ಸಾರಾಂಶ
- 69ನೇ ಕನ್ನಡ ರಾಜ್ಯೋತ್ಸವದಲ್ಲಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಮನವಿ ।
- ಕರ್ನಾಟಕ ಸಾಧನೆಗೆ ವಿಶ್ವಮನ್ನಣೆ ಕನ್ನಡದ ಹೆಮ್ಮೆ- - - ಕನ್ನಡಪ್ರಭ ವಾರ್ತೆ ದಾವಣಗೆರೆ
ಎರಡೂವರೆ ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸ ಹೊಂದಿರುವ, ಕಾವೇರಿಯಿಂದ ಗೋದಾವರಿವರೆಗೆ ಹರಡಿದ್ದ ಕನ್ನಡವು ಶ್ರೀಮಂತ ಸಂಸ್ಕೃತಿಯ ಭಾಷೆಯಾಗಿದೆ ಎಂದು ಗಣಿ ಮತ್ತು ವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಹೇಳಿದರು.ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ ಹಮ್ಮಿಕೊಂಡಿದ್ದ 69ನೇ ಕನ್ನಡ ರಾಜ್ಯೋತ್ಸವದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಪಥ ಸಂಚಲನದಲ್ಲಿ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು. ಸಾಮ್ರಾಟ ಅಶೋಕ ಹಾಗೂ ಶಾತವಾಹನರ ಆಳ್ವಿಕೆಯಲ್ಲೂ ಕನ್ನಡ ಭಾಷೆ ಬಳಕೆ ಕಾಣಬಹುದು ಎಂದರು.
ಕನ್ನಡ ನೆಲದ ಮೊದಲ ರಾಜವಂಶವಾದ ಕದಂಬರಿಂದ ಹಿಡಿದು ಗಂಗರು, ಚಾಲುಕ್ಯ, ರಾಷ್ಟ್ರಕೂಟರು, ಹೊಯ್ಸಳರು, ವಿಜಯನಗರ ಸಾಮ್ರಾಜ್ಯ, ಮೈಸೂರು ಅರಸರ ಕಾಲದಲ್ಲಿ ಕನ್ನಡ ಭಾಷೆಯು ಸಾಹಿತ್ಯಿಕವಾಗಿ, ಜನಮನದ ಭಾಷೆಯಾಗಿ ಹುಲುಸಾಗಿ ಬೆಳೆದಿತ್ತು. ಇಡೀ ವಿಶ್ವಕ್ಕೆ ಆಡುಭಾಷೆಯ ವಚನಗಳನ್ನು ಕೊಟ್ಟ ಶ್ರೇಯಸ್ಸು ಕನ್ನಡ ಭಾಷೆಯದಾಗಿದೆ ಎಂದು ತಿಳಿಸಿದರು.ಐದು ದಶಕಗಳಲ್ಲಿ ರಾಜ್ಯದ ಬೆಳವಣಿಗೆ ಅವಲೋಕಿಸಿದರೆ ಆಡಳಿತ, ಸಂಸ್ಕೃತಿ, ಸಾಹಿತ್ಯ, ಶಿಕ್ಷಣ, ವಿಜ್ಞಾನ, ಲಲಿತಕಲೆ, ಜಾನಪದ, ಕೃಷಿ, ನೀರಾವರಿ, ಪ್ರವಾಸೋದ್ಯಮ, ವಿಜ್ಞಾನ, ತಂತ್ರಜ್ಞಾನ, ಕೈಗಾರಿಕೆ ಹೀಗೆ ಹತ್ತು ಹಲವಾರು ಕ್ಷೇತ್ರಗಳಲ್ಲಿ ಮಹತ್ತರ ಸಾಧನೆ ಮಾಡುವ ಮೂಲಕ ಅಂತರ ರಾಷ್ಟ್ರೀಯ ಮನ್ನಣೆ ಕರ್ನಾಟಕ ಪಡೆದಿದೆ ಎಂದರು.
