ಅಂತಾರಾಷ್ಟ್ರೀಯ ಮಟ್ಟಕ್ಕೆ ಜನಪದ ಸಾಹಿತ್ಯ ಬೆಳೆಸಿ

| Published : Oct 27 2024, 02:05 AM IST

ಅಂತಾರಾಷ್ಟ್ರೀಯ ಮಟ್ಟಕ್ಕೆ ಜನಪದ ಸಾಹಿತ್ಯ ಬೆಳೆಸಿ
Share this Article
  • FB
  • TW
  • Linkdin
  • Email

ಸಾರಾಂಶ

ದಾವಣಗೆರೆಯಲ್ಲಿ ಶನಿವಾರ ಯುಗಧರ್ಮ ಪ್ರತಿಷ್ಟಾನ ಸಿದ್ಧನಮಠ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದಿಂದ ನಡೆದ ಕಾರ್ಯಕ್ರಮದಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ. ಜಗಳೂರು ಶಾಸಕ ಬಿ.ದೇವೇಂದ್ರಪ್ಪ ಇತರರು ಗಣ್ಯರು ಯುಗಧರ್ಮ ಪ್ರತಿಷ್ಟಾನ ಉದ್ಘಾಟನೆ ಹಾಗೂ ಯುಗಧರ್ಮ ರಾಮಣ್ಣ ವಿರಚಿತ ಆರು ಕೃತಿಗಳ ಲೋಕಾರ್ಪಣೆ ಮಾಡಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಆಡುಭಾಷೆಯಲ್ಲೇ ಬದುಕಿನ ಮರ್ಮವನ್ನು ಹೇಳುವುದು ಅಷ್ಟು ಸುಲಭವಲ್ಲ. ಆ ಶಕ್ತಿ ಇರುವುದು ಜನಪದ ಸಾಹಿತ್ಯಕ್ಕೆ ಮಾತ್ರ. ಅಂತಹ ಜನಪದ ಸಾಹಿತ್ಯವನ್ನು ಉಳಿಸಿ, ಬೆಳೆಸುವ ಕೆಲಸ ಆಗಬೇಕಾಗಿದೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದರು.

ನಗರದ ಕುವೆಂಪು ಕನ್ನಡ ಭವನದಲ್ಲಿ ಶನಿವಾರ ಯುಗಧರ್ಮ ಪ್ರತಿಷ್ಠಾನ ಸಿದ್ಧನಮಠ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದಿಂದ ಯುಗಧರ್ಮ ಪ್ರತಿಷ್ಟಾನ ಉದ್ಘಾಟನೆ ಹಾಗೂ ಯುಗಧರ್ಮ ರಾಮಣ್ಣ ವಿರಚಿತ ಆರು ಕೃತಿಗಳ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು. ಹಳ್ಳಿಗಳ ಹೃದಯವಾದ ಜನಪದ ಸಾಹಿತ್ಯವನ್ನು ಉಳಿಸಿ, ಬೆಳೆಸುವ ಜೊತೆಗೆ ಮುಂದಿನ ಪೀಳಿಗೆಗೂ ತಲುಪಿಸಬೇಕಿದೆ ಎಂದರು.

