ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ಸೋಲು-ಗೆಲುವನ್ನು ಮುಖ್ಯವಾಗಿಸಿಕೊಳ್ಳದೆ ಪ್ರತಿಯೊಬ್ಬರು ಕ್ರೀಡೆಗಳಲ್ಲಿ ಭಾಗವಹಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.ತಾಲೂಕಿನ ಜಯಂತಿ ನಗರದ ಶ್ರೀಶಂಭುಲಿಂಗೇಶ್ವರ ಶಿಕ್ಷಣ ಸಂಸ್ಥೆ ಪದವಿ ಪೂರ್ವ ಕಾಲೇಜಿನ ವತಿಯಿಂದ ಆಯೋಜಿಸಿದ್ದ ರಾಜ್ಯ ಮಟ್ಟದ ಪದವಿ ಪೂರ್ವ ಕಾಲೇಜುಗಳ ಲಾನ್ ಟೆನ್ನಿಸ್ ಪಂದ್ಯಾವಳಿ ಕ್ರೀಡಾ ಕೂಟದಲ್ಲಿ ಮಾತನಾಡಿ, ಕ್ರೀಡೆ ಮಕ್ಕಳನ್ನು ದೈಹಿಕ ಹಾಗೂ ಮಾನಸಿಕ ಸದೃಢಗೊಳಿಸಲು ಸಹಕಾರಿಯಾಗಿದೆ. ಆರೋಗ್ಯಕರ ಜೀವನಕ್ಕಾಗಿ ನಿತ್ಯ ಕ್ರೀಡಾ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದರು.ಶ್ರೀಶಂಭುಲಿಂಗೇಶ್ವರ ಶಿಕ್ಷಣ ಸಂಸ್ಥೆಯೂ ಟೆನ್ನಿಸ್ ಕೋರ್ಟ್ ನಿರ್ಮಿಸಿ ರಾಜ್ಯ ಮಟ್ಟದ ಲಾನ್ ಟೆನ್ನಿಸ್ ಕ್ರೀಡಾಕೂಟ ನಡೆಸುತ್ತಿರುವುದು ಶ್ಲಾಘನೀಯ. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿ ಕ್ರೀಡಾಕೂಟದಲ್ಲಿ ಭಾಗವಹಿಸಿರುವ ಎಲ್ಲಾ ವಿದ್ಯಾರ್ಥಿಗಳಿಗೂ ಶುಭವಾಗಲೆಂದು ಹಾರೈಸಿದರು.
ವಿಧಾನ ಪರಿಷತ್ ಸದಸ್ಯ ವಿವೇಕಾನಂದ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಆನ್ ಲೈನ್ ಗೇಮ್, ಬೆಟ್ಟಿಂಗ್ ನಂತಹ ದುಶ್ಚಟಕ್ಕೆ ಒಳಗಾಗಿ ತಮ್ಮ ಬದುಕನ್ನೇ ನಾಶ ಮಾಡಿಕೊಳ್ಳುತ್ತಿದ್ದಾರೆ. ಇವು ಮಕ್ಕಳ ಮುಂದಿನ ಭವಿಷ್ಯದ ಮೇಲೆ ಸಾಕಷ್ಟು ದುಶ್ಪರಿಣಾಮ ಬೀರಲಿವೆ. ಹಾಗಾಗಿ ಮಕ್ಕಳ ಬಗ್ಗೆ ಪೋಷಕರು ಹೆಚ್ಚು ನಿಗಾವಹಿಸಬೇಕು. ಮಕ್ಕಳು ಶಿಕ್ಷಣದ ಜತೆಗೆ ಕ್ರೀಡಾಚಟುವಟಿಕೆಗಳಲ್ಲೂ ಭಾಗವಹಿಸುವ ಮೂಲಕ ಕ್ರೀಡಾ ಕ್ಷೇತ್ರದಲ್ಲೂ ಸಾಧನೆ ಮಾಡಬೇಕು ಎಂದರು.ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಉಪನಿರ್ದೇಶಕ ಸಿ.ಚಲುವಯ್ಯ ಮಾತನಾಡಿ, ಉತ್ತಮವಾದ ಪರಿಸರದಲ್ಲಿ ಕ್ರೀಡಾಕೂಟ ಆಯೋಜನೆ ಮಾಡಿದ್ದಾರೆ. ಭಾಗವಹಿಸಿರುವ ಎಲ್ಲಾ ವಿದ್ಯಾರ್ಥಿಗಳು ಸಮಾನ ಮನಸ್ಥಿತಿಯಿಂದ ಸೋಲು ಗೆಲುವು ಎರಡನ್ನು ಸ್ವೀಕರಿಸಬೇಕು. ತೀರ್ಪುಗಾರರು ನೀಡುವ ತೀರ್ಮಾನಕ್ಕೆ ಬದ್ಧರಾಗಬೇಕು ಎಂದರು.
ಕ್ರೀಡಾಕೂಟದಲ್ಲಿ ರಾಜ್ಯದ ಎಂಟು ಜಿಲ್ಲೆಗಳಿಂದ ಕ್ರೀಡಾಪಟುಗಳು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಅಂತಾರಾಷ್ಟ್ರಿಯ ಶ್ರೇಯಾಂಕಿ ಟೆನ್ನಿಸ್ ಆಟಗಾರ ಆರ್.ನಾಗರಾಜು ಪರಿವಾಳ ಹಾರಿ ಬಿಡುವ ಮೂಲಕ ಚಾಲನೆ ನೀಡಿದರು.ಸಮಾರಂಭದಲ್ಲಿ ತಹಸೀಲ್ದಾರ್ ಎಸ್.ಸಂತೋಷ್, ಎಸ್‌ಎಸ್‌ಇಟಿ ಅಧ್ಯಕ್ಷ ಪಿ.ಹೊನ್ನರಾಜು, ಉಪಾಧ್ಯಕ್ಷ ಪ್ರೊ.ಎಂ. ಪಂಚಲಿಂಗೇಗೌಡ, ಮನ್ಮುಲ್ ನಿದೇರ್ಶಕ ಕಾಡೇನಹಳ್ಳಿ ರಾಮಚಂದ್ರು, ಕೆನ್ನಾಳು ಗ್ರಾಪಂ ಅಧ್ಯಕ್ಷ ಪ್ರಕಾಶ್, ಬಿಇಒ ರವಿಕುಮಾರ್, ಡಾ.ಅರವಿಂದ್, ಉಪಾನ್ಯಾಸಕರಾದ ರಾಮಕೃಷ್ಣೇಗೌಡ, ಕೆ.ಕುಬೇರ್, ಬಿ.ಜೆ.ಸ್ವಾಮಿ, ಕಾರ್ಯದರ್ಶಿ ಪಿ.ಅಕ್ಷಯ್, ಪಿ.ಧನರಾಜ್, ಪ್ರಾಂಶುಪಾಲೆ ಆರ್.ವಿ.ಸೌಮ್ಯ, ಹಾಗೂ ಸಂಸ್ಥೆ ಉಪಾನ್ಯಾಸಕರು ಹಾಜರಿದರು.