ಕನ್ನಡ ನಾಡು ಹಲವು ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಈಗಿನ ಯುವಜನರಿಗೆ ಕರ್ನಾಟಕದ ಇತಿಹಾಸವು ಪ್ರೇರಣಾದಾಯಕವಾಗಿದೆ. ಪ್ರತಿಯೊಬ್ಬರೂ ಕನ್ನಡ ನಾಡಿನ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡು ರಚನಾತ್ಮಕ ಸಾಧನೆ ಮಾಡಬೇಕು. ಶ್ರೀಮಂತ ಭಾಷೆ, ಶ್ರೀಮಂತ ಸಂಸ್ಕೃತಿಯ ವಾರಸುದಾರರಾದ ವಿದ್ಯಾರ್ಥಿ, ಯುವಜನರು ಸೇರಿದಂತೆ ಪ್ರತಿಯೊಬ್ಬರೂ ಭಾಷಾಭಿಮಾನ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.ವಿವಿಧತೆಯಲ್ಲಿ ಏಕತೆ ಹೊಂದಿರುವ ಪುಣ್ಯಭೂಮಿ ನಮ್ಮದು. ಕರ್ನಾಟಕದ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಸರ್ವ ಜನಾಂಗದ ಶಾಂತಿಯ ತೋಟವೆಂದು ರಾಷ್ಟ್ರಕವಿ ಕುವೆಂಪು ಬಣ್ಣಿಸಿದ್ದಾರೆ. ಇಂತಹ ಸರ್ವ ಜನಾಂಗದ ಅಭಿವೃದ್ಧಿಗೂ ತಮ್ಮ ಸರ್ಕಾರ ಆದ್ಯತೆ ನೀಡಿದೆ. ರಾಜ್ಯೋತ್ಸವವು ಸಮಸ್ತ ಕನ್ನಡಿಗರ ಹಬ್ಬ, ಇದು ನಮ್ಮ ನಾಡು-ನುಡಿ, ಹಿರಿಮೆ-ಗರಿಮೆಗಳನ್ನು ಮೆಲುಕು ಹಾಕುವ ಸಾಂಸ್ಕೃತಿಕ ಉತ್ಸವ ಎಂದು ಅವರು ತಿಳಿಸಿದರು.
ಕರ್ನಾಟಕವು 1956ರಲ್ಲಿ ಏಕೀಕರಣಗೊಂಡಿತು. 1973ರಲ್ಲಿ ಮೈಸೂರು ರಾಜ್ಯವೆಂದು ಕರೆಯಲ್ಪಡುತ್ತಿದ್ದ ಕನ್ನಡ ನಾಡಿಗೆ ಕರ್ನಾಟಕವೆಂದು ಮರುನಾಮಕರಣ ಮಾಡಲಾಯಿತು. ಐದು ದಶಕ ಪೂರೈಸಿರುವ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಕಚೇರಿಗಳ ಆವರಣದಲ್ಲಿ ಕರ್ನಾಟಕದ ಮೊದಲ ಶಾಸನ ಹಲ್ಮಿಡಿ ಶಿಲಾ ಶಾಸನದ ಮೊದಲ ಪ್ರತಿಕೃತಿ ಪ್ರತಿಷ್ಟಾಪಿಸಿದೆ. ದಾವಣಗೆರೆ ಜಿಲ್ಲಾಡಳಿತ ಭವನದಲ್ಲೂ ಹಲ್ಮಿಡಿ ಶಾಸನ ಪ್ರತಿಕೃತಿ ಇದೆ ಎಂದು ಸಚಿವರು ಮಾಹಿತಿ ನೀಡಿದರು.ಕರ್ನಾಟಕವೆಂದು ನಾಮಕರಣಗೊಂಡ ಸುವರ್ಣ ಸಂಭ್ರಮದ ಅಂಗವಾಗಿ ನಾಡಿನಾದ್ಯಂತ ಹಲವಾರು ಕನ್ನಡ ಪರ ಕಾರ್ಯಕ್ರಮಗಳನ್ನು ಸರ್ಕಾರ ಏರ್ಪಡಿಸುತ್ತಿದೆ. ದಾವಣಗೆರೆ ನಗರದ ಗಾಜಿನ ಮನೆಯ ಆವರಣದಲ್ಲಿ ನವೆಂಬರ್ ತಿಂಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ನಗರ, ಜಿಲ್ಲೆಯ ಪ್ರತಿಯೊಬ್ಬರೂ ಸ್ವಯಂ ಪ್ರೇರಿತರಾಗಿ ನವೆಂಬರ್ ತಿಂಗಳಿಡೀ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗಿಯಾಗಬೇಕು ಎಂದು ಎಸ್.ಎಸ್.ಮಲ್ಲಿಕಾರ್ಜುನ ಮನವಿ ಮಾಡಿದರು.
ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಮಾಯಕೊಂಡ ಶಾಸಕ ಕೆ.ಚಮನ್ ಸಾಬ್, ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ, ಉಪ ಮೇಯರ್ ಶಾಂತಕುಮಾರ ಸೋಗಿ, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಜಿಪಂ ಸಿಇಓ ಸುರೇಶ ಬಿ.ಇಟ್ನಾಳ್, ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ, ಅಪರ ಡಿಸಿ ಪಿ.ಎನ್.ಲೋಕೇ, ಪಾಲಿಕೆ ಆಯುಕ್ತೆ ರೇಣುಕಾ, ದೂಡಾ ಆಯುಕ್ತ ಹುಲ್ಮನಿ ತಿಮ್ಮಪ್ಪ, ತಹಸೀಲ್ದಾರ್ ಅಶ್ವತ್ಥ್, ಇತರೆ ಗಣ್ಯರು, ಜನ ಪ್ರತಿನಿಧಿಗಳು ಇದ್ದರು.- - -
ಬಾಕ್ಸ್-1 * ಆಕರ್ಷಕ ಪಥ ಸಂಚಲನ ಒಟ್ಟು 15 ವಿವಿಧ ತುಕಡಿಗಳು ಶಿಸ್ತಿನ ಮತ್ತು ಆಕರ್ಷಕ ಪಥ ಸಂಚಲನದಲ್ಲಿ ಪ್ಲಟೂನ್ ಕಮಾಂಡರ್ ಸಮೇತ ಪಾಲ್ಗೊಂಡವು. ಮಹೇಶ್ ಪಾಟೀಲ್ ನೇತೃತ್ವದ ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಸಾಗರ್ ಅತರವಾಲ್ ನಗರ ಪೊಲೀಸ್ ತಂಡ, ಅಮರೇಶ್ ಗೃಹ ರಕ್ಷಕದಳ, ಟಿ.ಆರ್.ಪರಶುರಾಮಪ್ಪ ಜಿಲ್ಲಾ ಅಗ್ನಿಶಾಮಕ ದಳ, ಎ.ಆರ್.ಜಿ ಶಾಲೆಯ ಚಿನ್ಮಯಿ, ಜಿಎಫ್‍ಜಿಸಿ ಎನ್.ಸಿ.ಸಿ. ಕೆಡೆಟ್ಸ್ ಜಿ.ಬಸವರಾಜ, ಎವಿಕೆ ಕಾಲೇಜಿನ ಎನ್.ಸಿ.ಸಿ. ಕುಮಾರಿ ತರುಣಾ ರಮೇಶ್ ಒಡೆಯರ್, ಸೇಂಟ್ ಪಾಲ್ಸ್ ಸ್ಕೂಲ್ ಎನ್.ಸಿ.ಸಿ. ಚಂದನ, ಭಾರತ ಸೇವಾದಳ ಆರ್.ಎಂ.ಎಸ್.ಎ.ನ ಎಂ.ಐಶ್ವರ್ಯ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಡಿ.ಸಿ. ಮಾನಸ, ಸಿದ್ಧಗಂಗಾ ಹೈಸ್ಕೂಲ್ ವಿಭಾಗದಿಂದ ರೋಷಿಣಿ, ತರಳುಬಾಳು ಹೈಸ್ಕೂಲ್‍ನಿಂದ ವೈ.ದೀಪಾ, ಸಿದ್ಧಗಂಗಾ ಪ್ರೈಮರಿ ಸ್ಕೂಲ್ ವಿಭಾಗದಿಂದ ಮಧುಪ್ರಿಯ, ಸರ್ಕಾರಿ ಬಾಲಕರ ಹೈಸ್ಕೂಲ್ ವಿಭಾಗದಿಂದ ಓಂಕಾರ್ ಈ.ಯು., ಸೆಂಟ್ ಜಾನ್ಸ್ ಹೈಸ್ಕೂಲ್‌ನ ಗೀತಾಂಜಲಿ ಮತ್ತು ಡಿಎಆರ್ ಬ್ಯಾಂಡ್ ಮಾಸ್ಟರ್ ಹೊನ್ನೂರಪ್ಪ ವಾದ್ಯ ತಂಡ ಭಾಗವಹಿಸಿದ್ದವು.- - -