ಜನಪದ ಸಾಹಿತ್ಯವನ್ನು ರಾಜ್ಯವಷ್ಟೇ ಅಲ್ಲ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಬೆಳೆಸಲು ಯುವ ಜನತೆ ಕೈ ಜೋಡಿಸಬೇಕು. ಗಣೇಶ ಚತುರ್ಥಿ ಹಬ್ಬದ ವೇಳೆಯಂತೂ ಡಿಜೆ ಸೌಂಡ್‌ಗಳದ್ದೇ ಸದ್ದು ಹೆಚ್ಚಾಗಿತ್ತು. ಹಿಂದೆಲ್ಲಾ ಗಣೇಶ ತಂದು, ವಿಸರ್ಜನೆ ಮಾಡಲು ಕಾಲ, ಮುಹೂರ್ತ ನೋಡಿಕೊಂಡು, ಶ್ರದ್ಧಾ-ಭಕ್ತಿಯಿಂದ ಸಂಪ್ರದಾಯ ಪಾಲಿಸಲಾಗುತ್ತಿತ್ತು. ಆದರೆ, ಈಗ ಕಾಲ, ಮುಹೂರ್ತಕ್ಕಿಂತಲೂ ಮುಖ್ಯವಾಗಿ ಡಿಜೆ ಸದ್ದಿನ ವ್ಯವಸ್ಥೆಗಳು ಯಾವಾಗ ಲಭ್ಯವಿರುತ್ತವೋ ಆಗ ಗಣೇಶ ವಿಸರ್ಜನೆ ಮಾಡುತ್ತಿರುವುದು ಬೇಸರದ ಸಂಗತಿ. ಡಿ.ಜೆ.ಗಳಲ್ಲಿ ಭಕ್ತಿಗೀತೆಗಳನ್ನು ಹೊರತುಪಡಿಸಿ, ಇತರೆ ಹಾಡುಗಳನ್ನು ಹಾಕಿಕೊಂಡು, ನೃತ್ಯ ಮಾಡುವುದು ಸರಿಯಲ್ಲ ಎಂದು ಡಾ.ಪ್ರಭಾ ಹೇಳಿದರು.

ಜಗಳೂರು ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ, ಯುಗಧರ್ಮ ರಾಮಣ್ಣ ಜನಪದ ಸಂಸ್ಕೃತಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಶಬ್ಧ ಮಾಡುತ್ತಲೇ ಪದಗಳನ್ನು ಕಟ್ಟಿ ಹಾಡುವ ರಾಮಣ್ಣನವರ ಹಾಡಿನ ತಾತ್ಪರ್ಯ ಅರಿತರೆ ಬದುಕು ಸಹ ಸರಿದಾರಿಯಲ್ಲೇ ಸಾಗುತ್ತದೆ. ಈಗ ಮೊಬೈಲ್‌, ಫೇಸ್‌ಬುಕ್‌, ವಾಟ್ಸಪ್ ಅಂತೆಲ್ಲಾ ಸೋಷಿಯಲ್ ಮೀಡಿಯಾಗಳ ಹಿಂದೆ ಬಿದ್ದು ಯುವಜನರು ಸಮಯ ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ. ಅದರ ಬದಲು ಜನಪದ ಸಾಹಿತ್ಯ ಓದಿದರೆ, ಬದುಕಿಕೊಂದು ಅರ್ಥ ಸಿಗುತ್ತದೆ. ಮೌಲ್ಯಗಳೇ ಇಲ್ಲದಂತೆ ಬಾಳುತ್ತಿರುವವರಿಗೆ ಬದುಕಿನ ಮೌಲ್ಯ ತಿಳಿಯುತ್ತದೆ ಎಂದರು.

ಪ್ರತಿಷ್ಟಾನದ ಅಧ್ಯಕ್ಷ, ಚಿತ್ರ ನಿರ್ದೇಶಕ ಹಾಗೂ ನಟ ಡಾ.ರಾಧಾಕೃಷ್ಣ ಪಲ್ಲಕ್ಕಿ ಮಾತನಾಡಿ, ಜನಪದ ಕೇಳಲು ಸುಲಭ. ಆದರೆ, ಅದರ ಸಾಹಿತ್ಯದ ಗೂಢಾರ್ಥ ತಿಳಿದಾಗ ಮನಸ್ಸನ್ನು ವಿಭಿನ್ನ ಚಿಂತನೆಯೊಂದಿಗೆ ನಿಶ್ಯಬ್ಧ ಸ್ಥಿತಿಗೆ ತಲುಪುವಂತೆ ಮಾಡುತ್ತದೆ. ಜನಪದ ಸಾಹಿತ್ಯ ಬದುಕಿನ ದಿಕ್ಕನ್ನೇ ಬದಲಿಸಿ, ಹೊಸ ದಿಕ್ಕಿನತ್ತ ಮುಖ ಮಾಡುವಂತೆ ಮಾಡುತ್ತದೆ. ಜನಪದ ಸಾಹಿತ್ಯವನ್ನು ಉಳಿಸಿ, ಮುಂದಿನ ಪೀಳಿಗೆಗೆ ತಲುಪಿಸಲು ಮಾತ್ರವಲ್ಲದೇ, ಈಗಿನ ಜನಾಂಗದ ತಲೆಯ ಕಸ ಸ್ವಚ್ಛಗೊಳಿಸುವ ಉದ್ದೇಶದಿಂದ ಯುಗಧರ್ಮ ಪ್ರತಿಷ್ಟಾನ ಸ್ಥಾಪಿಸಲಾಗಿದೆ ಎಂದು ಹೇಳಿದರು.

