ಸಂವಾದ ಕಾರ್ಯಕ್ರಮದಲ್ಲಿ ರಷ್ಯನ್ ಗಗನಯಾತ್ರಿಗಳನ್ನು ಅಬಿನಂದಿಸಲಾಯಿತು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಭೂಮಿಯನ್ನು ಹೊರತಾದ ಗ್ರಹದಲ್ಲೂ ಜೀವಿಗಳು ವಾಸಿಸುತ್ತಿರುವ ಸಾಧ್ಯತೆ ಇದೆ. ಈ ಬಗ್ಗೆ ಹೆಚ್ಚಿನ ಅಧ್ಯಯನಗಳು ನಡೆಯಬೇಕಾಗಿದೆ. ಹಾಗಾಗಿ ಆಸಕ್ತಿಯುಳ್ಳ ವಿದ್ಯಾರ್ಥಿಗಳು ಹೆಚ್ಚಿಸ ಸಂಖ್ಯೆಯಲ್ಲಿ ಬಾಹ್ಯಾಕಾಶ ಕ್ಷೇತ್ರದ ಅಧ್ಯಯನಕ್ಕೆ ಬರಬೇಕು ಎಂದು ರಷ್ಯನ್ ಗಗನಯಾತ್ರಿ ಡೆನಿಸ್ ಮಟ್ವೀವ್ ಕರೆ ನೀಡಿದರು.ಡಾ.ಮನಮೋಹನ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯದ ಜಾಗತಿಕ ಭಾಷೆಗಳ ಕೇಂದ್ರವು ‘ರಷ್ಯನ್ ಹೌಸ್’ ಸಹಯೋಗದಲ್ಲಿ ಶುಕ್ರವಾರ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ ‘ರಷ್ಯನ್ ಗಗನಯಾತ್ರಿಯೊಂದಿಗೆ ಸಂವಾದ’ ದಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಮಾನವ ದೇಹದ ಮೇಲೆ ಗುರುತ್ವಾಕರ್ಷಣೆ ಬಲದ ಪರಿಣಾಮಗಳು, ಅನ್ಯಗ್ರಹ ಜೀವಿಗಳು ಸೇರಿ ಬಾಹ್ಯಾಕಾಶ ಕ್ಷೇತ್ರಕ್ಕೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಿದರು. ಇದಕ್ಕೆ ತಮ್ಮ ಅನುಭವದ ಆಧಾರದಲ್ಲಿ ಹಾಗೂ ವಿವಿಧ ಅಧ್ಯಯನ, ಸಂಶೋಧನೆಗಳನ್ನು ಉಲ್ಲೇಖಿಸಿ ಅವರು ಉತ್ತರ ನೀಡಿದರು.
ರಷ್ಯನ್ ಅಕಾಡೆಮಿ ಆಫ್ ಸೈನ್ಸಸ್‌ನ ಹೈಪೋಕೈನೆಟಿಕ್ ಇಂಪ್ಯಾಕ್ಟ್‌ನ ಶಾರೀರಿಕ ಪರಿಣಾಮಗಳ ಪ್ರಯೋಗಾಲಯದ ಮುಖ್ಯಸ್ಥರಾದ ಅಲೆಕ್ಸಿ ಶಪಕೋವ್ ಮಾತನಾಡಿ, ಬಾಹ್ಯಾಕಾಶ ಕ್ಷೇತ್ರ ಗಡಿ, ಮಿತಿಗಳಿಲ್ಲದ ಅನಂತವಾದ ಪ್ರಪಂಚ. ವಿದ್ಯಾರ್ಥಿಗಳು ಭೌಗೋಳಿಕ ಮತ್ತು ಸಾಂಸ್ಕೃತಿಕ ಮಿತಿಗಳನ್ನು ಮೀರಿ ಯೋಚಿಸುವ ಪ್ರಾವೀಣ್ಯತೆ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಕುಲಪತಿ ಪ್ರೊ. ರಮೇಶ್ ಬಿ., ಜಾಗತಿಕ ಭಾಷೆಗಳ ಕೇಂದ್ರದ ನಿರ್ದೇಶಕಿ ಡಾ. ಜ್ಯೋತಿ ವೆಂಕಟೇಶ್ ಹಾಗೂ ವಿವಿಯ ಇತರೆ ಅಧಿಕಾರಿಗಳು ಇದ್ದರು.