ಬಾಕ್ಸ್-2* ವಿವಿಧ ಕ್ಷೇತ್ರಗಳ 33 ಸಾಧಕರಿಗೆ ಸನ್ಮಾನಕನ್ನಡ ರಾಜ್ಯೋತ್ಸವ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 33 ಗಣ್ಯರನ್ನು ಇದೇ ಸಂದರ್ಭದಲ್ಲಿ ಸ್ಮರಣಿಕೆ ನೀಡಿ ಸನ್ಮಾನಿಸಿ, ಗೌರವಿಸಲಾಯಿತು. ನಿಟ್ಟುವಳ್ಳಿಯ ಟಿ.ಶ್ರೀನಿವಾಸ್ ಶಿಲ್ಪಕಲೆ, ದಾವಣಗೆರೆ ಮೇಘಾಚಾರಿ.ವಿ., ನಗರದ ಬಂಬೂ ಬಜಾರ್ ಕೆ.ಆರ್. ಮೌನೇಶ್ವರ್ ಶಿಲ್ಪಿ, ಇವರುಗಳು ಶಿಲ್ಪಕಲೆ ಕ್ಷೇತ್ರ, ಜಗಳೂರಿನ ಟಿ.ಬಸವರಾಜು, ಚನ್ನಗಿರಿಯ ಎ.ಎನ್ ಶಶಿಕಿರಣ, ದಾವಣಗೆರೆಯ ಎಂ.ಬಸಣ್ಣ ಸಂಗೀತ ಕ್ಷೇತ್ರ, ಮಾಯಕೊಂಡ ಪೀರಿಬಾಯಿ ಕೋಂ ಉಮ್ಲನಾಯ್ಕ, ಹರಿಹರದ ಎಚ್.ಪಿ. ನಾಗೇಂದ್ರಪ್ಪ, ಗುತ್ತೂರಿನ ಎಸ್.ಕೆ.ವೀರೇಶಕುಮಾರ್, ದಾವಣಗೆರೆ ಶೇಖರಪ್ಪ ನಗರದ ಪಿ.ಮೀನಾಕ್ಷಿ ಜಾನಪದ ಕ್ಷೇತ್ರ, ದಾವಣಗೆರೆಯ ಎ.ಎಂ. ಪ್ರಕಾಶ್ ಮುದ್ರಣಾ ಕ್ಷೇತ್ರ, ವಿನೋಬ ನಗರದ ಎಂ. ಮನು ಮತ್ತು ಹೊನ್ನಾಳಿಯ ಬಿ.ತಿಮ್ಮನಗೌಡ ಸಂಕೀರ್ಣ ಕ್ಷೇತ್ರದಲ್ಲಿ ಸನ್ಮನಿತರಾದರು.ನಿಜಲಿಂಗಪ್ಪ ಬಡಾವಣೆಯ ಶ್ರೀನಾಥ ಪಿ. ಅಗಡಿ ಛಾಯಾಗ್ರಹಣ, ಜಾಲಿ ನಗರದ ಎಸ್.ಪಿ. ಲಾವಣ್ಯ ಶ್ರೀಧರ್ ಯೋಗ, ಜಗಳೂರಿನ ಬಡಪ್ಪ ಬಯಲಾಟ, ಯಲ್ಲಮ್ಮ ನಗರದ ವಿನಾಯಕ ನಾಕೋಡ, ಎಸ್.ಎಂ. ಕೃಷ್ಣ ನಗರದ ಕೆ.ಎಸ್.ಕೊಟ್ರೇಶ್ ರಂಗಭೂಮಿ ಕ್ಷೇತ್ರ, ಜಗಳೂರು ತಾಲೂಕಿನ ದೊಣ್ಣೆಹಳ್ಳಿ ಗ್ರಾಮದ ಎಸ್.ವಿ. ವಿಶ್ವನಾಥ ಬಯಲಾಟ, ದೊಡ್ಡಾಟ, ನಿಜಲಿಂಗಪ್ಪ ಬಡಾವಣೆಯ ಎ.ಜೆ.ರವಿಕುಮಾರ, ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್. ಅರುಣಕುಮಾರ ಸಮಾಜ ಸೇವೆಗಾಗಿ ಸನ್ಮಾನಿತರಾದರು.
