ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯೋಜನೆ ಅಭಿವೃದ್ಧಿಪಡಿಸಿ: ಎಸ್ಪಿ ನಾರಾಯಣ

| Published : Apr 10 2025, 01:15 AM IST

ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯೋಜನೆ ಅಭಿವೃದ್ಧಿಪಡಿಸಿ: ಎಸ್ಪಿ ನಾರಾಯಣ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಜಲಸಾರಿಗೆ ಮಂಡಳಿಯಿಂದ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವಾಗ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯೋಜನೆಗಳನ್ನು ರೂಪಿಸಿ, ಅಭಿವೃದ್ಧಿಗೊಳಿಸಬೇಕು

ಕಾರವಾರ: ರಾಜ್ಯ ಜಲಸಾರಿಗೆ ಮಂಡಳಿಯಿಂದ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವಾಗ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯೋಜನೆಗಳನ್ನು ರೂಪಿಸಿ, ಅಭಿವೃದ್ಧಿಗೊಳಿಸಬೇಕು ಎಂದು ಎಸ್ಪಿ ಎಂ.ನಾರಾಯಣ ಹೇಳಿದರು.

ನಗರದ ಕರ್ನಾಟಕ ಜಲಸಾರಿಗೆ ಮಂಡಳಿಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಕಚೇರಿ ಆವರಣದಲ್ಲಿ ನಡೆದ 62ನೇ

ರಾಷ್ಟ್ರೀಯ ಜಲಸಾರಿಗೆ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಬಂದರುಗಳ ಅಭಿವೃದ್ಧಿಯಿಂದ ರಾಷ್ಟ್ರದ ಅಭಿವೃದ್ಧಿಯ ಜತೆಗೆ ಸ್ಥಳೀಯರ ಅಭಿವೃದ್ಧಿಯೂ ಸಾಧ್ಯವಾಗಲಿದೆ. ಆದರೆ ಈ ಬಗ್ಗೆ ಯೋಜನೆಗಳನ್ನು ಅನುಷ್ಠಾನ ಮಾಡುವಾಗ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಮನವೊಲಿಸಿ, ಯೋಜನೆಯಿಂದಾಗುವ ಪ್ರಯೋಜಗಳು, ಸಾರ್ವಜನಿರಿಗೆ ದೊರೆಯುವ ನೆರವುಗಳ ಬಗ್ಗೆ ವಿವರವಾಗಿ ತಿಳಿಸಬೇಕು. ಅವರಲ್ಲಿನ ತಪ್ಪು ಕಲ್ಪನೆಗಳನ್ನು ದೂರಗೊಳಿಸಬೇಕು. ಜತೆಗೆ ಅಭಿವೃದ್ಧಿಯಲ್ಲಿ ಅವರನ್ನು ಸಮಾನ ಪಾಲುದಾರರನ್ನಾಗಿ ಮಾಡಬೇಕು ಎಂದರು.

ಕರ್ನಾಟಕ ಬಂದರು ಮಂಡಳಿಯ ಮುಖ್ಯ ಕಾರ್ಯ ನಿರ್ವಣಾಧಿಕಾರಿ ಬಾಲಚಂದ್ರ ಎಚ್.ಸಿ. ಮಾತನಾಡಿ, ಜಲ ಸಾರಿಗೆ ಮಂಡಳಿಯಿಂದ ರಾಜ್ಯದ ಕರಾವಳಿ ಭಾಗದಲ್ಲಿ ಕೇಣಿ, ಹೊನ್ನಾವರ, ಪಾವಿನಕುರ್ವಾ ಮುಂತಾದ ಕಡೆ ಬಂದರುಗಳನ್ನು ನಿರ್ಮಾಣ ಮಾಡುವ ಮೂಲಕ ಕರಾವಳಿ ಪ್ರದೇಶದ ಸಮಗ್ರ ಅಭಿವೃದ್ಧಿಯ ಜತೆಗೆ ಆರ್ಥಿಕತೆಯ ಬೆಳವಣಿಗೆ ಮತ್ತು ಉದ್ಯೋಗವಕಾಶ ಒದಗಿಸುವ ಮೂಲಕ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ದಿ ಮಾಡಲಾಗುತ್ತಿದೆ. ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಕ್ರೂಸ್ ಮತ್ತು ಪ್ರವಾಸೋದ್ಯಮ ಬಂದರು ನಿರ್ಮಾಣವಾಗುತ್ತಿದ್ದು, ಗುರುಪುರ ಮತ್ತು ನೇತ್ರಾವತಿ ದ್ವೀಪ ಸಂಪರ್ಕಿಸುವ ವಾಟರ್ ಮೆಟ್ರೋ ಯೋಜನೆ ಅನುಷ್ಠಾನ ಮಾಡಲಾಗುವುದು ಎಂದು ತಿಳಿಸಿದರು.

ಜಲಸಾರಿಗೆ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಕೋಸ್ಟ್ ಗಾರ್ಡ್ ಕಮಾಂಡೆಂಟ್ ಕಿರಣ್ ಕುಮಾರ್ ಸಿನ್ಹ, ಜಲಸಾರಿಗೆ ಮಂಡಳಿಯ ನಿರ್ದೇಶಕ ಕ್ಯಾ. ಸಿ.ಸ್ವಾಮಿ, ಬಂದರು

ಇಲಾಖೆ ಅಧಿಕಾರಿ ರಾಜಕುಮಾರ್ ಹೆಡೆ, ಮೀನುಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಬೋಪಣ್ಣ, ಗ್ರಾಸಿಮ್ ಇಂಡಸ್ಟ್ರೀಸ್ ನ ಯುನಿಟ್ ಹೆಡ್ ಕುಶ್ ಶರ್ಮಾ, ಜೆಎಸ್‌ಡಬ್ಲ್ಯೂ ಕಂಪೆನಿಯ ರಾಕೇಶ್ ಸಿಸೋಡಿಯಾ ಇದ್ದರು.