅವರನ್ನೂ ಮುಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಇದು ಆಗಲ್ಲ. ನಾನು ಜಿ.ಟಿ.ದೇವೇಗೌಡರಿಗೂ ಎಚ್ಚರಿಸಿದ್ದೀನಿ. ಅಲ್ಲಿದ್ದರೆ ಮುಗಿಸ್ತಾರೆ, ಬೇಗ ಹೊರಗೆ ಬಂದರೆ ನಿಮಗೆ ಒಳ್ಳೆಯದು ಎಂದು ಎಚ್ಚರಿಕೆ ನೀಡಿದ್ದೇನೆ. ಮನೆ ಮಗ ಅಂತಿದ್ದ ಬಿ.ಎಲ್.ಶಂಕರ್, ವೈ.ಕೆ.ರಾಮಯ್ಯ ಅವರನ್ನೇ ಮುಗಿಸಿದವರು. ಇನ್ನು ಯೋಗೇಶ್ವರ್ ಅವರನ್ನು ಸಹಿಸುತ್ತಾರಾ ಎಂದು ಪ್ರಶ್ನಿಸಿದರು.
ಮೋದಿ ಹೊಗಳುತ್ತಿದ್ದಾರೆ:
ಮೋದಿಯವರಂತಹ ಸುಳ್ಳು ಪ್ರಧಾನಿಯನ್ನು ನಾನು ಹಿಂದೆಂದೂ ನೋಡಿಲ್ಲ. ಮೋದಿ ಮತ್ತೆ ಪ್ರಧಾನಿ ಆದರೆ ದೇಶ ಬಿಟ್ಟು ಹೋಗುವುದಾಗಿ ದೇವೇಗೌಡರು ಹೇಳಿದ್ದರು. ಈಗ ಮೋದಿಯನ್ನು ಯದ್ವಾತದ್ವಾ ಹೊಗಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಪಾಳೇಗಾರಿಕೆ ಅಲ್ಲವಾ?:
ದೇವೇಗೌಡರು, ಸಿದ್ದರಾಮಯ್ಯಗೆ ಅಹಂಕಾರ, ಸೊಕ್ಕು ಅಡಗಿಸಬೇಕು, ಗರ್ವ ಭಂಗ ಮಾಡಬೇಕು ಅಂತೀರಲ್ಲ. ಇದು ಪಾಳೇಗಾರರ ಮಾತಲ್ವಾ? ನೀವು ಆಕಸ್ಮಿಕವಾಗಿ ಪ್ರಧಾನಿಯಾದವರು. ನೀವು ಇವತ್ತಿನವರೆಗೂ ಪಾಳೇಗಾರಿಕೆ ಬಿಟ್ಟಿಲ್ಲ. ಹಿಂದುಳಿದವರು, ದಲಿತರನ್ನು ಕಂಡರೆ ಆಗಲ್ಲ. ಒಕ್ಕಲಿಗರನ್ನು ಬೆಳೆಯಲು ಬಿಡಲ್ಲ. ಇದೆಲ್ಲಾ ಪಾಳೇಗಾರಿಕೆ ಅಲ್ವಾ? ಎಂದು ಟೀಕಿಸಿದರು.
ದೇವೇಗೌಡರು ಮೊಮ್ಮಗನಿಗಾಗಿ ಒಂದು ವಾರದಿಂದ ಚನ್ನಪಟ್ಟಣದಲ್ಲೇ ಠಿಕಾಣಿ ಹೂಡಿದ್ದಾರೆ. ಜೆಡಿಎಸ್ ಅಥವಾ ಬಿಜೆಪಿಯಿಂದ ಬೇರೆ ಯಾರಾದರೂ ನಿಂತಿದ್ದರೆ ದೇವೇಗೌಡರು ಹೀಗೆ ವಾರಗಟ್ಟಲೆ ಚನ್ನಪಟ್ಟಣದಲ್ಲಿ ನಿಂತು ಮತ ಕೇಳ್ತಿದ್ರಾ? ಎನ್‌ಡಿಎ ಅಭ್ಯರ್ಥಿಯಾಗಿ ಯೋಗೇಶ್ವರ್ ಸ್ಪರ್ಧಿಸಿದ್ದರೆ ದೇವೇಗೌಡರು ಹೀಗೆ ವಾರಗಟ್ಟಲೆ ಇದ್ದು ಮತ ಕೇಳುತ್ತಿದ್ದರಾ ಎಂದು ಪ್ರಶ್ನಿಸಿದರು.