ಮಲೇಬೆನ್ನೂರಿನ ಕನ್ನಡಪ್ರಭ ವರದಿಗಾರ ಸದಾನಂದ, ವಿಜಯವಾಣಿ ಸ್ಥಾನಿಕ ಸಂಪಾದಕ ಎಂ.ಬಿ.ನವೀನ, ಪಬ್ಲಿಕ್ ಟೀವಿ ಕ್ಯಾಮೆರಾಮನ್ ಎಚ್.ಟಿ. ಪರಶುರಾಮ, ಜನತಾವಾಣಿ ಹಿರಿಯ ವರದಿಗಾರ ಒ.ಎನ್. ಸಿದ್ದಯ್ಯ ಒಡೆಯರ್, ಆಕಾಶವಾಣಿಯ ಕೆ.ಎಸ್ ಚನ್ನಬಸಪ್ಪ (ಶಂಭು), ಪತ್ರಿಕಾ ವಿತರಕ ಎಂ.ಎಸ್. ಮಂಜುನಾಥ ಅವರನ್ನು ಮಾಧ್ಯಮ ಕ್ಷೇತ್ರದ ಸೇವೆಗಾಗಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಗೌರವಿಸಿದರು.ವಿನೋಬ ನಗರದ ಸಂತೋಷ ದೊಡ್ಮನಿ, ಬಿ.ಎಸ್. ಶುಭಮಂಗಳ, ನಾಗರಾಜ ಜಮ್ನಳ್ಳಿ, ಚನ್ನಗಿರಿ ಎಲ್.ಜಿ. ಮಧುಕುಮಾರರನ್ನು ಕನ್ನಡಪರ ಹೋರಾಟಕ್ಕಾಗಿ, ಚನ್ನಗಿರಿ ತಾಲೂಕಿನ ಸಂತೆಬೆನ್ನೂರಿನ ಕೆ.ಸಿದ್ದಲಿಂಗಪ್ಪ ಸಾಹಿತ್ಯ ಕ್ಷೇತ್ರ, ಕುಕ್ಕವಾಡ ಗ್ರಾಮದ ಕೆ.ಟಿ. ಚಂದ್ರಶೇಖರಪ್ಪ ಕೃಷಿ ಕ್ಷೇತ್ರದಲ್ಲಿನ ಸಾಧನೆಗಾಗಿ ಸನ್ಮಾನಿಸಲಾಯಿತು.
- - - ಬಾಕ್ಸ್-3 * ತಾಯಿ ಭುವನೇಶ್ವರಿ ಮೆರವಣಿಗೆರಾಜ್ಯೋತ್ಸವ ಅಂಗವಾಗಿ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಕನ್ನಡತಾಯಿ ಶ್ರೀ ಭುವನೇಶ್ವರಿ ಪ್ರತಿಮೆಗೆ ಪುಷ್ಪನಮನ ಸಲ್ಲಿಸುವ ಮೂಲಕ ಕಲಾ ತಂಡಗಳೊಂದಿಗೆ ವಿವಿಧ ಸ್ತಬ್ಧಚಿತ್ರಗಳೊಂದಿಗೆ ಮೆರವಣಿಗೆಗೆ ಚಾಲನೆ ನೀಡಿದರು. ಅಲ್ಲಿಂದ ಮೆರವಣಿಗೆಯು ಕಲಾತಂಡಗಳೊಂದಿಗೆ ಸಮಾರಂಭ ಸ್ಥಳವಾದ ಜಿಲ್ಲಾ ಕ್ರೀಡಾಂಗಣವನ್ನು ತಲುಪಿತು.ನಿಟ್ಟುವಳ್ಳಿಯ ನಿಂಚನ ಪಬ್ಲಿಕ್ ಶಾಲೆ, ನಿಜಲಿಂಗಪ್ಪ ಬಡಾವಣೆ ಗುರುಕುಲ ಪಬ್ಲಿಕ್ ಶಾಲೆ, ಶಾಮನೂರು ಜೈನ್ ವಿದ್ಯಾಲಯ ಸಿಬಿಎಸ್‍ಇ ಶಾಲೆಯ ವಿದ್ಯಾರ್ಥಿಗಳು ಕನ್ನಡ ರಾಜ್ಯೋತ್ಸವದ ಕನ್ನಡ ಹಾಡುಗಳಿಗೆ ಹೆಜ್ಜೆ ಹಾಕಿದರು. ಕೊಡಗನೂರು ನಾಗರಾಜ್ ಅವರು ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು ಗೀತೆಗೆ ಹೆಜ್ಜೆ ಹಾಕಿದರು.
