ಸುಸಂಸ್ಕೃತ ಸಮಾಜ ಕಟ್ಟುವಲ್ಲಿ ಎಲ್ಲರ ಜವಾಬ್ದಾರಿ ಇದೆ. ಶಾಸ್ತ್ರೀಯ ಸಂಗೀತ ಮತ್ತು ಕಲಾವಿದರನ್ನು ಬೆಳೆಸಬೇಕಿದೆ. ಇದರ ಜತೆಗೆ ಉತ್ಕೃಷ್ಟ ಕೇಳುಗರನ್ನು ಸೃಷ್ಟಿಸಲು ಎಲ್ಲ ಸಹಕಾರ ಅಗತ್ಯವಿದೆ.
ಹುಬ್ಬಳ್ಳಿ:
ಪಾಲಕರು ತಮ್ಮ ಮಕ್ಕಳಿಗೆ ಚಿಕ್ಕಂದಿನಿಂದಲೇ ಸಂಗೀತದ ಅಭಿರುಚಿ ಬೆಳೆಸಬೇಕಿದೆ. ಇದರಿಂದ ಶಾಸ್ತ್ರೀಯ ಸಂಗೀತ ಮತ್ತು ಕಲಾವಿದರ ಸಂಖ್ಯೆ ಇನ್ನಷ್ಟು ಬೆಳೆಯಲು ಸಾಧ್ಯವಾಗಲಿದೆ ಎಂದು ಖ್ಯಾತ ಕೊಳಲು ವಾದಕ ಪ್ರವೀಣ ಗೋಡಖಿಂಡಿ ಹೇಳಿದರು.ಅವರು ಬುಧವಾರ ಇಲ್ಲಿನ ದೇಶಪಾಂಡೆ ನಗರದಲ್ಲಿರುವ ಸವಾಯಿ ಗಂಧರ್ವ ಸಭಾಂಗಣದಲ್ಲಿ ಸಿಂಫೋನಿ ಇನ್‌ಸ್ಟಿಟ್ಯೂಟ್ ಆಫ್ ಮ್ಯೂಸಿಕ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕೃಷ್ಣ ಹಾನಗಲ್ಲ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಸುಸಂಸ್ಕೃತ ಸಮಾಜ ಕಟ್ಟುವಲ್ಲಿ ಎಲ್ಲರ ಜವಾಬ್ದಾರಿ ಇದೆ. ಶಾಸ್ತ್ರೀಯ ಸಂಗೀತ ಮತ್ತು ಕಲಾವಿದರನ್ನು ಬೆಳೆಸಬೇಕಿದೆ. ಇದರ ಜತೆಗೆ ಉತ್ಕೃಷ್ಟ ಕೇಳುಗರನ್ನು ಸೃಷ್ಟಿಸಲು ಎಲ್ಲ ಸಹಕಾರ ಅಗತ್ಯವಿದೆ ಎಂದ ಅವರು, ನಿಜವಾಗಿಯೂ ಪ್ರಶಸ್ತಿ, ಗೌರವಗಳು ಸಲ್ಲಬೇಕಿರುವುದು ನನ್ನ ತಂದೆ ವೆಂಕಟೇಶ ಗೋಡಖಿಂಡಿ ಅವರಿಗೆ. ಧಾರವಾಡದ ಮಣ್ಣಿನಿಂದ ಬಂದ ಅಪ್ರತಿಮ ಕಲಾವಿದರು ಅವರು. 40 ವರ್ಷ ಸಾಧನೆ ಮಾಡಿದ ತಂದೆಯೇ ಗುರುಗಳಾಗಿ ನನಗೆ ಸಿಕ್ಕರು ಎಂದರು.ಪ್ರಶಸ್ತಿ ಪ್ರದಾನ ಮಾಡಿದ ಪಂ. ವೆಂಕಟೇಶ ಕುಮಾರ ಮಾತನಾಡಿ, ಪ್ರವೀಣ ಗೋಡಖಿಂಡಿ ಪ್ರತಿಭಾನ್ವಿತ ಕಲಾವಿದರು. ಭವಿಷ್ಯದಲ್ಲಿ ಅವರಿಗೆ ಪದ್ಮ ಪ್ರಶಸ್ತಿಗಳು ಸಿಗಲಿ ಎಂದು ಆಶಿಸಿದದರು.
ಹೆಸರು, ಅಧಿಕಾರ, ಹಣ ಬರುತ್ತದೆ, ಹೋಗುತ್ತದೆ. ಆದರೆ, ನಮ್ಮತನ ಬಿಡಬಾರದು. ಸಂಗೀತ ವಿದ್ಯಾರ್ಥಿಗಳು ಬರೀ ಸಂಗೀತ ಕಲಿಯಬಾರದು. ಗುರುಗಳಲ್ಲಿನ ಗುಣಗಳನ್ನು ಸಹ ಅಳವಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.ಉದಯಕುಮಾರ ಶಿರೂರಕರ, ಸೌಭಾಗ್ಯ ಕುಲಕರ್ಣಿ ಮಾತನಾಡಿದರು. ವೇದಿಕೆ ಕಾರ್ಯಕ್ರಮದ ಬಳಿಕ ಗೋಡಖಿಂಡಿ ಅವರಿಂದ ಕೊಳಲುವಾದನ ನಡೆಯಿತು. ಹೇಮಂತ್ ಜೋಶಿ ತಬಲಾ ಹಾಗೂ ಮಧು ಕುಲಕರ್ಣಿ ಕೊಳಲು ಸಾಥ್ ನೀಡಿದರು.