ಧಾರವಾಡ:
ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಸಾಹಿತ್ಯಿಕ ಮತ್ತು ವಿಮರ್ಶಾತ್ಮಕ ಚಿಂತನೆ ಬೆಳೆಸುವತ್ತ ಗಮನ ಹರಿಸಬೇಕೆಂದು ಗೋವಾ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕ ಪ್ರೊ. ಕೆ. ಶ್ರೀಪಾದ ಭಟ್ ಹೇಳಿದರು.ಕರ್ನಾಟಕ ವಿವಿಯ ಮಾಳವೀಯ ಮಿಷನ್ ಟೀಚರ್ ಟ್ರೇನಿಂಗ್ ಸೆಂಟರ್ ಆಯೋಜಿಸಿದ್ದ ಇಂಗ್ಲಿಷ್ ಪ್ರಾಧ್ಯಾಪಕರ ಹನ್ನೆರಡು ದಿನಗಳ ಆನ್‌ಲೈನ್ ಪುನಃಶ್ಚೇತನ ಕಾರ್ಯಾಗಾರದ ಉದ್ಘಾಟನೆ ನೆರವೇರಿಸಿದ ಅವರು, ಶಿಕ್ಷಕರು ಉತ್ತಮ ಮಾನವೀಯ ಗುಣ, ಮೌಲ್ಯ ಅಳವಡಿಸಿಕೊಂಡು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಜವಾಬ್ದಾರಿ ಹೊರಬೇಕು. ಸಾಹಿತ್ಯ ಮತ್ತು ಇತಿಹಾಸ ಬೋಧಿಸುವಾಗ ಸಮರ್ಪಕ ಅಧ್ಯಯನ ಮಾಡಿರಬೇಕು ಎಂದರು.
ಇಂಗ್ಲಿಷ್ ಸಾಹಿತ್ಯ ಬಹಳ ವಿಸ್ತಾರವಾಗಿದೆ. ಈ ಸಾಹಿತ್ಯದಲ್ಲಿ ಪ್ರಮುಖವಾಗಿ ವಿಮರ್ಶಾತ್ಮಕ, ಸಾಂಸ್ಕೃತಿಕ ಮತ್ತು ಸಾಹಿತ್ತಿಕ ಸಿದ್ಧಾಂತಗಳು ಭಾಷೆಯ ಕುರಿತು ಬೇರೆ ಬೇರೆ ಪರಿಕಲ್ಪನೆಗಳನ್ನು ಒಂದುಗೂಡಿಸುತ್ತದೆ ಎಂದು ಹೇಳಿದರು.ವಸಹಾತು ಶಾಹಿ ಕಾಲದಿಂದಲೂ ಇಂಗ್ಲಿಷ್ ಭಾಷೆ ತನ್ನದೇ ಆದ ವೈಶಿಷ್ಟ್ಯತೆ ಹೊಂದಿದೆ. ಅಲೆಕ್ಸಾಂಡರ್ ತನ್ನ ಕಾಲಾವಧಿಯಲ್ಲಿ ಜ್ಞಾನ ಪಸರಿಸಲು ಗ್ರಂಥಾಲಯ ಸಂಶೋಧನಾ ಕೇಂದ್ರ ಸ್ಥಾಪಿಸಿ ಜ್ಞಾನ ಕೇಂದ್ರವನ್ನಾಗಿಸಿದನು. ಮಧ್ಯಕಾಲೀನ ಇತಿಹಾಸವನ್ನು ಅವಲೋಕಿಸಿದಾಗ ಇರಾಕಿನ ಸಂಶೋಧಕರಿಗೆ ಅಲಜಿಬ್ರಾ ಕಂಡು ಹಿಡಿದ ಕೀರ್ತಿ ಸಲ್ಲುತ್ತದೆ. ಇರಾಕಿ ಸಂಶೋಧಕರು ಒಂದು ಅತ್ಯುನ್ನತ ಇಸ್ಲಾಮಿಕ್ ಸಂಶೋಧನಾ ಕೇಂದ್ರ ಸ್ಥಾಪಿಸಿ ಸಾಹಿತ್ಯ ಭಾಷೆಗೆ ಹೆಚ್ಚು ಒತ್ತು ನೀಡಿದ್ದರು ಎಂದರು.
ಅಧ್ಯಕ್ಷತೆ ವಹಿಸಿದ್ದ ಮಾಳವೀಯ ಮಿಷನ್ ಟೀಚರ್ ಟ್ರೇನಿಂಗ್ ಸೆಂಟರ್ ನಿರ್ದೇಶಕ ಡಾ. ಬಿ.ಎಚ್. ನಾಗೂರ, ಪ್ರಸ್ತುತ ಪುನಶ್ಚೇತನ ಕಾರ್ಯಕ್ರಮವು ಶಿಕ್ಷಕರಲ್ಲಿ ಕೌಶಲ್ಯ ಮತ್ತು ನೈಪುಣ್ಯತೆ ಬೆಳೆಸಲು ಹೆಚ್ಚು ಸಹಾಯಕವಾಗಲಿದೆ. ಆದ್ದರಿಂದ ಎಲ್ಲ ಪ್ರಾಧ್ಯಾಪಕರು ಈ ವಿಶೇಷ ಕಾರ್ಯಾಗಾರವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ದೇಶದ ವಿವಿಧ ವಿಶ್ವವಿದ್ಯಾಲಗಳ ಹದಿನಾರು ಹಿರಿಯ ಇಂಗ್ಲಿಷ್ ಪ್ರಾಧ್ಯಾಪಕರು ಬೋಧನಾ ವಿಧಾನ, ಬ್ರಿಟಿಷ್ ಸಾಹಿತ್ಯ, ಇಂಗ್ಲಿಷ್ ಭಾಷೆಯ ಸಿದ್ಧಾಂತ, ಸಾಂಸ್ಕೃತಿಕ ಸಿದ್ಧಾಂತ, ಮಧ್ಯಕಾಲೀನ ಇಂಗ್ಲಿಷ್ ಸಾಹಿತ್ಯ ಸೇರಿದಂತೆ ಅನೇಕ ವಿಷಯಗಳ ಕುರಿತು ಉಪನ್ಯಾಸ ನೀಡಲಿದ್ದಾರೆ. ಕಾರ್ಯಾಗಾರದಲ್ಲಿ 80 ದೇಶದ ವಿವಿಧ ಕಾಲೇಜು ವಿಶ್ವವಿದ್ಯಾಲಯ ಪ್ರಾಧ್ಯಾಪಕರು ಭಾಗವಹಿಸಿದ್ದರು.
ಪ್ರೊ. ಎನ್.ಎಚ್. ಕಲ್ಲೂರ, ಪ್ರೊ. ಶ್ರೀದೇವಿ ಪಿ.ಜಿ, ಪ್ರೊ. ಶುಭ ಹಿರೇಮಠ, ಡಾ. ವಂದನಾ ವಿ, ಪ್ರೊ. ಸೀಮಾ ಜೈಸ್ವಾಲ್ ಇದ್ದರು.