ಕಣ್ಣೀರಿಗೆ ಮರಳಾಗಬೇಡಿ:
ಚನ್ನಪಟ್ಟಣಕ್ಕೆ ನಿಮ್ಮ ಮಗ ಏನು ಮಾಡಿದ್ದಾರೆ. ಈಗ ಅವರು ಇಲ್ಲಿ ಬಂದು ಅಳುತ್ತಿದ್ದಾರೆ. ಹಾಸನದಲ್ಲಿ ಹೆಣ್ಣು ಮಕ್ಕಳು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ಅಲ್ಲಿ ಹೋಗಿ ಅಳಿ ದೇವೇಗೌಡರೆ, ಅದು ಬಿಟ್ಟು ಇಲ್ಲಿ ಅಳುತ್ತಿದ್ದೀರಲ್ಲ. ಹಾಸನದ ಹೆಣ್ಣುಮಕ್ಕಳ ಪರವಾಗಿ ಪಾಪ ದೇವೇಗೌಡರಿಗೆ ಕಣ್ಣೀರೇ ಬರಲಿಲ್ಲ. ಅವರ ಕಣ್ಣೀರಿಗೆ ಮರುಳಾಗಬೇಡಿ ಎಂದರು.
ಮೊಮ್ಮಗನ ಮೇಲೆ ವ್ಯಾಮೋಹ:
ನಿಖಿಲ್, ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗಲೇ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದರು. ನಂತರ ರಾಮನಗರದಲ್ಲಿ ಸೋಲು ಅನುಭವಿಸಿದರು. ಇದೀನ ಮೊಮ್ಮಗನ ಮೇಲಿನ ವ್ಯಾಮೋಹದಿಂದ ನಿಖಿಲ್‌ರನ್ನು ಚನ್ನಪಟ್ಟಣದಲ್ಲಿ ತಂದು ನಿಲ್ಲಿಸಿದ್ದಾರೆ. ಬಿಜೆಪಿ-ಜೆಡಿಎಸ್‌ನಿಂದ ಯೋಗೇಶ್ವರ್‌ಗೆ ಅನ್ಯಾಯವಾಗಿದೆ. ದೇವೇಗೌಡರಿಗೆ ಮೊಮ್ಮಗನ ಮೇಲೆ ವ್ಯಾಮೋಹ ಇಲ್ಲವೆಂದರೆ ಸಿಪಿವೈಗೆ ಟಿಕೆಟ್ ನೀಡಬೇಕಿತ್ತು ಎಂದರು.
ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ, ರಾಮಲಿಂಗ ರೆಡ್ಡಿ, ಚಲುವರಾಯಸ್ವಾಮಿ, ಜಮೀರ್ ಅಹಮದ್ ಖಾನ್, ಡಾ. ಸುಧಾಕರ್, ವೆಂಕಟೇಶ್, ಶಾಸಕರಾದ ಬಾಲಕೃಷ್ಣ, ಉದಯ್, ಪ್ರದೀಪ್ ಈಶ್ವರ್, ಡಾ. ರಂಗನಾಥ್, ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ಮಾಜಿ ಸಂಸದ ಡಿ.ಕೆ.ಸುರೇಶ್, ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ಇತರರು ಉಪಸ್ಥಿತರಿದ್ದರು ಬಹಿರಂಗ ಸಭೆಯನ್ನು ಸಿ.ಎಂ.ಸಿದ್ದರಾಮಯ್ಯ ಜನರತ್ತ ಕೈಬೀಸಿದರು.