ಅರ್ಥಶಾಸ್ತ್ರಜ್ಞ ಡಾ. ಜಿ.ಎನ್. ಮಲ್ಲಿಕಾರ್ಜುನಪ್ಪ, ಕುವೆಂಪು ವಿವಿಯ ಪ್ರೊ.ಜಗನ್ನಾಥ ಕೆ. ಡಾಂಗೆ, ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್, ನಿವೃತ್ತ ಪ್ರಾಚಾರ್ಯ, ಸಾಹಿತಿ ಡಾ.ದಾದಾಪೀರ್ ನವಿಲೇಹಾಳ್ ಯುಗಧರ್ಮ ರಾಮಣ್ಣನವರ ಕೃತಿಗಳ ಬಗ್ಗೆ ಮಾತನಾಡಿದರು. ಪ್ರತಿಷ್ಠಾನದ ಪ್ರಥಮ ವರ್ಷದ ಯುಗಧರ್ಮ ಪ್ರಶಸ್ತಿಯನ್ನು ಚಿಕ್ಕಜಾಜೂರಿನ ವರದಿಗಾರ ಎಸ್‌.ಎಂ.ಆರ್. ಮಹೇಂದ್ರಪ್ಪ ಅವರಿಗೆ ನೀಡಿ, ಗೌರವಿಸಲಾಯಿತು.

ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ಅಧ್ಯಕ್ಷತೆ ವಹಿಸಿದ್ದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುಗಧರ್ಮ ರಾಮಣ್ಣ, ಕನ್ನಡ ಮತ್ತು ಸಂಸ್ಕೃತಿ ಸಹಾಯಕ ನಿರ್ದೇಶಕ ರವಿಚಂದ್ರ, ಪ್ರತಿಷ್ಟಾನದ ಕಾರ್ಯದರ್ಶಿ ನವೀನ್ ಚನ್ನಗಿರಿ ಇತರರು ಇದ್ದರು.

*ಜನಪದ ಸಾಹಿತ್ಯ ಪ್ರೋತ್ಸಾಹಿಸಿ

ಮುಂಬರುವ ಯಾವುದೇ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಡಿಜೆ ಸೌಂಡ್‌ಗಳನ್ನು ಬದಿಗೊತ್ತಿ, ಮನುಷ್ಯ ಸಂಕುಲಕ್ಕೆ ಉತ್ತಮ ದಾರಿ ತೋರುವ ಜನಪದ ಸಾಹಿತ್ಯ, ಜನಪದ ಕಲೆಗಳಿಗೆ ವೇದಿಕೆಗಳನ್ನು ಕಲ್ಪಿಸಿ, ಪ್ರೋತ್ಸಾಹಿಸಬೇಕು. ಈ ಮೂಲಕ ಜನಪದ ಸಂಸ್ಕೃತಿಯನ್ನು ಉಳಿಸಿ, ಬೆಳೆಸಬೇಕು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಯುಗಧರ್ಮ ರಾಮಣ್ಣನವರು ಕಲೆ, ಜನಪದ ಸಾಹಿತ್ಯಕ್ಕೆ ಸಾಕಷ್ಟು ಕೊಡುಗೆ ನೀಡುತ್ತಿದ್ದಾರೆ. ಆಡುಭಾಷೆಯ ಜನಪದ ಸಾಹಿತ್ಯದ ಮೂಲಕ ಜನಜಾಗೃತಿಗೆ ಶ್ರಮಿಸುತ್ತಿದ್ದಾರೆ ಎಂದು ಅವರು ಶ್ಲಾಘಿಸಿದರು.