- - -ಬಾಕ್ಸ್-4* ಪಥಸಂಚಲನ: ಪ್ರಶಸ್ತಿ ಪುರಸ್ಕೃತ ತಂಡಗಳು
ದಾವಣಗೆರೆ: ರಾಜ್ಯೋತ್ಸವ ಅಂಗವಾಗಿ ಪಥ ಸಂಚಲನ ನಡೆದಿದ್ದು, ವಿವಿಧ ತಂಡಗಳು ಪ್ರಶಸ್ತಿಗೆ ಭಾಜನವಾಗಿವೆ.ಡಿಎಆರ್.ತಂಡ ಪ್ರಥಮ, ಗೃಹರಕ್ಷಕ ದಳ ದ್ವಿತೀಯ, ನಗರ ಉಪ ವಿಭಾಗದ ಪೊಲೀಸ್ ತಂಡ ತೃತೀಯ, ಎನ್‌ಸಿಸಿ ತಂಡದ ವಿಭಾಗದಿಂದ ಎ.ಆರ್.ಜಿ, ಕಾಲೇಜು ತಂಡ ಪ್ರಥಮ, ಜಿಎಫ್‍ಜಿಸಿ ಕಾಲೇಜು ದ್ವಿತೀಯ, ಎ.ವಿ.ಕೆ. ಮಹಿಳಾ ಕಾಲೇಜು ತಂಡ ತೃತೀಯ ಸ್ಥಾನ ಪಡೆದವು. ಹೈಸ್ಕೂಲ್ ತಂಡಗಳ ವಿಭಾಗದಲ್ಲಿ ಭಾರತ ಸೇವಾದಳ ಪ್ರಥಮ, ಸೆಂಟ್ ಜಾನ್ಸ್ ಹೈಸ್ಕೂಲ್ ಬಾಲಕಿಯರು ದ್ವಿತೀಯ ಸರ್ಕಾರಿ ಬಾಲಕರ ಹೈಸ್ಕೂಲ್ ತಂಡ ತೃತೀಯ ಸ್ಥಾನ ಪಡೆದಿದೆ.ಪ್ರೈಮರಿ ತಂಡಗಳ ವಿಭಾಗದಲ್ಲಿ ಪ್ರಥಮ ಸಿದ್ದಗಂಗಾ ಪ್ರಾಥಮಿಕ ಶಾಲೆ, ಮತ್ತು ವಿಶೇಷ ತಂಡ ಪ್ರಥಮ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಡಿಸ್ಟ್ರಿಕ್ ಟ್ರೂಪ್ ಗರ್ಲ್ಸ್ ತಂಡ ಮತ್ತು ಜಿಲ್ಲಾ ಪೊಲೀಸ್ ವಾದ್ಯವೃಂದ ತಂಡಗಳು ಬಹುಮಾನ ಪಡೆದವು. ಸಾಂಸ್ಕೃತಿಕ ನೃತ್ಯ: ಪ್ರಥಮ ನಿಜಲಿಂಗಪ್ಪ ಬಡಾವಣೆಯ ಗುರುಕುಲ ಪಬ್ಲಿಕ್ ಶಾಲೆ, ದ್ವಿತೀಯ ಶಾಮನೂರು ಜೈನ್ ವಿದ್ಯಾಲಯ ಸಿಬಿಎಸ್‍ಇ ಶಾಲೆ, ತೃತೀಯ ನಗರದ ನಿಟ್ಟುವಳ್ಳಿಯ ನಿಂಚನ ಪಬ್ಲಿಕ್ ಶಾಲೆ ಬಹುಮಾನ ಪಡೆದವು.
ಹಲ್ಮಿಡಿ ಶಾಸನ ಸ್ಥಾಪನೆ; ಮೊಟ್ಟ ಮೊದಲ ಹಲ್ಮಿಡಿ ಶಾಸನದ ಪ್ರತಿಕೃತಿಯನ್ನು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಷ್ಟಾಪಿಸಲಾಯಿತು. ಈ ವೇಳೆ ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ ಭಾಗವಹಿಸಿ ನೆರವೇರಿಸಿದರು.- - -